ಜಿಲ್ಲೆಯಲ್ಲಿ ಎಸ್‌ಐಆರ್ ಶೇ.83ರಷ್ಟು ಪ್ರಗತಿ

ಜಿಲ್ಲೆಯಲ್ಲಿ ಎಸ್‌ಐಆರ್ ಶೇ.83ರಷ್ಟು ಪ್ರಗತಿ
ಜಿಲ್ಲೆಯಲ್ಲಿ ಎಸ್‌ಐಆರ್ ಶೇ.83ರಷ್ಟು ಪ್ರಗತಿ
Published on

ಪ್ರಮುಖ ಮುಖ್ಯಾಂಶಗಳು

  • 927 ಮತಗಟ್ಟೆಗಳಲ್ಲಿ ಶೇ.100ರಷ್ಟು ಫಾರ್ಮ್ ವಿತರಣೆ ನಗರ ಪ್ರದೇಶದಲ್ಲಿ ಮಂದಗತಿ
ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕಾರ್ಯಕ್ಕೆ ವೇಗ ಸಿಕ್ಕಿದ್ದು, ಜುಲೈ 8ರವರೆಗೆ ಜಿಲ್ಲೆಯ ಒಟ್ಟು 27,99,693 ಮತದಾರರ ಪೈಕಿ 23,49,006 ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಶೇ.83.90ರಷ್ಟು ಪ್ರಗತಿ ಸಾಧಿಸಲಾಗಿದೆ.
ಮನೆ-ಮನೆಗೆ ತೆರಳಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ)ಮತದಾರರಿಗೆ ನಮೂನೆ ವಿತರಿಸುವುದರ ಜತೆಗೆ ಪಟ್ಟಿಯಲ್ಲಿರುವ ದೋಷಗಳನ್ನು ಗುರುತಿಸುವ ಕಾರ್ಯವನ್ನೂ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,915 ಮತಗಟ್ಟೆಗಳಿದ್ದು, ಅವುಗಳಲ್ಲಿ 927 ಮತಗಟ್ಟೆಗಳಲ್ಲಿ ಶೇ.100ರಷ್ಟು ಫಾರ್ಮ್ ವಿತರಣೆ ಪೂರ್ಣಗೊಂಡಿದೆ. ಮತ್ತೊಂದು 726 ಮತಗಟ್ಟೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಫಾರ್ಮ್ ವಿತರಣೆ ನಡೆದಿದೆ. ಉಳಿದ ಮತಗಟ್ಟೆಗಳಲ್ಲಿಯೂ ಕಾರ್ಯ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ತಂತ್ರಜ್ಞಾನದ ನೆರವಿನಿಂದ ಮತದಾರರು ಸ್ವತಃ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸುತ್ತಿದ್ದು, ಇದುವರೆಗೆ 11,419 ಮಂದಿ ಆನ್‌ಲೈನ್ ಮೂಲಕ ನಮೂನೆ ಸಲ್ಲಿಸಿದ್ದಾರೆ. ವಿತರಿಸಲಾದ ನಮೂನೆಗಳ ಪೈಕಿ 1,13,643 ಫಾರ್ಮ್‌ಗಳನ್ನು ಈಗಾಗಲೇ ಗಣಕೀಕರಣಗೊಳಿಸಲಾಗಿದೆ. ಉಳಿದ ನಮೂನೆಗಳನ್ನು ಹಂತ ಹಂತವಾಗಿ ಡಿಜಿಟಲ್ ದಾಖಲಾತಿಗೆ ಸೇರಿಸುವ ಕಾರ್ಯ ಮುಂದುವರಿದಿದೆ.
ಕ್ಷೇತ್ರವಾರು ಪ್ರಗತಿ ಪರಿಶೀಲಿಸಿದರೆ, ಪಿರಿಯಾಪಟ್ಟಣ, ಹುಣಸೂರು, ಎಚ್.ಡಿ.ಕೋಟೆ ಹಾಗೂ ವರುಣಾ ಕ್ಷೇತ್ರಗಳಲ್ಲಿ ಫಾರ್ಮ್ ವಿತರಣೆ ಉತ್ತಮ ಮಟ್ಟದಲ್ಲಿದೆ. ನಗರ ಭಾಗದ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರಗಳಲ್ಲಿ ಜನಸಾಂದ್ರತೆ ಹಾಗೂ ಮನೆಗಳಲ್ಲಿ ಮತದಾರರು ಲಭ್ಯವಾಗದಿರುವ ಕಾರಣ ವಿತರಣೆ ಪ್ರಮಾಣ ತುಸು ಕಡಿಮೆಯಾಗಿದೆ.
ಕ್ಷೇತ್ರವಾರು ವಿವರ: ಚಾಮುಂಡೇಶ್ವರಿ ಕ್ಷೇತ್ರದ ಒಟ್ಟು 3,57,327 ಮತದಾರರ ಪೈಕಿ 2,95,876 ನಮೂನೆಗಳ ವಿತರಣೆಯಾಗಿದ್ದು, 8,864 ಗಣಕೀಕರಣವಾಗಿದೆ. ನರಸಿಂಹರಾಜದ ಒಟ್ಟು 3,27,898 ಮತದಾರರ ಪೈಕಿ 2,14,468 ನಮೂನೆಗಳನ್ನು ವಿತರಿಸಿದ್ದು, 7,424 ಗಣಕೀಕರಣ ಪೂರ್ಣವಾಗಿದೆ. ಚಾಮರಾಜ ಕ್ಷೇತ್ರದ ಒಟ್ಟು 2,64,045 ಮತದಾರರ ಪೈಕಿ 1,76,266 ನಮೂನೆಗಳ ವಿತರಣೆಯಾಗಿದ್ದು, 2,514 ಗಣಕೀಕರಣವಾಗಿದೆ.
ಕೃಷ್ಣರಾಜ ಕ್ಷೇತ್ರದಲ್ಲಿ ಒಟ್ಟು 2,63,632 ಮತದಾರರ ಪೈಕಿ 1,73,510 ನಮೂನೆಗಳ ವಿತರಣರ ಮಾಡಲಾಗಿದ್ದು, 2,300 ಗಣಕೀಕರಣಗೊಂಡಿದೆ. ಹುಣಸೂರಿನ ಒಟ್ಟು 2,53,248 ಮತದಾರರ ಪೈಕಿ 2,46,013 ನಮೂನೆ ವಿತರಣೆಯಾಗಿ, 16,288 ಗಣಕೀಕರಣ ಪೂರ್ಣವಾಗಿದೆ. ವರುಣಾದ ಒಟ್ಟು 2,42,363 ಮತದಾರರ ಪೈಕಿ 2,26,474 ನಮೂನೆ ವಿತರಿಸಿ, 13,964 ಗಣಕೀಕರಣಗೊಂಡಿದೆ. ಹೆಚ್.ಡಿ.ಕೋಟೆಯ ಒಟ್ಟು 2,34,521 ಮತದಾರರ ಪೈಕಿ 2,21,159 ನಮೂನೆಗಳ ವಿತರಣೆಯಾಗಿ 16,258 ಗಣಕೀಕರಣ ಮಾಡಲಾಗಿದೆ.
ನಂಜನಗೂಡಿನ ಒಟ್ಟು 2,23,279 ಮತದಾರರ ಪೈಕಿ 2,09,745 ನಮೂನೆಗಳ ವಿತರಣೆ ಮಾಡಿ, 11,945 ಗಣಕೀಕರಣ ಆಗಿದೆ. ಕೃಷ್ಣರಾಜನಗರ ಕ್ಷೇತ್ರದ ಒಟ್ಟು 2,20,922 ಮತದಾರರ ಪೈಕಿ 1,99,931 ನಮೂನೆಗಳ ವಿತರಣೆ ಮಾಡಲಾಗಿದ್ದು, 8,323 ಗಣಕೀಕರಣವಾಗಿದೆ. ತಿ.ನರಸೀಪುರದ ಒಟ್ಟು 2,12,752 ಮತದಾರರ ಪೈಕಿ 1,90,566 ನಮೂನೆಗಳ ವಿತರಣೆಯಾಗಿ, 9,003 ಗಣಕೀಕರಣ ಮಾಡಲಾಗಿದೆ. ಪಿರಿಯಾಪಟ್ಟಣ ಕ್ಷೇತ್ರದ ಒಟ್ಟು 1,99,706 ಮತದಾರರ ಪೈಕಿ 1,94,998 ನಮೂನೆಗಳ ವಿತರಣೆ ಮಾಡಿ, 16,760 ಅರ್ಜಿಗಳ ಗಣಕೀಕರಣ ಪೂರ್ಣಗೊಳಿಸಲಾಗಿದೆ.

4,327 ಜನ ಎಎಸ್‌ಡಿಡಿಒ ಪಟ್ಟಿಗೆ

ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಬಿಎಲ್‌ಒಗಳು ನಡೆಸುತ್ತಿರುವ ಮನೆ ಮನೆ ಭೇಟಿಯ ಸಂದರ್ಭದಲ್ಲಿ ಪಟ್ಟಿಯಲ್ಲಿದ್ದ ಹಲವು ದೋಷಗಳನ್ನು ಪತ್ತೆ ಹಚ್ಚಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 4,327 ಜನರನ್ನು ಎಎಸ್‌ಡಿಡಿಒ (ಗೈರು, ಸ್ಥಳಾಂತರ, ಮೃತ, ನಕಲಿ, ಇತರೆ) ಪಟ್ಟಿಗೆ ಗುರುತಿಸಲಾಗಿದೆ. ಇದರಲ್ಲಿ ಗೈರುಹಾಜರಾದ ಮತದಾರರು 2,873, ಶಾಶ್ವತವಾಗಿ ಸ್ಥಳಾಂತರಗೊಂಡವರು 1,033, ಮರಣ ಹೊಂದಿದ ಮತದಾರರು 362, ಈಗಾಗಲೇ ಹೆಸರು ನೋಂದಾಯಿತವಾಗಿರುವವರು 51 ಹಾಗೂ ಇತರ 8 ಪ್ರಕರಣಗಳು ಸೇರಿವೆ. ಅರ್ಹವಲ್ಲದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿ, ಮುಂಬರುವ ದಿನಗಳಲ್ಲಿ ಅತ್ಯಂತ ನಿಖರವಾದ ಹಾಗೂ ದೋಷಮುಕ್ತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net