ಮುಕ್ತ ದಿನದಲ್ಲಿ ವಿದ್ಯಾರ್ಥಿಗಳ ಕೌಶಲ ಅನಾವರಣ

 ಎಸ್‌ಜೆಸಿಇಯಲ್ಲಿ ಶನಿವಾರ ಆಯೋಜಿಸಿದ್ದ ‘ಮುಕ್ತ ದಿನಾಚರಣೆ’ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ವಿದ್ಯಾರ್ಥಿಗಳ ಅನ್ವೇಷಣಾ ಮಾದರಿಗಳನ್ನು ಗಣ್ಯರಾದ ಡಾ.ಸಿ.ಜಿ.ಬೆಟಸೂರಮಠ, ಎಂ.ಪಿ.ನಾಗಮ್ಮ, ಡಾ. ಎ.ಎನ್.ಸಂತೋಷ್ ಕುಮಾರ್ ವೀಕ್ಷಿಸಿದರು.
ಎಸ್‌ಜೆಸಿಇಯಲ್ಲಿ ಶನಿವಾರ ಆಯೋಜಿಸಿದ್ದ ‘ಮುಕ್ತ ದಿನಾಚರಣೆ’ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ವಿದ್ಯಾರ್ಥಿಗಳ ಅನ್ವೇಷಣಾ ಮಾದರಿಗಳನ್ನು ಗಣ್ಯರಾದ ಡಾ.ಸಿ.ಜಿ.ಬೆಟಸೂರಮಠ, ಎಂ.ಪಿ.ನಾಗಮ್ಮ, ಡಾ. ಎ.ಎನ್.ಸಂತೋಷ್ ಕುಮಾರ್ ವೀಕ್ಷಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಜೆಸಿಇ ಆವರಣದಲ್ಲಿ ತಂತ್ರಜ್ಞಾನ, ವಿಜ್ಞಾನದ ಕೌತುಕ
  • ಹೊಸ ಮಾದರಿಗಳಿಗೆ ಜೀವ ತುಂಬಿದ ಮಕ್ಕಳು
ಮೈಸೂರು: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆವಿಷ್ಕಾರ, ಸಂಶೋಧನಾ ಮಾದರಿ, ತಾಂತ್ರಿಕ, ಕ್ರಿಯಾತ್ಮಕ ಕೌಶಲಕ್ಕೆ ‘ಓಪನ್ ಡೇ-2026’ ಅತ್ಯುತ್ತಮ ವೇದಿಕೆಯಾಯಿತು.
ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಹಾಗೂ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು(ಎಸ್‌ಜೆಸಿಇ) ವತಿಯಿಂದ ಶನಿವಾರ ಆಯೋಜಿಸಿದ್ದ ‘ಮುಕ್ತ ದಿನಾಚರಣೆ’ಯಲ್ಲಿ ತಾಂತ್ರಿಕ ವಿದ್ಯಾರ್ಥಿಗಳು ಆವಿಷ್ಕರಿಸಿದ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳನ್ನು ಅಂದಾಜು 20 ಸಾವಿರ ಜನರು ಕಣ್ತುಂಬಿಕೊಂಡರು. ತಾಂತ್ರಿಕತೆ ಮತ್ತು ಕ್ರಿಯಾತ್ಮಕತೆಯಿಂದ ಕೂಡಿದ ವಿವಿಧ ಯಂತ್ರೋಪಕರಣಗಳ ಪ್ರದರ್ಶನ ಕ್ಯಾಂಪಸ್‌ಗೆ ಜೀವಕಳೆ ತಂದಿತು.
ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಏರ್ಪಡಿಸಿದ್ದ ಓಪನ್ ಡೇ ಅಂಗವಾಗಿ ಎಸ್‌ಜೆಸಿಇ ಆವರಣವನ್ನು ಬಣ್ಣ ಬಣ್ಣದ ತಳಿರು, ತೋರಣಗಳಿಂದ ಅಲಂಕರಿಸಲಾಗಿತ್ತು. ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸಂಭ್ರಮದಿಂದ ಆವಿಷ್ಕರಿಸಿರುವ ತಂತ್ರಜ್ಞಾನ ಪ್ರದರ್ಶಿಸುವ ಮೂಲಕ ಪ್ರಶಂಸೆಗೆ ಪಾತ್ರರಾದರು.
ಈ ಶೈಕ್ಷಣಿಕ ಕಾರ್ಯಕ್ರಮವನ್ನು ನಗರದ ವಿವಿಧ ಶಾಲಾ-ಕಾಲೇಜಿನ ಮಕ್ಕಳು ಭೇಟಿ ನೀಡಿ ಕೌತುಕದಿಂದ ವೀಕ್ಷಿಸಿದರು. ವಿದ್ಯಾರ್ಥಿಗಳ ಪಾಲಕರು, ಶಿಕ್ಷಕರು ಮತ್ತು ಪರಿಣಿತರಿಂದಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ದೊರೆಯಿತು.
ಇಂಜಿನಿಯರಿಂಗ್, ವಿಜ್ಞಾನ, ತಂತ್ರಜ್ಞಾನ, ವಾಸ್ತು ಶಿಲ್ಪ, ಕಂಪ್ಯೂಟರ್ ಅಪ್ಲಿಕೇಶನ್‌ಗಳು ಮತ್ತು ನಿರ್ವಹಣೆಯಲ್ಲಿ ಉನ್ನತ ಶಿಕ್ಷಣದ ಅವಕಾಶ ಪಡೆಯಲು ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಮುಕ್ತ ದಿನವು ಒಂದು ಅನನ್ಯ ವೇದಿಕೆಯಾಯಿತು. ನೇರ ಸಂವಹನ ಮತ್ತು ಪ್ರಾಯೋಗಿಕ ವಿವರಣೆಯ ಮೂಲಕ ವೃತ್ತಿ ಶಿಕ್ಷಣದ ಆಯ್ಕೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ನವೀನ ಯೋಜನೆಗಳು, ಸಂಶೋಧನಾ ಫಲಿತಾಂಶಗಳು, ಮೂಲ ಮಾದರಿಗಳು, ಪ್ರಯೋಗಾಲಯ ಪ್ರದರ್ಶನಗಳು, ವಿದ್ಯಾರ್ಥಿಗಳ ಸಾಧನೆಗಳು, ಉದ್ಯಮ ಸಹಯೋಗಗಳು, ನವೋದ್ಯಮದ ಉಪಕ್ರಮಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಪ್ರದರ್ಶನವೂ ಇಲ್ಲಿತ್ತು. ಸಂದರ್ಶಕರು, ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಹನ ನಡೆಸಿ ಹೆಚ್ಚಿನ ಮಾಹಿತಿ ಪಡೆದುಕೊಂಡರು. 
ಅಂತಾರಾಷ್ಟ್ರೀಯ ಪ್ರದರ್ಶನದಲ್ಲಿ ಗಮನ ಸೆಳೆದಿರುವ ಚಿಕ್ಕ ಗಾತ್ರದ ವಿಮಾನಗಳು, ಸ್ಪೋರ್ಟ್ಸ್ ಕಾರ್‌ಗಳು, ಜೆಟ್ ಇಂಜಿನ್ ಬೈಕ್‌ಗಳೂ ಕುತೂಹಲ ಹೆಚ್ಚಿಸಿದವು. ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಗಳು, ಕೆಲ ಚಟುವಟಿಕೆಗಳ ಸರಣಿಯೂ ಜರುಗಿತು. ಇದು ಯುವ ಮನಸ್ಸುಗಳಲ್ಲಿ ಕುತೂಹಲ, ವೈಜ್ಞಾನಿಕ ಮನೋಭಾವ, ನಾವೀನ್ಯತೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ ಬೆಳೆಸಿತು. ವಿವಿಧ ವಿದ್ಯಾರ್ಥಿ ಕ್ಲಬ್‌ಗಳು ಮತ್ತು ಸಂಘಗಳು ಸಂಗೀತ, ನೃತ್ಯ ಪ್ರದರ್ಶನ ನೀಡಿದವು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಕಾರ್ಯಕ್ರಮವನ್ನು  ಉದ್ಘಾಟಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಂ.ಪಿ.ನಾಗಮ್ಮ, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಕುಲಪತಿ ಡಾ. ಎ.ಎನ್.ಸಂತೋಷ್ ಕುಮಾರ್ ಇನ್ನಿತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net