ಬೋಧಪ್ರದವಾಗಿಲ್ಲದ ಸಿನಿಮಾ-ಧಾರಾವಾಹಿ: ಹಿರಿಯ ಸಾಹಿತಿ ಡಾ. ಸಿ.ಪಿ. ಕೃಷ್ಣಕುಮಾರ್ ಬೇಸರ

ನಗರದ ದಕ್ಷ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಡಾ.ಸಿಪಿಕೆ ಅವರನ್ನು ಸನ್ಮಾನಿಸಲಾಯಿತು. ಟಿ.ಸತೀಶ್ ಜವರೇಗೌಡ, ಎಸ್. ಅಕ್ಬರ್ ಪಾಷ, ಡಾ.ಗುಣವಂತ ಮಂಜು, ಡಾ.ಪಿ. ಜಯಚಂದ್ರರಾಜು, ನಾಗರಾಜು ವಿ. ಬೈರಿ, ಬಿ.ಆರ್. ಹಿರೇಮಠ, ಜಯಂತಿ ಭಟ್, ಭೂಮಿಕಾ ಇತರರು ಇದ್ದರು.
ನಗರದ ದಕ್ಷ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಡಾ.ಸಿಪಿಕೆ ಅವರನ್ನು ಸನ್ಮಾನಿಸಲಾಯಿತು. ಟಿ.ಸತೀಶ್ ಜವರೇಗೌಡ, ಎಸ್. ಅಕ್ಬರ್ ಪಾಷ, ಡಾ.ಗುಣವಂತ ಮಂಜು, ಡಾ.ಪಿ. ಜಯಚಂದ್ರರಾಜು, ನಾಗರಾಜು ವಿ. ಬೈರಿ, ಬಿ.ಆರ್. ಹಿರೇಮಠ, ಜಯಂತಿ ಭಟ್, ಭೂಮಿಕಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಉತ್ತಮ ಕಿರುಚಿತ್ರಗಳನ್ನು, ಸಾಹಿತ್ಯಕ ವಿಚಾರ, ಕಲೆ, ಸಂಗೀತ ಇನ್ನಿತರ ಪ್ರಕಾರಗಳನ್ನು ಮುಟ್ಟಿಸುವ ಕೆಲಸವಾಗಬೇಕು
  • ಸಾಹಿತ್ಯಕ ವಿಚಾರ, ಕಲೆ, ಸಂಗೀತ ಇನ್ನಿತರ ಪ್ರಕಾರಗಳನ್ನು ಮುಟ್ಟಿಸುವ ಕೆಲಸವಾಗಬೇಕು
ಮೈಸೂರು:ಜೀವನ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಕಲಾ ಪ್ರಕಾರಗಳನ್ನು ಕಲಿಸಿಕೊಡುವ ಅಗತ್ಯವಿದೆ ಎಂದು ಪಂಪ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಸಿ.ಪಿ. ಕೃಷ್ಣಕುಮಾರ್ (ಸಿಪಿಕೆ) ಸಲಹೆ ನೀಡಿದರು.
ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಗ್ಲೋಬಲ್ ಎಜುಕೇಷನ್ ಟ್ರಸ್ಟ್‌ನಿಂದ ನಗರದ ಹೂಟಗಳ್ಳಿಯಲ್ಲಿರುವ ದಕ್ಷ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆ’ ಕುರಿತು ವಿಚಾರಗೋಷ್ಠಿ, ಕಿರುಚಿತ್ರ ಪ್ರದರ್ಶನ, ‘ನಾಡಕೀರ್ತಿ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಉತ್ತಮ ಕಿರುಚಿತ್ರಗಳನ್ನು, ಸಾಹಿತ್ಯಕ ವಿಚಾರ, ಕಲೆ, ಸಂಗೀತ ಇನ್ನಿತರ ಪ್ರಕಾರಗಳನ್ನು ಮುಟ್ಟಿಸುವ ಕೆಲಸವಾಗಬೇಕು. ಅದಕ್ಕಾಗಿ ಎಲ್ಲ ಪ್ರಕಾರಗಳನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸಬೇಕು ಎಂದು ಹೇಳಿದರು.
ಸಮಾಜದಲ್ಲಿ ಸಾಧಕ ಗುಣವಂತರನ್ನು ಗುರುತಿಸುವ ಕಾರ್ಯವಾಗಬೇಕು. ಇಂದು ನಾಡಿನ ಉದ್ದಗಲ ಪ್ರಶಸ್ತಿ ಮತ್ತು ಸನ್ಮಾನಗಳ ಮಹಾಪೂರವೇ ಕಂಡು ಬರುತ್ತಿದೆ. ಸಾಧಕರಿಗೆ ಇವೆಲ್ಲ ಸಾರ್ಥಕ ಗೌರವವಾಗಿದ್ದು, ಇದು ಉತ್ತಮ ಬೆಳವಣಿಗೆ ಎಂದರು.
ನಾವು ನಮ್ಮ ಕ್ಷೇತ್ರದಲ್ಲಿ ಬೇಕಾದಷ್ಟು ಕೆಲಸಗಳನ್ನು ಮಾಡಿದ್ದೇವೆ. ನಮಗೆ ಪ್ರಶಸ್ತಿ ಸಿಗಲೇಬೇಕು ಎಂದು ಹೇಳುವುದು ಒಂದು ಬಗೆಯ ಅಹಂಕಾರವಾದರೆ, ಸಾಧನೆ ಗುರುತಿಸಿ ನೀಡುವ ಪ್ರಶಸ್ತಿಗಳನ್ನು ನಿರಾಕರಿಸುವುದು ಬಹದೊಡ್ಡ ಅಹಂಕಾರ ಆಗುತ್ತದೆ. ನಾನು ಎರಡು ಬಗೆಯ ಅಹಂಕಾರಗಳಿಗೂ ಪಾತ್ರನಾಗಿರುವೆ. ಒಟ್ಟಾರೆ ಪ್ರಶಸ್ತಿಗಳು ಸಾಧಕರಿಗೆ ಉತ್ತೇಜನಕಾರಿ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ಕಲಾ ಮಾಧ್ಯಮ ರಂಜನೆಗಷ್ಟೇ ಸೀಮಿತವಾಗಬಾರದು. ಅದು ಸಮಾಜಕ್ಕೆ ಬೋಧನೆಯನ್ನೂ ಮಾಡಬೇಕು. ನಾಟಕ, ಚಲನಚಿತ್ರ, ಧಾರವಾಹಿಗಳು ರಂಜನೆಯ ಜತೆಗೆ ಸಾಮಾಜಿಕ ಸಂದೇಶವನ್ನೂ ನೀಡಿದಾಗ ಮಾತ್ರ ಕಲಾ ಮಾಧ್ಯಮ ತನ್ನ ಸಾರ್ಥಕತೆ ಪಡೆಯಲು ಸಾಧ್ಯ ಎಂದರು.
ಇಂದು ಇಡೀ ಕಲಾ ಮಾಧ್ಯಮ ಸಂಪೂರ್ಣ ‘ವಾಣಿಜ್ಯೀಕರಣ’ಗೊಂಡಿದೆ. ಸಿನಿಮಾ, ಧಾರಾವಾಹಿ, ನಾಟಕಗಳು ‘ಬೋಧಪ್ರದ’ವಾಗಿಲ್ಲ. ಬಂಡವಾಳ ಹೂಡಿಕೆ ಮಾಡಿ, ಯಥೇಚ್ಛವಾದ ಲಾಭವನ್ನು ದೋಚುವುದಕಷ್ಟೇ ಸೀಮಿತವಾಗಿವೆ. ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ, ಅವರಲ್ಲಿ ಜೀವನ ಮೌಲ್ಯಗಳನ್ನು ಬೆಳೆಸುವ ಕಾರ್ಯ ಮಾಡತ್ತಿಲ್ಲ ಎಂದು ವಿಷಾದಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗರಾಜು ವಿ. ಬೈರಿ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸಾಹಿತಿ ಎಸ್. ಅಕ್ಬರ್‌ಪಾಷ ಅಧ್ಯಕ್ಷತೆ ವಹಿಸಿದ್ದರು. ಅಬಕಾರಿ ಇಲಾಖೆಯ ಮಂಡ್ಯ ಜಿಲ್ಲಾ ಉಪ ಆಯುಕ್ತ ಬಿ.ಆರ್. ಹಿರೇಮಠ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ದಕ್ಷ ಕಾಲೇಜಿನ ವಿದ್ಯಾರ್ಥಿಗಳಾದ ಆರ್. ತಾರುಣ್ಯ, ಕೆ.ಎನ್. ದಕ್ಷಂತ, ರಕ್ಷಾ ಹಾಗೂ ಕೆ.ಎಸ್. ವಿಸ್ಮಯ ‘ಕೃತಕ ಬುದ್ಧಿಮತ್ತೆ’ ಕುರಿತು ವಿಚಾರ ಮಂಡಿಸಿದರು.
ಇದೇ ಸಂದರ್ಭದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತ ಡಾ.ಸಿ.ಪಿ.ಕೃಷ್ಣಕುಮಾರ್, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ದಕ್ಷ ಕಾಲೇಜಿನ ಅಧ್ಯಕ್ಷ ಡಾ.ಪಿ. ಜಯಚಂದ್ರರಾಜು ಅವರಿಗೆ ’ನಾಡಕೀರ್ತಿ ಪ್ರಶಸ್ತಿ’, ಸಾಹಿತಿ ಟಿ. ಸತೀಶ್ ಜವರೇಗೌಡ ಅವರಿಗೆ ‘ಕನ್ನಡ ರತ್ನ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ಅಲ್ಲದೆ ವಿವಿಧ ಕ್ಷೇತ್ರದ ಸಾಧಕ ಮಹಿಳೆಯರಿಗೆ ‘ನಾರಿಶಕ್ತಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಗುಣವಂತ ಮಂಜು ನಿರ್ದೇಶನದ ‘ಅನುರಾಗ’ ಕಿರುಚಿತ್ರದ ಪ್ರದರ್ಶನ ಮಾಡಲಾಯಿತು.
ಕೆ.ಆರ್. ನಗರ ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಕೆ.ಎಸ್. ಸತೀಶ್ ಕುಮಾರ್, ಚಲನಚಿತ್ರ ನಟಿ ಭೂಮಿಕಾ, ಗಾಯಕಿ ಜಯಂತಿ ಭಟ್, ಸಮಾಜ ಸೇವಕ ಎಸ್. ಕಣ್ಣನ್, ಪ್ರಗತಿಪರ ರೈತ ಪುಟ್ಟಸ್ವಾಮಿಗೌಡ, ದಕ್ಷ ಕಾಲೇಜಿನ ಕಾರ್ಯದರ್ಶಿ ಸೋನಿಯಾ ಉಮಾಪತಿ, ಪ್ರಾಂಶುಪಾಲ ಎಂ. ಅಭಿಷೇಕ್, ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಗುಣವಂತ ಮಂಜು, ನಿವೃತ್ತ ಮುಖ್ಯ ಶಿಕ್ಷಕ ಗೌಡಯ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net