ನ್ಯಾಯಕ್ಕಾಗಿ ಗಿರಿಜನರಿಂದ ಪ್ರತಿಭಟನೆ

ಹುಣಸೂರು ನಗರದ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಕಚೇರಿ ಮುಂಭಾಗ ಡಿಬಿ.ಕುಪ್ಪೆ ಗ್ರಾ.ಪಂ.ವ್ಯಾಪ್ತಿಯ ಗಿರಿಜನರು ಪ್ರತಿಭಟನೆ ನಡೆಸಿದರು. ಶೈಲೇಂದ್ರ, ಸುಬ್ರಹ್ಮಣ್ಯ, ಮಣಿ, ಸರಸು, ಜಯಲಲಿತಾ ಇತರರಿದ್ದಾರೆ.
ಹುಣಸೂರು ನಗರದ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಕಚೇರಿ ಮುಂಭಾಗ ಡಿಬಿ.ಕುಪ್ಪೆ ಗ್ರಾ.ಪಂ.ವ್ಯಾಪ್ತಿಯ ಗಿರಿಜನರು ಪ್ರತಿಭಟನೆ ನಡೆಸಿದರು. ಶೈಲೇಂದ್ರ, ಸುಬ್ರಹ್ಮಣ್ಯ, ಮಣಿ, ಸರಸು, ಜಯಲಲಿತಾ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಹಕ್ಕುಗಳಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಪುರಸ್ಕರಿಸಲು ಒತ್ತಾಯ
  • ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವಂತೆ ಆಗ್ರಹ
ಹುಣಸೂರು : ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವೈಯಕ್ತಿಕ ಹಕ್ಕಿಗಾಗಿ 371 ಕುಟುಂಬಗಳು ಸಲ್ಲಿಸಿರುವ ಅರ್ಜಿಯನ್ನು ಜಿಲ್ಲಾಮಟ್ಟದ ಅರಣ್ಯ ಹಕ್ಕು ಸಮಿತಿ ಶೀಘ್ರ ಪುರಸ್ಕರಿಸಬೇಕೆಂದು ಆಗ್ರಹಿಸಿ ಅರ್ಜಿದಾರ ಕುಟುಂಬಗಳು ಹುಣಸೂರು ನಗರದ ಅರಣ್ಯ ಇಲಾಖೆ(ವನ್ಯಜೀವಿ ವಿಭಾಗ) ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಶುಕ್ರವಾರ ಅರಣ್ಯ ಇಲಾಖೆ ಕಚೇರಿ ಮುಂಭಾಗ ಜಮಾವಣೆಗೊಂಡ 300ಕ್ಕೂ ಹೆಚ್ಚು ಗಿರಿಜನ ಮತ್ತು ಪರಿಶಿಷ್ಟ ಪಂಗಡ(ಬೇಡ ಸಮುದಾಯ)ದ ಕುಟುಂಬದ ಸದಸ್ಯರು ನ್ಯಾಯಕ್ಕಾಗಿ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಗಿರಿಜನ ಮುಖಂಡ ಶೈಲೇಂದ್ರ, ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 26 ಗ್ರಾಮಗಳು ಮತ್ತು ಹಾಡಿಗಳು ಇದ್ದು, 711 ಕುಟುಂಬಗಳು ಹಾಲಿ ಇವೆ. ತಲೆಮಾರುಗಳಿಂದ ಈ ಕುಟುಂಬಗಳು ನಾಗರಹೊಳೆ ಉದ್ಯಾನವನದಲ್ಲೇ ತಮ್ಮ ಜೀವನವನ್ನು ಕಂಡುಕೊಂಡಿವೆ. ತಾವು ಅನುಭೋಗಿಸುತ್ತಿರುವ ಭೂಮಿಯ ಹಕ್ಕಿಗಾಗಿ ದಶಕಗಳಿಂದ ಹೋರಾಟ ನಡೆಸಿವೆ. ವೈಯಕ್ತಿಕ ಮತ್ತು ಸಾಮೂಹಿಕ ಹಕ್ಕಿಗಾಗಿ ಸರ್ಕಾರದ ಮೊರೆ ಹೋಗಿವೆ. ಮೂರು ವರ್ಷಗಳ ಹಿಂದೆ ಗ್ರಾಮ ವ್ಯಾಪ್ತಿಯ 244 ಜನರು ಅರ್ಜಿದಾರರಿಗೆ ಜಿಲ್ಲಾ ಅರಣ್ಯ ಹಕ್ಕು ಸಮಿತಿ ಶಿಫಾರಸ್ಸಿನಂತೆ ವೈಯಕ್ತಿಕ ಹಕ್ಕು ಪತ್ರ ವಿತರಿಸಲಾಗಿದೆ. ಆದರೆ ಬಾಕಿ ಉಳಿದ 371 ಕುಟುಂಬಗಳ ಅರ್ಜಿಯನ್ನು ಅರಣ್ಯ ಇಲಾಖೆ ಅರ್ಜಿದಾರರು ಸಲ್ಲಿಸಿರುವ ದಾಖಲೆಗಳ ಪೈಕಿ ವಂಶವೃಕ್ಷ ಸಲ್ಲಿಸಿಲ್ಲವೆಂಬ ನೆಪವೊಡ್ಡಿ ಹಕ್ಕು ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಇದರಿಂದ ದಶಕಗಳಿಂದ ವೈಯಕ್ತಿಕ ಹಕ್ಕಿಗಾಗಿ ಕಾದು ಕುಳಿತ ಕುಟುಂಬಗಳು ನಿರಾಸೆಗೊಂಡಿವೆ. ಜಿಲ್ಲಾಡಳಿತ ಗಿರಿಜನರ ಕುರಿತಾಗಿ ಯಾವುದೇ ತಾರತಮ್ಯವೆಸಗದೆ ಶೀಘ್ರ ಹಕ್ಕುಪತ್ರ ವಿತರಿಸಬೇಕೆಂದು ಆಗ್ರಹಿಸಿದರು.
ಡಿ.ಬಿ.ಕುಪ್ಪೆ ಗ್ರಾ.ಪಂ.ಅಧ್ಯಕ್ಷ ಸುಬ್ರಹ್ಮಣ್ಯ ಸ್ವಾಮಿ ಮಾತನಾಡಿ, ನಮ್ಮ ಗ್ರಾ.ಪಂ.ವ್ಯಾಪ್ತಿಯ 244 ಅರ್ಜಿದಾರರಿಗೆ ಈ ಹಿಂದಿನ ಡಿಸಿಎಫ್ ಹರ್ಷಕುಮರ್ ಚಿಕ್ಕನರಗುಂದ ನೇತೃತ್ವದ ಸಮಿತಿ ವೈಯಕ್ತಿಕ ಹಕ್ಕು ವಿತರಿಸಿದೆ. ಅದೇ ಗ್ರಾಮದ ಉಳಿದವರು ಮಾತ್ರ ಅಲ್ಲಿನ ನಿವಾಸಿಗಳಲ್ಲ ಎನ್ನುವ ಈಗಿನ ಅಧಿಕಾರಗಳ ವಾದ ಹಾಸ್ಯಾಸ್ಪದ. 2-3 ತಲೆಮಾರುಗಳಿಂದ ವಾಸಿಸುತ್ತಿರುವ 1914ರಲ್ಲಿ ಸರ್ಕಾರಕ್ಕೆ ತಾವಿರುವ ಭೂಮಿಯ ಕಂದಾಯ ಕಟ್ಟಿರುವ ರಸೀದಿಯನ್ನು ಕೂಡ ನಿವಾಸಿಗಳು ಹೊಂದಿದ್ದಾರೆ. ಕಾಡಿನ ಸಂರಕ್ಷಣೆಯಲ್ಲಿ ತಮ್ಮದೇ ಪಾತ್ರವನ್ನು ನಿರ್ವಹಿಸುವ ಮೂಲಕ ಅರಣ್ಯ ರಕ್ಷಕರಾಗಿ ದುಡಿಯುತ್ತಿದ್ದಾರೆ. ಹೀಗಿದ್ದೂ ಅರ್ಜಿಗಳನ್ನು ಮಾನ್ಯ ಮಾಡದಿರುವುದು ನಿವಾಸಿಗಳಲ್ಲಿ ಸಂದೇಹಕ್ಕೆ ಎಡೆಯುಂಟು ಮಾಡಿದೆ ಎಂದು ಬೇಸರಿಸಿದರು.
ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯರಾದ ಪುರುಷೋತ್ತಮ್, ಮಣಿ ಮುಂತಾದವರು ಮಾತನಾಡಿ, ಡಿ.ಬಿ.ಕುಪ್ಪೆ ಗ್ರಾ.ಪಂ.ವ್ಯಾಪ್ತಿಯಲ್ಲಿ 4 ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಿರುವ ಜಿಲ್ಲಾಡಳಿತಕ್ಕೆ ಈ ಸಂದರ್ಭದಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ಅಡ್ಡಿಯುಂಟು ಮಾಡಿಲ್ಲ. ಆದರೆ ಈ ಮಣ್ಣಿನಲ್ಲಿಯೇ ಬಾಳಿ ಬದುಕಿ, ಅರಣ್ಯವನ್ನು ಕಾಪಾಡುತ್ತಿರುವ ನಮಗೆ ವೈಯಕ್ತಿಕ ಹಕ್ಕು ನೀಡುವಲ್ಲಿ ಮಾತ್ರ ದಾಖಲೆಗಳು ಸರಿಯಾಗಿಲ್ಲವೆನ್ನುತ್ತಿರುವುದು ಖಂಡನೀಯ. ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವ ಮೂಲಕ ಬಡಜನರಿಗೆ ನೆರವಾಗಬೇಕು. ನಮ್ಮ ನೆಲಸುಗಳು, ತಲೆಮಾರು ಎಲ್ಲವೂ ಅಲ್ಲಿಯೇ ಇರುವುದು ಸುಳ್ಳು ಎನ್ನುವ ಭಾವನೆ ಸರಿಯಲ್ಲ. ಜಿಲ್ಲಾಡಳಿತ ಈ ಕೂಡಲೇ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ವನ್ಯಜೀವಿ ವಿಭಾಗ ಕಚೇರಿ ವ್ಯವಸ್ಥಾಪಕ ಬಾಬು ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಶ್ರೀನಿವಾಸ್, ದೇವರಸೇಗೌಡ, ಮಾರ, ಶ್ರೀನಿವಾಸ್, ಸರಸು, ಜಯಲಲಿತಾ, ಶಾರದ, ಲಕ್ಷ್ಮಮ್ಮ, ದೇವಮ್ಮ, ವೆಂಕಮ್ಮ ಸೇರಿದಂತೆ ಹಾಡಿ ಅರಣ್ಯ ಹಕ್ಕು ಸಮಿತಿ ಮತ್ತು ಗ್ರಾಮ ಅರಣ್ಯ ಹಕ್ಕು ಸಮಿತಿ ಸದಸ್ಯರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net