ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ

 ಕೆ.ಆರ್.ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೇಂದ್ರಕ್ಕೆ ಬಿಇಒ ಆರ್.ಕೃಷ್ಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆ.ಆರ್.ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೇಂದ್ರಕ್ಕೆ ಬಿಇಒ ಆರ್.ಕೃಷ್ಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Published on
ಕೆ.ಆರ್.ನಗರ : ಮಾರ್ಚ್ 18ರಿಂದ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಪರೀಕ್ಷಾಪೂರ್ವ ಸಿದ್ಧತೆ ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಶಿಕ್ಷಕರಿಗೆ ಸಲಹೆ ಸೂಚನೆ ನೀಡಿದರು.
ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲೂಕುಗಳಲ್ಲಿ ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ನಿಯಮಾನುಸಾರವಾಗಿ ನಡೆಸಲು ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ 35 ಸರ್ಕಾರಿ, 6 ವಸತಿ ಶಾಲೆ, 13 ಅನುದಾನಿತ, 18 ಅನುದಾನ ರಹಿತ ಒಟ್ಟು 72 ಪ್ರೌಢ ಶಾಲೆಗಳಿವೆ. ಈ ಮಕ್ಕಳಿಗೆ 11 ಪರೀಕ್ಷಾ ಕೇಂದ್ರಗಳು, 130 ಕೊಠಡಿಗಳಲ್ಲಿ ಎಸ್‌ಎಸ್‌ಎಲ್‌ಸಿ. ಪರೀಕ್ಷೆ ನಡೆಯಲಿವೆ. ಒಟ್ಟು 2979 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ ಹೊಸದಾಗಿ ಪರೀಕ್ಷೆ ಬರೆಯುವರು 1348 ಬಾಲಕರು, 1340 ಬಾಲಕಿಯರು, ಪುನರಾವರ್ತಿತ 161 ಬಾಲಕರು, 130 ಬಾಲಕಿಯರು ಇದ್ದಾರೆ. 220 ಕೊಠಡಿ ಮೇಲ್ವಿಚಾರಕರು 75 ಸಿಬ್ಬಂದಿ ವರ್ಗದವರು ಪರೀಕ್ಷಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದರು.
ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಿ ಪರೀಕೆಗೆ ಅಗತ್ಯವಾದ ಮೇಜು, ಕುರ್ಚಿ, ಕುಡಿಯುವ ನೀರು, ಗಾಳಿ, ಬೆಳಕು ಹಾಗೂ ಶೌಚಗೃಹ ವ್ಯವಸ್ಥೆ ಸಮರ್ಪಕವಾಗಿರುವುದನ್ನು ಖಚಿತಪಡಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ, ಭದ್ರತಾ ವ್ಯವಸ್ಥೆ ಮತ್ತು ಶಿಸ್ತು ಕಾಪಾಡುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆ ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗೆ ಮಾರ್ಗದರ್ಶನ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಗಳಲ್ಲಿ ಯಾವುದೇ ತೊಂದರೆ ಆಗದಂತೆ ಪೋಲೀಸ್ ಇಲಾಖೆ, ಆರೋಗ್ಯ ಇಲಾಖೆ, ಸೆಸ್ಕ್, ಕೆಎಸ್‌ಆರ್‌ಟಿಸಿ ಇಲಾಖೆಗಳ ಸಮನ್ವಯ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರ ನಡೆಸಿದ್ದೇವೆ:
ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ವರ್ಷದ ಆರಂಭದಿಂದಲೂ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಮತ್ತು ವಿಷಯ ಶಿಕ್ಷಕರೊಂದಿಗೆ ಸಭೆ ಕಾರ್ಯಾಗಾರಗಳನ್ನು ನಡೆಸಿ ಅಗತ್ಯ ಮಾರ್ಗದರ್ಶನ ನೀಡಲಾಗಿದೆ. ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಗಮನದಲ್ಲಿಟ್ಟು ಪುನರಾರ್ವತನ ತರಗತಿಗಳು, ವಿಶೇಷ ತರಗತಿಗಳನ್ನು ನಡೆಸಲಾಗಿದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಪ್ರೇರಣಾ ಕಾರ್ಯಕ್ರಮಗಳು, ಸಲಹಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗದಂತೆ ಹಾಗೂ ವಿಷಯವಾರು ಸಂದೇಹಗಳನ್ನು ನಿವಾರಿಸಲು ಮಾನ್ಯ ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲೆ ಇವರಿಂದ ಮಕ್ಕಳ ಸಹಾಯವಾಣಿ ಆರಂಭಿಸಲಾಗಿದೆ. ಈ ಎಲ್ಲಾ ಕ್ರಮಗಳ ಮೂಲಕ ಫಲಿತಾಂಶ ಜಿಲ್ಲೆಯಲ್ಲಿ ಮೊದಲ ಮೂರು ಸ್ಥಾನದೊಳಗೆ ಪಡೆಯುವ ನಿರೀಕ್ಷೆ ಹೊಂದಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ವೆಬ್‌ಕ್ಯಾಸ್ಟಿಂಗ್ ವ್ಯವಸ್ಥೆ :
ತಾಲೂಕು ವ್ಯಾಪ್ತಿಯಲ್ಲಿ 11 ಪರೀಕ್ಷಾ ಕೇಂದ್ರಗಳಿವೆ. ಎಲ್ಲೆಡೆ ವೆಬ್‌ಕ್ಯಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು 11 ಮುಖ್ಯ ಅಧೀಕ್ಷಕರು, 11ಅಭಿರಕ್ಷಕರ ಸ್ಥಾನಿಕ ಜಾಗೃತದಳ ಸಿಬ್ಬಂದಿ, ಅಗತ್ಯಕ್ಕೆ ತಕ್ಕಂತೆ ಸ್ವಾಧೀನಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ವಿವರ ನೀಡಿದರು.
ಮುಖ್ಯ ಶಿಕ್ಷಕರು, ಜಾಗೃತದಳ ಸಿಬ್ಬಂದಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net