ಬಾಕಿ ಹಣಕ್ಕೆ ಒತ್ತಾಯಿಸಿ ಗುತ್ತಿಗೆದಾರರ ಸಂಘದಿಂದ ಮೌನ ಪ್ರತಿಭಟನೆ

ಬಾಕಿ ಹಣಕ್ಕೆ ಒತ್ತಾಯಿಸಿ ಗುತ್ತಿಗೆದಾರರ ಸಂಘದಿಂದ ಮೌನ ಪ್ರತಿಭಟನೆ ನಡೆಸಿದರು
ಬಾಕಿ ಹಣಕ್ಕೆ ಒತ್ತಾಯಿಸಿ ಗುತ್ತಿಗೆದಾರರ ಸಂಘದಿಂದ ಮೌನ ಪ್ರತಿಭಟನೆ ನಡೆಸಿದರು
Published on

ಪ್ರಮುಖ ಮುಖ್ಯಾಂಶಗಳು

  • ಗುತ್ತಿಗೆದಾರರು ಬ್ಯಾಂಕ್, ಖಾಸಗಿ ಹಣಕಾಸು ಸಂಸ್ಥೆಗಳು, ಮನೆಯಲ್ಲಿರುವ ಒಡವೆ ಅಡವಿಟ್ಟು ಹೆಚ್ಚಿನ ಬಡ್ಡಿಗೆ ಸಾಲ ಮಾಡಿ ಕಾಮಗಾರಿ ಮಾಡಿದ್ದಾರೆ
  • ಸರ್ಕಾರ ಬಾಕಿ ಪಾವತಿಸದೆ ಇರುವುದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ
ಮೈಸೂರು:ಕಾಮಗಾರಿಯ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿ ಮಹಾನಗರ ಪಾಲಿಕೆ ಸಿವಿಲ್ ಗುತ್ತಿಗೆದಾರರ ಸಂಘದಿಂದ ಪಾಲಿಕೆ ಮುಂಭಾಗ ಮೌನ ಪ್ರತಿಭಟನೆ ನಡೆಸಲಾಯಿತು.
ಕಳೆದ 3 ವರ್ಷಗಳ ಸುಮಾರು 200 ಕೋಟಿ ರೂ. ಕಾಮಗಾರಿ ಬಿಲ್ ಪಾವತಿಸಬೇಕು. 14ನೇ ಹಣಕಾಸು, 15ನೇ ಹಣಕಾಸು, ಎಸ್‌ಎಫ್‌ಸಿ ಮಹಾತ್ಮ ಗಾಂಧಿನಗರ ಅಭಿವೃದ್ಧಿ ಯೋಜನೆ ಕಾಮಗಾರಿ ನಡೆಸಿದವರಿಗೂ ಇದೂವರೆಗೂ ಬಾಕಿ ಪಾವತಿಸಿಲ್ಲ ಎಂದು ದೂರಿದರು.
ಕಾಮಗಾರಿಗಾಗಿ ಗುತ್ತಿಗೆದಾರರು ಬ್ಯಾಂಕ್, ಖಾಸಗಿ ಹಣಕಾಸು ಸಂಸ್ಥೆಗಳು, ಮನೆಯಲ್ಲಿರುವ ಒಡವೆ ಅಡವಿಟ್ಟು ಹೆಚ್ಚಿನ ಬಡ್ಡಿಗೆ ಸಾಲ ಮಾಡಿ ಕಾಮಗಾರಿ ಮಾಡಿದ್ದಾರೆ. ಆದರೆ ಸರ್ಕಾರ ಬಾಕಿ ಪಾವತಿಸದೆ ಇರುವುದರಿಂದ ಗುತ್ತಿಗೆದಾರರು ಅಡಮಾನ ಇಟ್ಟಿರುವ ಮನೆ, ಸೈಟು, ಜಮೀನು ಹರಾಜು ಹಾಕುವುದಾಗಿ ಬ್ಯಾಂಕ್‌ನವರು ನೋಟಿಸ್ ನೀಡಿದ್ದಾರೆ ಎಂದು ಅಳಲು ತೋಡಿಕೊಂಡರು.
ಅಲ್ಲದೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಸರ್ಕಾರಿ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರಿಗೆ ಸಾಲ ಕೊಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿವೆ. ಗುತ್ತಿಗೆದಾರರ ಜೀವನ ನೀರಿನ ಮೇಲಿನ ಗುಳ್ಳೆಯಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗುತ್ತಿಗೆದಾರ ಬ್ಯಾಂಕ್, ಖಾಸಗಿ ಕಂಪನಿಗಳಿಂದ ಕಾಮಗಾರಿ ಕೆಲಸಗಳಿಗೆ ಕೋಟ್ಯಂತರ ರೂ. ಮೌಲ್ಯದ ವಾಹನಗಳನ್ನು ಸಾಲ ಮಾಡಿ ಖರೀದಿಸುತ್ತಾರೆ. ಬಿಲ್‌ಗಳು ತಕ್ಷಣ ಪಾವತಿ ಆಗುತ್ತದೆ ಎಂದು ನಂಬಿ ಸಿಕ್ಕ ಕಡೆಯಲ್ಲೆಲ್ಲ ಸಾಲ ಮಾಡಿ ಕಾಮಗಾರಿ ನಡೆಸುತ್ತಾರೆ. ಆದರೆ ವಾಹನಗಳಿಗೆ ಇಎಂಐ ಕಟ್ಟಲಾಗದ ಪರಿಸ್ಥಿತಿ ನಿರ್ಮಾಣವಾಗಿ ಈಗ ತಲೆಮರೆಸಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿ ಕಾರಿದರು.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಾದ್ಯಂತ ಎಲ್ಲ ಗುತ್ತಿಗೆದಾರರೂ ಕಾಮಗಾರಿ ನಿಲ್ಲಿಸಿ ಮುಷ್ಕರ ನಡೆಸಲು ನಿರ್ಧರಿಸಿರುವುದರಿಂದ ಮಹಾನಗರ ಪಾಲಿಕೆಯ ಎಲ್ಲ ಗುತ್ತಿಗೆದಾರರು ಬೆಂಗಳೂರು ಚಲೋ ಮಾಡಲು ನಿರ್ಧರಿಸಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಗುತ್ತಿಗೆದಾರರ ನೋವು-ಕಷ್ಟಗಳಿಗೆ ಸ್ಪಂದಿಸಬೇಕು. ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಗುತ್ತಿಗೆದಾರ ಸಂಘದ ಅಧ್ಯಕ ಚಂದ್ರಶೇಖರಯ್ಯ, ಕಾರ್ಯದರ್ಶಿ ಎಂ.ಎನ್.ಹರ್ಷವರ್ಧನ, ನಿರ್ದೇಶಕರಾದ ಸಿ.ವೆಂಕಟಪ್ಪ, ಎಸ್.ಎಲ್.ನಾರಾಯಣ, ಕೆ.ಎನ್.ರಾಮೇಗೌಡ ಎನ್.ಯೋಗಿಶ್, ಧನಂಜಯ್, ಮಂಜುನಾಥ್, ರಾಜ್‌ಕುಮಾರ್, ಸೈಯದ್ ವಸೀಮ್, ವಿ.ವೆಂಕಟೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net