ವಾಕ್ ಮತ್ತು ಶ್ರವಣ ತಪಾಸಣೆ: ಮೈಸೂರಿನಲ್ಲಿ ಸಾರಥಿಗೆ ಚಾಲನೆ

 ಮಕ್ಕಳಲ್ಲಿರುವ ವಾಕ್ ಮತ್ತು ಶ್ರವಣ ದೋಷ ಪತ್ತೆ ಹಚ್ಚುವ ‘ಸಾರಥಿ’ ತಪಾಸಣಾ ಅಭಿಯಾನದ ಪೋಸ್ಟರನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಿಡುಗಡೆಗೊಳಿಸಿದರು. ಡಾ.ಎಂ.ಪುಷ್ಪವತಿ, ತನ್ವೀರ್‌ಸೇಠ್, ಜಿ.ಲಕ್ಷ್ಮೀಕಾಂತ ರೆಡ್ಡಿ, ಎಸ್.ಯುಕೇಶ್ ಕುಮಾರ್, ಎನ್.ವಿಷ್ಣುವರ್ಧನ್, ಡಿ.ಉದಯಕುಮಾರ್ ಇನ್ನಿತರರಿದ್ದರು.
ಮಕ್ಕಳಲ್ಲಿರುವ ವಾಕ್ ಮತ್ತು ಶ್ರವಣ ದೋಷ ಪತ್ತೆ ಹಚ್ಚುವ ‘ಸಾರಥಿ’ ತಪಾಸಣಾ ಅಭಿಯಾನದ ಪೋಸ್ಟರನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಿಡುಗಡೆಗೊಳಿಸಿದರು. ಡಾ.ಎಂ.ಪುಷ್ಪವತಿ, ತನ್ವೀರ್‌ಸೇಠ್, ಜಿ.ಲಕ್ಷ್ಮೀಕಾಂತ ರೆಡ್ಡಿ, ಎಸ್.ಯುಕೇಶ್ ಕುಮಾರ್, ಎನ್.ವಿಷ್ಣುವರ್ಧನ್, ಡಿ.ಉದಯಕುಮಾರ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಾಕ್-ಶ್ರವಣ ದೋಷ ಪತ್ತೆ ಹಚ್ಚಲು ವಿಶೇಷ ಅಭಿಯಾನ
  • ಆಯಿಷ್ ಸಂಸ್ಥೆಯಲ್ಲಿ ಸೂಕ್ತ ಚಿಕಿತ್ಸೆ
 ಮೈಸೂರು: ಜಿಲ್ಲೆಯ ಎಲ್ಲ ಅಂಗನವಾಡಿ ಮತ್ತು ಪ್ರಾಥಮಿಕ ಶಾಲಾ ಮಕ್ಕಳಲ್ಲಿರುವ ವಾಕ್ ಮತ್ತು ಶ್ರವಣ ದೋಷ ಪತ್ತೆ ಹಚ್ಚಲು ‘ಸಾರಥಿ’ ಹೆಸರಿನಲ್ಲಿ ವಿಶೇಷ ತಪಾಸಣಾ ಅಭಿಯಾನ ಕೈಗೊಳ್ಳಲಾಗಿದೆ.
‘ಪ್ರಯಾಸ್’ ಹೆಸರಿನಲ್ಲಿ ಈ ಅಭಿಯಾನ ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ ಯಶಸ್ಸಿಯಾಗಿ ನಡೆದಿದೆ. ಇದೀಗ ಮೈಸೂರು ಜಿಲ್ಲೆಯಲ್ಲೂ ಚಾಲನೆ ನೀಡಲಾಗಿದೆ. ನಗರದ ಅಖಿಲ ಭಾರತ್ ವಾಕ್ ಮತ್ತು ಶ್ರವಣ ಸಂಸ್ಥೆ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಇದನ್ನು ಕಾರ್ಯಗತಗೊಳಿಸಲಾಗಿದೆ. ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಯ ಅನುದಾನವನ್ನು ಇದಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಆಯಿಷ್ ಮತ್ತು ಜಿಲ್ಲಾಡಳಿತ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಬಳಿಕ ಸಾರಥಿ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಆಯಿಷ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಮಾತನಾಡಿ, ಮಕ್ಕಳಲ್ಲಿ ಕಂಡು ಬರುವ ವಾಕ್ ಮತ್ತು ಶ್ರವಣ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಬೇಕು. ಅದನ್ನು ಗುಣಪಡಿಸಲು ಸಾಧ್ಯವಾಗುತ್ತದೆ. ಹೀಗಾಗಿ, ಈ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದರು.
ಮಾತಿನ ತೊಡಕು, ಕಿವಿಯಲ್ಲಿ ತೊಂದರೆ, ಕಿವಿ ಸೋರುವಿಕೆ, ಓದು-ಬರವಣಿಗೆಯಲ್ಲಿ ಅಡ್ಡಿ.. ಹೀಗೆ ವಿವಿಧ ವಾಕ್ ಮತ್ತು ಶ್ರವಣಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಪತ್ತೆ ಮಾಡಲಾಗುವುದು. ಬಳಿಕ ನಮ್ಮ ಆಯಿಷ್ ಸಂಸ್ಥೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲಾಗುವುದು ಎಂದು ತಿಳಿಸಿದರು. 
ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳ ಕಿವಿ ತೊಂದರೆ ಕಡಿಮೆ ಮಾಡಲು ಕ್ರಮ ವಹಿಸಲಾಗಿದೆ. ಇದಕ್ಕೆ ಈ ಅಭಿಯಾನ ಪೂರಕವಾಗಿದೆ. ಈಗಾಗಲೇ 1,000 ಶಿಕ್ಷಕರಿಗೆ ತರಬೇತಿ ನೀಡಿದ್ದು, ಇವರು ತಮ್ಮ ಶಾಲೆ ಇಂತಹ ಮಕ್ಕಳನ್ನು ಗುರುತಿಸಿ ದತ್ತಾಂಶ ಸಂಗ್ರಹಿಸುತ್ತಾರೆ. ಬಳಿಕ ಅವರಿಗೆ ತಪಾಸಣೆ ಮಾಡಲಾಗುತ್ತದೆ. ಇದು ಪ್ರತಿ ವರ್ಷ ಮುಂದುವರಿಯಲಿದೆ ಎಂದು ತಿಳಿಸಿದರು.
ಶಾಸಕ ತನ್ವೀರ್ ಸೇಠ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಕೆಪಿಎ ನಿರ್ದೇಶಕ ಎನ್.ವಿಷ್ಣುವರ್ಧನ್, ಡಿಡಿಪಿಐ ಡಿ.ಉದಯಕುಮಾರ್, ಮಹಿಳಾಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ಬಸವರಾಜ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net