1 ಕೋಟಿ ಗ್ರಂಥಾಲಯ ಆರಂಭಿಸುವ ಚಿಂತನೆ

ಮನೆಗೊಂದು ಗ್ರಂಥಾಲಯ ಯೋಜನೆಯಡಿಯಲ್ಲಿ ಹಿರಿಯ ಸಾಹಿತಿ ಡಾ.ಅಮ್ಮಸಂದ್ರ ಸುರೇಶ್ ಅವರ ಮನೆಯಲ್ಲಿ ಗ್ರಂಥಾಲಯವನ್ನು ಉದ್ಘಾಟಿಸಲಾಯಿತು. ಮಾನಸ, ಎಂ.ಚಂದ್ರಶೇಖರ್, ಡಾ. ಪ್ರಸನ್ನ  ಸಂತೆಕಡೂರು, ಕನ್ನಡ ಪ್ರಮೋದ್ ಇದ್ದರು.
ಮನೆಗೊಂದು ಗ್ರಂಥಾಲಯ ಯೋಜನೆಯಡಿಯಲ್ಲಿ ಹಿರಿಯ ಸಾಹಿತಿ ಡಾ.ಅಮ್ಮಸಂದ್ರ ಸುರೇಶ್ ಅವರ ಮನೆಯಲ್ಲಿ ಗ್ರಂಥಾಲಯವನ್ನು ಉದ್ಘಾಟಿಸಲಾಯಿತು. ಮಾನಸ, ಎಂ.ಚಂದ್ರಶೇಖರ್, ಡಾ. ಪ್ರಸನ್ನ ಸಂತೆಕಡೂರು, ಕನ್ನಡ ಪ್ರಮೋದ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮಾಹಿತಿ
ಪುಸ್ತಕಗಳನ್ನು ಕೊಳ್ಳುವ, ಓದುವ ಮತ್ತು ಸಂಗ್ರಹಿಸುವ ಪ್ರವೃತ್ತಿ ಪ್ರತಿಯೊಬ್ಬರಲ್ಲೂ ಬೆಳೆಯಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.
ಹಿರಿಯ ಸಾಹಿತಿ ಡಾ. ಅಮ್ಮಸಂದ್ರ ಸುರೇಶ್ ಅವರ ಮನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಓದುವ ಹವ್ಯಾಸವನ್ನು ಹೆಚ್ಚಿಸಿ ಪುಸ್ತಕ ಸಂಸ್ಕೃತಿಯನ್ನು ಹರಡುವುದೇ ಮನೆಗೊಂದು ಗ್ರಂಥಾಲಯ ಯೋಜನೆಯ ಉದ್ದೇಶವಾಗಿದೆ ಎಂದರು.
ರಾಜ್ಯಾದ್ಯಂತ ಮನೆಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸುಮಾರು ಒಂದು ಕೋಟಿ ಗ್ರಂಥಾಲಯಗಳನ್ನು ಆರಂಭಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಈಗಾಗಲೇ ಸುಮಾರು 36 ಸಾವಿರ ಗ್ರಂಥಾಲಯಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ತಿಳಿಸಿದ ಅವರು ಪ್ರತಿಯೊಬ್ಬರಲ್ಲೂ ಪುಸ್ತಕಗಳನ್ನು ಖರೀದಿ ಮಾಡಿ ಓದುವ ಹವ್ಯಾಸ ಮತ್ತು ಪುಸ್ತಕಗಳನ್ನು ಸಂಗ್ರಹಿಸಿಡುವ ಹವ್ಯಾಸವನ್ನು ಈ ಯೋಜನೆಯ ಮೂಲಕ ಈಡೇರಿಸುವ ಆಶಯವನ್ನು ಹೊಂದಿರುವುದಾಗಿ ತಿಳಿಸಿದರು.
ಮನಗೊಂದು ಗ್ರಂಥಾಲಯ ಯೋಜನೆಯ ಜಿಲ್ಲಾ ಜಾಗೃತ ಸಮಿತಿಯ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಮನೆಗೊಂದು ಗ್ರಂಥಾಲಯ ಯೋಜನೆಯಡಿಯಲ್ಲಿ ಮೈಸೂರು ನಗರದಲ್ಲಿ ಈಗಾಗಲೇ ಹಲವು ನಾಗರಿಕರು ತಮ್ಮ ಮನೆಗಳಲ್ಲಿ ಗ್ರಂಥಾಲಯಗಳನ್ನು ಆರಂಭಿಸಿದ್ದಾರೆ. ಈ ಯೋಜನೆಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಮಕ್ಕಳು ಮತ್ತು ಯುವಕರಲ್ಲಿ ಓದುವ ಹವ್ಯಾಸ ತುಂಬ ಕುಸಿಯುತ್ತಿದ್ದು ಈ ಯೋಜನೆಯ ಮೂಲಕ ಪುಸ್ತಕಗಳ ಮಹತ್ವವನ್ನು ಮನೆಮನೆಗೂ ತಲುಪಿಸಲಾಗುವುದು ಎಂದು ಹೇಳಿದರು.
ಸಾಹಿತಿ ಮತ್ತು ವಿಜ್ಞಾನಿ ಡಾ. ಪ್ರಸನ್ನ ಸಂತೆಕಡೂರು ಮಾತನಾಡಿ, ಜಗತ್ತಿನಲ್ಲಿ ಅತಿ ಹೆಚ್ಚು ಓದುವ ಹವ್ಯಾಸವನ್ನು ಒಳಗೊಂಡಿರುವ ದೇಶಗಳಲ್ಲಿ ಅಮೆರಿಕದ ನಂತರದ ಸ್ಥಾನವನ್ನು ಭಾರತ ಹೊಂದಿದ್ದು, ಇದೊಂದು ಮಹತ್ವದ ವಿಷಯವಾಗಿದೆ. ಒತ್ತಡಗಳಿಂದ ಹೊರಬರಲು ಓದು ಸಹಕಾರಿಯಾಗಿದೆ. ಮಾನಸಿಕ ಆರೋಗ್ಯಕ್ಕೂ ಓದು ಉತ್ತಮ ಚಿಕಿತ್ಸೆಯಾಗಿದ್ದು ಓದಿನ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಜತೆಗೆ ಮಾನಸಿಕ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು ಎಂದು ಹೇಳಿದರು.
ಹಿರಿಯ ಸಾಹಿತಿ ಡಾ. ಅಮ್ಮಸಂದ್ರ ಸುರೇಶ್ ದಂಪತಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆಯ ಕರಪತ್ರಗಳನ್ನು ಬಿಡುಗೊಡೆಗೊಳಿಸಲಾಯಿತು. ಕಸಾಪ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಎಚ್.ಡಿ.ಕೋಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡ ಪ್ರಮೋದ್, ನೆರಳು ಚಾರಿಟಬಲ್ ಟ್ರಸ್ಟ್ ನ ಕಾರ್ಯದರ್ಶಿ ಪುರುಷೋತ್ತಮ, ಖಜಾಂಚಿ ಕುಮಾರ್, ಶರಣ ದೇವರಾಜು ಪಿ. ಚಿಕ್ಕಹಳ್ಳಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net