30 ಸಾವಿರ ಮುದ್ದುರಾಮ ಚೌಪದಿ ರಚನೆ : ಕೆ.ಸಿ.ಶಿವಪ್ಪ ಸಾಹಿತ್ಯ ಸಾಧನೆಗೆ ಟಿ.ವಿ. ವೆಂಕಟಾಚಲಶಾಸ್ತ್ರಿ ಮೆಚ್ಚುಗೆ
ಮೈಸೂರು ನಗರದ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಣದಲ್ಲಿ ಬುಧವಾರ ಆಯೋಜಿಸಿದ್ದ ‘ಕೆಸಿಎಸ್ ಕಾವ್ಯ ಕುತೂಹಲ ವಿಚಾರ ಸಂಕಿರಣ’ವನ್ನು ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ ಉದ್ಘಾಟಿಸಿದರು. ಡಾ.ಎನ್.ಕೆ. ಲೋಲಾಕ್ಷಿ, ಪ್ರೊ.ಎಂ. ಕೃಷ್ಣೇಗೌಡ, ಎನ್. ರಾಮಾನುಜ, ಡಾ.ನೀಲಗಿರಿ ತಳವಾರ, ಕೆ.ಸಿ. ಶಿವಪ್ಪ, ಡಾ. ಪದ್ಮಾಶೇಖರ್, ಡಾ.ಎಚ್.ವಿ. ನಾಗರಾಜ ರಾವ್ ಹಾಗೂ ಇತರರು ಇದ್ದರು.
Published on:
Copied
Follow Us
ಮೈಸೂರು: ಸಾಮಾನ್ಯವಾಗಿ 300 ಚೌಪದಿ ಬರೆಯುವಷ್ಟರೊಳಗೆ ಸುಸ್ತಾಗಿ ಹೋಗುತ್ತದೆ. ಆದರೆ, ಕವಿ ಕೆ.ಸಿ.ಶಿವಪ್ಪ 30 ಸಾವಿರಕ್ಕೂ ಹೆಚ್ಚು ‘ಮುದ್ದುರಾಮ ಚೌಪದಿ’ ರಚಿಸಿರುವುದು ಹೆಮ್ಮೆಯ ವಿಚಾರ ಎಂದು ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ ಹೇಳಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ ವತಿಯಿಂದ ಮುದ್ದುರಾಮ ಬಳಗದ ಸಹಯೋಗದೊಂದಿಗೆ ನಗರದ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಣದಲ್ಲಿ ಬುಧವಾರ ಆಯೋಜಿಸಿದ್ದ ‘ಕೆಸಿಎಸ್ ಕಾವ್ಯ ಕುತೂಹಲ ವಿಚಾರ ಸಂಕಿರಣ’ವನ್ನು ಉದ್ಘಾಟಿಸಿ ಮಾತನಾಡಿ, ಶಿವಪ್ಪ ಅವರ ಸಾಹಿತ್ಯ ಸಮೃದ್ಧವಾಗಿದೆ. ಇವರ ಸಾಹಿತ್ಯ ಸರಳ, ಸಲೀಸಾಗಿದೆ ಎಂದು ಹೇಳಿದರು.
ಕುವೆಂಪು, ದಿನಕರ ದೇಸಾಯಿ, ತಿ.ನಂ. ಶ್ರೀಕಂಠಯ್ಯ ಸೇರಿದಂತೆ ಹಲವಾರು ಮಹನೀಯರು ಮುಕ್ತಕದ ಮನೋಜ್ಞತೆಗೆ ಮಾರು ಹೋಗಿದ್ದಾರೆ. ಮುಕ್ತಕ ಪರಂಪರೆಯನ್ನು ಇದೀಗ ಶಿವಪ್ಪ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಶಿವಪ್ಪ ಅವರು ಹಿರಿಯ ಸಾಹಿತಿಗಳ, ಕಲಾವಿದರ ಸಂಪರ್ಕ, ಸ್ನೇಹವನ್ನು ಉಳ್ಳವರಾಗಿದ್ದರು. ಅವರ ಸಾಹಿತ್ಯದ ಸಂಬಂಧದಲ್ಲಿ ಕವಿತೆಗಳು, ವಿಚಾರ ವಿಮರ್ಶೆಗಳು, ಮುಕ್ತಕಗಳ ಮಂಜರಿಗಳು ಸಾಕಷ್ಟು ಸಮೃದ್ಧ ಮೂಡಿಬಂದಿದೆ ಎಂದರು.
ಇಂದಿನ ಯುವ ಪೀಳಿಗೆ ಮಾಸ್ತಿ, ಡಿವಿಜಿ ಸೇರಿದಂತೆ ದೊಡ್ಡ ಸಾಹಿತಿಗಳ ಬಗ್ಗೆ ಕೇಳಿರುತ್ತಾರೆ ಹೊರತು ಅವರನ್ನು ಅರಿಯುವ ಕೆಲಸ ಮಾಡಿರುವುದಿಲ್ಲ. ಯುವಜನರು ಸಾಹಿತಿಗಳ ಬಗ್ಗೆ ಓದುವ ಮೂಲಕ ಅವರನ್ನು ಅರಿತುಕೊಳ್ಳಬೇಕು. ನಮಗೆ ಹಿರಿಯ ಸಾಹಿತಿಗಳನ್ನು ನೋಡುವ ಹಾಗೂ ಅವರ ಸಾಹಿತ್ಯ ಓದುವ ಭಾಗ್ಯ ದೊರೆಯಿತು, ಈ ವಿಚಾರದಲ್ಲಿ ನಾವು ಪುಣ್ಯವಂತರು ಎಂದು ಹೇಳಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ಎನ್.ಕೆ.ಲೋಲಾಕ್ಷಿ ಮಾತನಾಡಿ, ನಮ್ಮ ಮನಸ್ಸುಗಳು ಯಾವಾಗ ಸ್ವಚ್ಛ ಹಾಗೂ ಸರಳವಾಗಿರುತ್ತದೋ ಆಗ ಮಾತ್ರ ಸ್ವಚ್ಛವಾದ ಸಾಹಿತ್ಯ ರಚಿಸಲು ಸಾಧ್ಯ. ಯಾವುದು ಬೇಡ ಹಾಗೂ ಯಾವುದು ಬೇಕು ಎಂಬ ಎಚ್ಚರಿಕೆಯಿಂದಲೇ ಶಿವಪ್ಪ ಸಾಹಿತ್ಯ ರಚಿಸಿದ್ದು, ಅವರದ್ದು ಸ್ವಚ್ಛವಾದ ಸಾಹಿತ್ಯ. ಮುದ್ದುರಾಮ ಕಾವ್ಯದ ಮೂಲಕ ಶಿವಪ್ಪ ಅವರು ಜಗತ್ತನ್ನು ಪ್ರೀತಿಸಿದ್ದಾರೆ, ತಿದ್ದಿದ್ದಾರೆ ಎಂದು ಹೇಳಿದರು.
ಮಹಿಳೆಯರು, ಮಕ್ಕಳು ಹಾಗೂ ಯುವಜನರ ಕುರಿತು ಸಹ ಶಿವಪ್ಪ ಚೌಪದಿ ರಚಿಸಿದ್ದಾರೆ. ಜೀವನ ಹೇಗಿರಬೇಕು? ಮಾನವೀಯ ಮೌಲ್ಯಗಳನ್ನು ಯಾವ ರೀತಿ ಅಳವಡಿಸಿಕೊಳ್ಳಬೇಕು ಎಂಬ ಅಂಶಗಳನ್ನು ಅವರ ಕಾವ್ಯ ತೆರೆದಿಡುತ್ತದೆ. ಅವರು ಕಾವ್ಯದ ಮೂಲಕ ಸಮಾಜವನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಎಚ್‌ಟಿಎಂ ನಿವೃತ್ತ ಅಧ್ಯಕ್ಷ ಎನ್. ರಾಮಾನುಜ, ಮುದ್ದುರಾಮ ಪ್ರತಿಷ್ಠಾನ ಉಪಾಧ್ಯಕ್ಷ ಡಾ.ನೀಲಗಿರಿ ತಳವಾರ ಇದ್ದರು.