ಯೋಧರು, ಗುರುಗಳನ್ನು ಗೌರವಿಸಿರಿ

ಭಾರತೀಯ ಸೇನೆಗೆ ಮತ್ತು ವಿವಿಧ ಇಲಾಖೆ ಸೇವೆಗೆ ಸೇರಿದ ಯುವಕರನ್ನು ಪಿರಿಯಾಪಟ್ಟಣ ತಾಲೂಕು ಕಿತ್ತೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿವು ಸೈನಿಕ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಜವರೇಗೌಡ, ನರಸೇಗೌಡ, ಜಗದೀಶ್ ಇತರರು ಇದ್ದರು.
ಭಾರತೀಯ ಸೇನೆಗೆ ಮತ್ತು ವಿವಿಧ ಇಲಾಖೆ ಸೇವೆಗೆ ಸೇರಿದ ಯುವಕರನ್ನು ಪಿರಿಯಾಪಟ್ಟಣ ತಾಲೂಕು ಕಿತ್ತೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿವು ಸೈನಿಕ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಜವರೇಗೌಡ, ನರಸೇಗೌಡ, ಜಗದೀಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಜವರೇಗೌಡ ಸಲಹೆ
ರಾವಂದೂರು: ಯೋಧರಿಗೆ, ತಂದೆ- ತಾಯಂದಿರಿಗೆ ಹಾಗೂ ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಪ್ರಾಂಶುಪಾಲ ಜವರೇಗೌಡ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕು ಕಿತ್ತೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿವು ಸೈನಿಕ ಅಕಾಡೆಮಿ ವತಿಯಿಂದ ನಿವೃತ್ತ ಯೋಧರಿಗೆ ಅಭಿನಂದನೆ ಹಾಗೂ ಭಾರತೀಯ ಸೇನೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಇಂದು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ಮೂಲ ಕಾರಣ ನಮ್ಮ ಭಾರತ ಗಡಿಯಲ್ಲಿ ನಮ್ಮನ್ನು ಕಾಯುತ್ತಿರುವ ಯೋಧರು. ಯುವಕರು ದೇಶಾಭಿಮಾನ ಬೆಳೆಸಿಕೊಳ್ಳುವುದರ ಜತೆಗೆ ಸೇನೆ ಸೇರಲು ಪ್ರಯತ್ನಿಸಬೇಕು ಎಂದರು.
ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ನರಸೇಗೌಡ ಮಾತನಾಡಿ, ಇತ್ತೀಚೆಗೆ ಯುವಕರು ಹೆಚ್ಚು ದೇಶ ಸೇವೆಗೆ ಹೋಗುತ್ತಿರುವುದು ಸಂತೋಷದ ಸಂಗತಿ. ಅದರಲ್ಲೂ ತಾಲೂಕಿನಲ್ಲಿ ಶಿವು ಸೈನಿಕ ಅಕಾಡೆಮಿ ಸ್ಥಾಪಿಸುವ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವಲ್ಲಿ ಶಿವು ಅವರ ಶ್ರಮ ಬಹಳ ಮುಖ್ಯವಾಗಿದೆ. ಅದರಲ್ಲೂ ಯಾವುದೇ ಸ್ವಾರ್ಥವಿಲ್ಲದೆ ಉಚಿತವಾಗಿ ಯುವಕರಿಗೆ ಎಲ್ಲ ರೀತಿಯ ತರಬೇತಿ ನೀಡುವ ಮೂಲಕ ಹಲವಾರು ಬಡ ಕುಟುಂಬಗಳಿಗೆ ದಾರಿದೀಪವಾಗಿದ್ದಾರೆ ಎಂದು ತಿಳಿಸಿದರು.
ನಿವೃತ್ತ ಯೋಧರಿಗೆ ಸನ್ಮಾನ: ನಿವೃತ್ತ ಯೋಧರಾದ ಧ್ರುವಕುಮಾರ್, ಪೂಣಚ್ಚ, ಕೃಷ್ಣಪ್ಪ, ರಾಜು ಹಾಗೂ ಭಾರತೀಯ ಸೇನೆಗೆ ಆಯ್ಕೆಯಾದ ಪುನೀತ್ ಕುಮಾರ್, ನಂದನ್, ಕೀರ್ತಿ, ಬೀರೇಶ್, ಅರ್ಜುನ್, ನೀಲಕಂಠ, ವಿಜಯ್ ಹಾಗೂ ಸೆಸ್ಕ್‌ಗೆ ಆಯ್ಕೆಯಾದ ಪ್ರೀತಂ ಅವರನ್ನು ಶಿವ ಸೈನಿಕ ಅಕಾಡೆಮಿಯಿಂದ ಸನ್ಮಾನಿಸಲಾಯಿತು.
ಗ್ರಾಪಂ ಮಾಜಿ ಸದಸ್ಯ ಜಗದೀಶ್ ಮಾತನಾಡಿದರು. ಶಿವು ಸೈನಿಕ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಶಿವು, ಗ್ರಾಪಂ ಮಾಜಿ ಸದಸ್ಯ ದೀಪು, ಯೋಧ ಗಣೇಶ್, ರೇವಣ್ಣ ಹಾಗೂ ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net