ತಿ.ನರಸೀಪುರ ಪಟ್ಟಣದಲ್ಲಿ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ಉದ್ಘಾಟನೆ ಹಾಗೂ ಫ್ಯಾಷನ್ ಡಿಸೈನಿಂಗ್ ಮತ್ತು ಬ್ಯೂಟಿಷಿಯನ್ ತರಬೇತಿ ಕಾರ್ಯಾಗಾರದಲ್ಲಿ ಕೇಂದ್ರದ ವ್ಯವಸ್ಥಾಪಕ ಪಿ.ಡಿ. ನಾಯಕ್ ಮಾತನಾಡಿದರು. ಉಪನ್ಯಾಸಕ ಎಂ. ಮಹಾದೇವ್, ಕೆ.ರಾಜು ಇದ್ದರು.
ತಿ.ನರಸೀಪುರ: ಗ್ರಾಮೀಣ ಜನರ ಬದುಕಿಗೆ ಪೂರಕವಾದ ಕೌಶಲ ಕಲಿಸಿ ಅವರ ಜೀವನಕ್ಕೆ ಆಧಾರ ಕಲ್ಪಿಸಲು ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, 21 ರೀತಿಯ ತರಬೇತಿಗಳನ್ನು ನೀಡುತ್ತಿದೆ ಎಂದು ಕೇಂದ್ರದ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಪಿ.ಡಿ. ನಾಯಕ್ ತಿಳಿಸಿದರು.
ಪಟ್ಟಣದ ಕೊಳ್ಳೇಗಾಲ ಮುಖ್ಯ ರಸ್ತೆಯ ಮಾಂಡೋವಿ ಮೋಟಾರ್ಸ್ ಕಟ್ಟಡದಲ್ಲಿ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ಉದ್ಘಾಟನೆ ಹಾಗೂ ಫ್ಯಾಷನ್ ಡಿಸೈನಿಂಗ್ ಮತ್ತು ಬ್ಯೂಟಿಷಿಯನ್ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ಒಬ್ಬರ ದುಡಿಮೆಯಿಂದ ಕುಟುಂಬ ನಿರ್ವಹಣೆ ಕಷ್ಟ ಸಾಧ್ಯ. ಈ ಸಂದರ್ಭಗಳಲ್ಲಿ ಕುಟುಂಬದ ಇತರೆ ಸದಸ್ಯರ ದುಡಿಮೆಯು ಅಗತ್ಯ ಎಂಬ ಕಾರಣಕ್ಕೆ ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಅಂಗ ಸಂಸ್ಥೆಯಾಗಿ 2017ರಲ್ಲಿ ಎಚ್.ಡಿ. ಕೋಟೆಯ ಕೆಂಚನಹಳ್ಳಿಯಲ್ಲಿ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ಸ್ಥಾಪಿಸಲಾಯಿತು. ಆ ಮೂಲಕ ಗ್ರಾಮೀಣ ಭಾಗದ ಜನರಿಗೆ ತರಬೇತಿಗಳನ್ನು ನೀಡಲಾಗುತ್ತಿದೆ. ಮಹಿಳೆಯರು ಆರ್ಥಿಕ ಸ್ವಾವಲಂಬನೆ ಪಡೆದಲ್ಲಿ ಕುಟುಂಬ ನಿರ್ವಹಣೆಗೆ ಸಹಕಾರಿಯಾಗುವುದರ ಜತೆಗೆ ನೆಮ್ಮದಿಯ ಬದುಕು ರೂಪಿಸಿಕೊಳ್ಳಲು ಸಾಧ್ಯ. ನಮ್ಮ ಸಂಸ್ಥೆ ಮೈಸೂರು, ಚಾಮರಾಜನಗರ, ಧಾರವಾಡ ಸೇರಿದಂತೆ ವಿವಿಧೆಡೆಗಳಲ್ಲಿ ತರಬೇತಿ ನೀಡುತ್ತಿದೆ. ಸುಮಾರು 15 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ತರಬೇತಿಗಳನ್ನು ಪಡೆದಿದ್ದು, ಶೇ.85ರಷ್ಟು ಜನ ಆರ್ಥಿಕ ಸ್ವಾವಲಂಬನೆ ಕಂಡಿದ್ದಾರೆ ಎಂದು ತಿಳಿಸಿದರು.
ತಿ. ನರಸೀಪುರ ಪಟ್ಟಣದಲ್ಲಿ ಈಗ ತರಬೇತಿ ಪ್ರಾರಂಭವಾಗುತ್ತಿದ್ದು, ತಾಲೂಕಿನ ಜನತೆ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಉಪನ್ಯಾಸಕ ಎಂ. ಮಹಾದೇವ್ ಮಾತನಾಡಿ, ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಕ್ರಿಯವಾಗಿದ್ದು, ಪುರುಷ ಪ್ರಧಾನವಾಗಿದ್ದ ಸಮಾಜ ಈಗ ಸಮ ಸಮಾಜವಾಗುತ್ತಿದೆ. ಎರಡು ಕೈ ಸೇರಿದರೆ ಚಪ್ಪಾಳೆ ಎಂಬಂತೆ ಕುಟುಂಬದಲ್ಲಿ ಪ್ರತಿಯೊಬ್ಬರೂ ದುಡಿದರೆ ನೆಮ್ಮದಿಯ ಜೀವನ ಕಂಡುಕೊಳ್ಳಬಹುದು. ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಪಡೆಯಲು ಇಂತಹ ತರಬೇತಿಗಳು ಪ್ರಸ್ತುತವಾಗಿವೆ ಎಂದರು.
ಮಾಂಡೋವಿ ಮೋಟಾರ್ಸ್ ವ್ಯವಸ್ಥಾಪಕ ಚಂದ್ರಶೇಖರ್ ಮಾತನಾಡಿದರು.
ತರಬೇತಿ ಪಡೆದಿರುವ ಅನಿತಾ ಅವರು ತಮ್ಮ ಅನಿಸಿಕೆ ಹಂಚಿಕೊಂಡರು.
ಕಾರ್ಯಪಡೆ ಸಂಯೋಜಕ ಅಬ್ದುಲ್ ರಶೀದ್, ಕಾರ್ಯಕ್ರಮ ವ್ಯವಸ್ಥಾಪಕ ಚಿನ್ನ ಮಹಾದೇವ್ ಕೇಂದ್ರದ ಯೋಜನೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವ್ಯವಸ್ಥಾಪಕ ಕೆ.ರಾಜು, ತರಬೇತಿ ಶಿಕ್ಷಕರಾದ ನೇತ್ರಾವತಿ, ವಿಜಯಲಕ್ಷ್ಮೀ, ಸಂಚಾಲಕ ಮಹದೇವ್, ಅಶ್ವಥ್, ಹಾಗೂ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.