ವಿದ್ಯಾರ್ಥಿಗಳೇ ಕಠಿಣ ಪರಿಶ್ರಮದಿಂದ ಸಾಧನೆ ಮಾಡಿರಿ

 ಕೆ-ಸೆಟ್ ಮತ್ತು ಯುಜಿಸಿ ನೆಟ್ ಪರೀಕ್ಷಾ ಉಚಿತ ತರಬೇತಿ ಶಿಬಿರವನ್ನು ಮೈವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಎನ್.ನಾಗರಾಜು ಉದ್ಘಾಟಿಸಿದರು. ಪ್ರೊ.ಮಲ್ಲಿಕಾರ್ಜುನ ಶಾಸ್ತ್ರಿ, ಪ್ರೊ.ಆರ್.ಎನ್.ಪದ್ಮನಾಭ್, ವೈ.ಎನ್.ಶಂಕರೇಗೌಡ, ಮಹದೇವ ನಾಯಕ್ ಇದ್ದರು.
ಕೆ-ಸೆಟ್ ಮತ್ತು ಯುಜಿಸಿ ನೆಟ್ ಪರೀಕ್ಷಾ ಉಚಿತ ತರಬೇತಿ ಶಿಬಿರವನ್ನು ಮೈವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಎನ್.ನಾಗರಾಜು ಉದ್ಘಾಟಿಸಿದರು. ಪ್ರೊ.ಮಲ್ಲಿಕಾರ್ಜುನ ಶಾಸ್ತ್ರಿ, ಪ್ರೊ.ಆರ್.ಎನ್.ಪದ್ಮನಾಭ್, ವೈ.ಎನ್.ಶಂಕರೇಗೌಡ, ಮಹದೇವ ನಾಯಕ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜು ಸಲಹೆ
  • ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷಾ ಉಚಿತ ತರಬೇತಿ ಶಿಬಿರ
ಮೈಸೂರು: ಪದವಿಯ ಅಂಕ ಉದ್ಯೋಗಕ್ಕೆ ಮಾನದಂಡವಾಗಿ ಉಳಿದಿಲ್ಲ. ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆಯಾಗಿದ್ದು, ಕಠಿಣ ಪರಿಶ್ರಮ, ನಿರಂತರ ಪ್ರಯತ್ನದಿಂದ ಅಸಾಧ್ಯವಾದುದನ್ನು ಸಾಧಾರಣ ವಿದ್ಯಾರ್ಥಿಗಳು ಸಾಧಿಸಬಹುದು ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜು ಹೇಳಿದರು.
 ಲಕ್ಷ್ಮೀಪುರಂನ ಜ್ಞಾನಬುತ್ತಿ ಸಂಸ್ಥೆಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷಾ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪರೀಕ್ಷೆಗೆ ಪೂರ್ಣಪ್ರಮಾಣದಲ್ಲಿ ತಯಾರಾಗಬೇಕು. ನಿಗದಿತ ಪಠ್ಯಪುಸ್ತಕ ಪ್ರತಿಸಾಲು ಬಿಡದಂತೆ ಓದಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ನಿಮ್ಮನ್ನು ನೀವು ಉತ್ತೇಜಿಸಿಕೊಂಡು ಪರೀಕ್ಷೆ ಎದುರಿಸಿ, ಜೀವನದಲ್ಲಿ ಯಶಸ್ಸುಗಳಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 
ಬದುಕೆಂಬುದು ಸರಪಳಿ ಇದ್ದ ಹಾಗೆ. ಪ್ರತಿಕೊಂಡಿಯೂ ಗಟ್ಟಿಯಾಗಿರಬೇಕು. ಕೊಂಡಿಗಳ ನಡುವೆ ಬಿರುಕು ಬಿಟ್ಟಾಗ ಗಟ್ಟಿಯಾದ ಬೆಸುಗೆ ನಿರಂತರವಾಗಿ ಹಾಕುತ್ತಿರಬೇಕು. ದೌರ್ಬಲ್ಯ ಮೆಟ್ಟಿನಿಂತು, ಆದಮ್ಯ ಆತ್ಮವಿಶ್ವಾಸದಿಂದ ಶಕ್ತಿ, ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸ್ಮಾರ್ಟ್ ಆಗಿ ಪರೀಕ್ಷೆ ಎದುರಿಸಿ ಮತ್ತು ಜೀವನದ ಸಮಸ್ಯೆಗಳನ್ನು ಸ್ಮೈಲ್ ಮುಖಭಾವದಿಂದ ಎದುರಿಸಿ ಎಂದು ತಿಳಿಸಿದರು.  
ಪ್ರಾಧ್ಯಾಪಕ ವೃತ್ತಿಯಲ್ಲಿರುವವರು ಪ್ರತಿದಿನ ಅಧ್ಯಯನ ಮಾಡುತ್ತ ಹೊಸದನ್ನು ಕಲಿಯಬೇಕು. ಕಾಲ ಕಾಲಕ್ಕೆ ಅಪ್‌ಡೇಟ್ ಆಗುತ್ತ  ಹೋದರೆ ಮಾತ್ರ ಪರಿಪೂರ್ಣ ಜ್ಞಾನವನ್ನು ವಿದ್ಯಾರ್ಥಿ ಸಮೂಹಕ್ಕೆ ವಿಸ್ತರಿಸುತ್ತ ಹೋಗಬಹುದು ಎಂದರು.
ಶಿಕ್ಷಣ ತಜ್ಞ ಪ್ರೊ.ಮಲ್ಲಿಕಾರ್ಜುನ ಶಾಸ್ತ್ರಿ ಮಾತನಾಡಿ, ಸೋಲುಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಯಶಸ್ವಿಯಾಗಬೇಕು. ಜ್ಞಾನಬುತ್ತಿ ಸಂಸ್ಥೆಯು ನಿಮಗೆ ಬುತ್ತಿಯನ್ನಷ್ಟೇ ನೀಡುತ್ತದೆಯೇ ಹೊರತು ಊಟವನ್ನಲ್ಲ. ಈ ಬುತ್ತಿಯನ್ನು ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. 
ಪ್ರೊ.ಪದ್ಮನಾಭ್, ಹಿರಿಯ ಸಹಕಾರಿ ವೈ.ಎನ್.ಶಂಕರೇಗೌಡ  ಮಾತನಾಡಿದರು. ಪ್ರಾಂಶುಪಾಲ ಮಹದೇವ ನಾಯಕ್, ಡಾ.ಕೃ.ಪ. ಗಣೇಶ, ಡಾ.ಸಿ.ಪುಟ್ಟರಾಜು, ಡಾ.ಶೈಲೇಶ್ ರಾಜೇ ಅರಸ್, ಜೈನಹಳ್ಳಿ ಸತ್ಯನಾರಾಯಣಗೌಡ, ಡಾ.ಹೊನ್ನಯ್ಯ, ಸಂಸ್ಥೆಯ ಕಾರ್ಯದರ್ಶಿಎಚ್. ಬಾಲಕೃಷ್ಣ, ಪ್ರೊ. ಕಿರಣ್ ಕೌಶಿಕ್ ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net