ಡ್ಯಾಂನಲ್ಲಿ ಭರಪೂರ ನೀರು ಕರೆಯೊಡಲು ಖಾಲಿಖಾಲಿ

 ಸರಗೂರು ತಾಲೂಕಿನ ಹೊಸಹೆಗ್ಗುಡಿಲು ಗ್ರಾಮದ ಕೆರೆಯಲ್ಲಿ ನೀರು ಇಲ್ಲದೆ ಗಿಡಗಂಟಿಗಳು ಬೆಳೆದಿರುವುದು.
ಸರಗೂರು ತಾಲೂಕಿನ ಹೊಸಹೆಗ್ಗುಡಿಲು ಗ್ರಾಮದ ಕೆರೆಯಲ್ಲಿ ನೀರು ಇಲ್ಲದೆ ಗಿಡಗಂಟಿಗಳು ಬೆಳೆದಿರುವುದು.
Published on
ಹಾದನೂರು ಚಂದ್ರ ಸರಗೂರು
ಕಬಿನಿ ಮತ್ತು ನುಗು ಜಲಾಶಯಗಳಲ್ಲಿ ನೀರಿದ್ದರೂ ತಾಲೂಕಿನ 10 ಕೆರೆಗಳ ಒಡಲು ಬರಿದಾಗಿದೆ. ಈ ಜಲಾಶಯಗಳಿಂದ ತಮಿಳುನಾಡಿಗೆ ನಿತ್ಯ ನೀರು ಹರಿಯುತ್ತಿದ್ದರೂ ಸ್ಥಳೀಯ ಕೆರೆಗಳಿಗೆ ನೀರು ತುಂಬಿಸದಿರುವುದು ಕೃಷಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸರಗೂರು ತಾಲೂಕಿನ ಮುಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಹೊಸ ಹೆಗ್ಗುಡಿಲು, ಹೊಸ ಬಿರ್ವಾಳ್, ಚಂಗೌಡನಹಳ್ಳಿ ಮೊದಲಾದ 10 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ಸರ್ಕಾರ ಬರೋಬ್ಬರಿ -್ಝಠಿ;35 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿ ಕಾಮಗಾರಿ ಕೈಗೊಂಡಿತ್ತು. ಪೈಪ್‌ಲೈನ್ ಸೇರಿದಂತೆ ಅಗತ್ಯ ಕಾಮಗಾರಿಗಳು ಪೂರ್ಣಗೊಂಡು ವರ್ಷವೇ ಕಳೆದಿದೆ. ಆದರೆ, 10 ಕೆರೆಗಳ ಪೈಕಿ ಒಂದೂ ನೀರು ಕಂಡಿಲ್ಲ.
ಸಮನ್ವಯ ಕೊರತೆ
ಕಬಿನಿ ಮತ್ತು ನುಗು ನೀರಾವರಿ ನಿಗಮ ಹಾಗೂ ಕೆಪಿಟಿಸಿಎಲ್ ನಡುವೆ ಸಮನ್ವಯದ ಕೊರತೆಯೇ ಕೆರೆಯೊಡಲು ಬರಿದಾಗಲು ಕಾರಣ ಎನ್ನಲಾಗಿದೆ. ನಮ್ಮೂರಿನ ಕೆರೆಗಳಿಗೆ ನೀರು ಹರಿದಿಲ್ಲ ಏಕೆ ಎಂದು ಕಬಿನಿ ನೀರಾವರಿ ನಿಗಮದ ಅಧಿಕಾರಿಗಳನ್ನು ಕೇಳಿದರೆ ಅವರು ಕೆಪಿಟಿಸಿಎಲ್ ಅಧಿಕಾರಿಗಳತ್ತ, ಕೆಪಿಟಿಸಿಎಲ್ ಅಧಿಕಾರಿಗಳನ್ನು ವಿಚಾರಿಸಿದರೆ ನಮಗೆ ಅನುದಾನ ಬಂದಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ. ಹೀಗಾಗಿ ಎರಡು ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆ ಇದ್ದೂ ಕೆರೆಗಳಿಗೆ ನೀರು ಹರಿಯದ ಪರಿಸ್ಥಿತಿ ನಿರ್ಮಾಣವಾಗಿದೆ.
ಅನುದಾನಕ್ಕೆ ಬೆಲೆ ಇಲ್ಲವೇ?
ಡ್ಯಾಂಗಳಿಂದ ಕೆರೆಗಳಿಗೆ ನೀರು ಹರಿಸಲು ಸರ್ಕಾರ ರೂ. 35 ಕೋಟಿ ವೆಚ್ಚದ ಯೋಜನೆ ರೂಪಿಸಿ, ಕಾಮಗಾರಿ ಪೂರ್ಣಗೊಳಿಸಿದ ಬಳಿಕವೂ ಅದರ ಮೂಲ ಉದ್ದೇಶ ಜಾರಿಯಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೋಟಿ ಕೋಟಿ ರೂಪಾಯಿ ಅನುದಾನ ವೆಚ್ಚ ಮಾಡಿ ವರ್ಷ ಕಳೆದರೂ ಕೆರೆಗಳಲ್ಲಿ ನೀರಿನ ಬದಲು ಗಿಡ-ಗಂಟಿ ಬೆಳೆಯುತ್ತಿರುವುದು ವಿಪರ್ಯಾಸ.
ಇದಕ್ಕೂ ಮೊದಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿ ಕೆರೆಗೆ ಸುಮಾರು ರೂ. 10 ಲಕ್ಷ ವೆಚ್ಚದಲ್ಲಿ ಸ್ವಚ್ಛತಾ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಕೆರೆಗಳನ್ನು ಸ್ವಚ್ಛಗೊಳಿಸಿ, ನೀರು ಸಂಗ್ರಹಣೆಗೆ ಅನುಕೂಲ ಮಾಡಿ ಕೊಡಲಾಗಿತ್ತು. ಕೃಷಿಕರ ಬಹು ನಿರೀಕ್ಷಿತ ‘ಕೆರೆಗಳಿಗೆ ನೀರು ತುಂಬಿಸುವ ಯೋಜನೆ’ ಸಮರ್ಪಕವಾಗಿ ಅನುಷ್ಠಾನಗೊಳ್ಳದ ಪರಿಣಾಮ ಈ ಭಾಗದ ತೋಟ, ಗದ್ದೆಗಳಿಗೆ ನೀರು ದೊರಕದಂತಾಗಿದೆ.
ಗ್ರಾಮಸ್ಥರ ಅಳಲು:
ನೀರು ಸಂಗ್ರಹವಾಗಲಿ ಎಂದು ಸ್ವಚ್ಛಗೊಂಡ ಕೆರೆಗಳು ಇಂದು ಗಿಡಗಂಟಿಗಳಿಂದ ಆವೃತವಾಗಿವೆ. ಕಾಡು ಪ್ರಾಣಿಗಳಿಗೆ ಆಶ್ರಯ ತಾಣಗಳಾಗಿವೆ. ಜಾನುವಾರು ಹಾಗೂ ಕೃಷಿಕರ ಮೇಲೂ ಕಾಡು ಪ್ರಾಣಿಗಳು ದಾಳಿ ಮಾಡಬಹುದಾದ ಸಾಧ್ಯತೆ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಕಬಿನಿ ಮತ್ತು ನುಗು ಜಲಾಶಯಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ 10 ಕೆರೆಗಳ ಸ್ಥಿತಿಗತಿಯನ್ನು ಪರಿಶೀಲಿಸಬೇಕು. ಪೈಪ್‌ಲೈನ್ ಮೂಲಕ ಕೆರೆಗಳಿಗೆ ನೀರು ಹರಿಸಬೇಕು. ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಯ ಪ್ರಯೋಜನವನ್ನು ರೈತರು ಹಾಗೂ ಗ್ರಾಮಸ್ಥರಿಗೆ ತಲುಪಿಸಬೇಕು. ಇಲ್ಲದಿದ್ದರೆ ಸರ್ಕಾರದ ಅನುದಾನ ವ್ಯರ್ಥವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಇನ್ನೊಂದು ತಿಂಗಳು ಕಳೆದರೆ ಯೋಜನೆಯೇ ವ್ಯರ್ಥ!
ಸರ್ಕಾರದ ಆದೇಶದ ಪ್ರಕಾರ ಜುಲೈನಿಂದ ಅಕ್ಟೋಬರ್ ಒಳಗೆ ಡ್ಯಾಂನಿಂದ ಕೆರೆಗಳಿಗೆ ನೀರು ತುಂಬಿಸಬೇಕು. ಇನ್ನೆರಡು ತಿಂಗಳು ಮಾತ್ರ ನೀರು ಹರಿಸಲು ಅವಕಾಶವಿದೆ. ಈ ಅವಧಿಯಲ್ಲೇ ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಂಡು ಕೆರೆಗಳಿಗೆ ಪೈನ್ ಲೈನ್ ಮೂಲಕ ನೀರು ಹರಿಸಬೇಕು ಎಂದು ಈ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈಗ ಬರ ಆವರಿಸಿದೆ. ಕೃಷಿಕರಿಗೆ ನೀರಿನ ಅಗತ್ಯ ಕಳೆದ ವರ್ಷಗಳಿಗಿಂತಲೂ ಈಗ ಅಧಿಕವಾಗಿದೆ. ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ, ಕಬಿನಿ ನೀರಾವರಿ ನಿಗಮ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಹೋರಾಟ ರೂಪಿಸಬೇಕಾಗ್ತುದೆ ಎಂದು ಕೃಷಿಕರು ಎಚ್ಚರಿಸಿದ್ದಾರೆ.
ಕೋಟ್ 1.
ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಸರ್ಕಾರ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಕೆರೆಗಳಿಗೆ ನೀರು ಹರಿಸಲು ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದ್ದರೂ ಹನಿ ನೀರೂ ಹರಿದಿಲ್ಲ. ಕಬಿನಿ ನೀರಾವರಿ ನಿಗಮದವರು ಕೆಪಿಟಿಸಿಎಲ್ ಕಡೆಗೆ, ಕೆಪಿಟಿಸಿಎಲ್ ಅಧಿಕಾರಿಗಳು ಹಣ ಬಂದಿಲ್ಲ ಎಂದು ಹೇಳಿಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಇತ್ತ ಕಬಿನಿ ಮತ್ತು ನುಗು ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದ್ದರೂ, ನಮ್ಮ ಭಾಗದ ಕೆರೆಗಳು ಖಾಲಿ ಇರುವುದು ನೋವಿನ ಸಂಗತಿ.
ಮಹೇಶ್
ಸಾಮಾಜಿಕ ಕಾರ್ಯಕರ್ತ, ಸರಗೂರು
*
ಕೋಟ್ 2
ಕಬಿನಿ ಮತ್ತು ನುಗು ಜಲಾಶಯಗಳ ಪಕ್ಕದಲ್ಲೇ 10 ಕೆರೆಗಳು ಇವೆ. ಅವುಗಳಿಗೆ ನೀರು ತುಂಬಿಸಲು ಸರ್ಕಾರ
ಅನುದಾನ ಖರ್ಚು ಮಾಡಿದೆ. ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡು ವರ್ಷವೇ ಕಳೆದಿದೆ. ಆದರೆ ಕೆರೆಗಳು ಮಾತ್ರ ತುಂಬಿಲ್ಲ. ಇನ್ನೊಂದು ತಿಂಗಳೊಳಗೆ ನೀರು ತುಂಬಿಸುವ ಅವಧಿ ಮುಗಿಯಲಿದೆ. ನಂತರ ನೀರು ತುಂಬಿಸಿದರೂ ಯಾವುದೇ ಪ್ರಯೋಜನವಾಗುವುದಿಲ್ಲ.
ನಾಗೇಶ್
ಹಾದನೂರು ಗ್ರಾಮಸ್ಥ
ಕೋಟ್
ಕೆಪಿಟಿಸಿಎಲ್‌ನಿಂದ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿರುವುದರಿಂದ ಕೆರೆಗಳಿಗೆ ನೀರು ಹರಿಸುವ ಕಾರ್ಯದಲ್ಲಿ ಸ್ವಲ್ಪ ವಿಳಂಬವಾಗಿದೆ. ವಿದ್ಯುತ್ ಸಮಸ್ಯೆ ಬಗೆಹರಿದು ಸೆಸ್ಕ್ ಪವರ್ ಸಪ್ಲೈ ಅಧಿಕಾರಿಗಳು ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿದರೆ 15 ದಿನದೊಳಗೆ ನೀರು ಹರಿಸುವ ವ್ಯವಸ್ಥೆ ಮಾಡಲಾಗುವುದು. ಪಂಪ್‌ಗಳನ್ನು ಕಾರ್ಯಗತಗೊಳಿಸಿ ಸುಲಭವಾಗಿ ಡ್ಯಾಂನಿಂದ ಕೆರೆಗಳಿಗೆ ನೀರು ಹರಿಸುವ ವ್ಯವಸ್ಥೆ ಇದೆ.
ಮಂಜುನಾಥ
ನುಗು ಜಲಾಶಯದ ಕಾರ್ಯಪಾಲಕ ಇಂಜಿನಿಯರ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net