ಎಚ್.ಡಿ.ಕೋಟೆ: ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಸೂಚಿಸಿದರು.
ಇತ್ತೀಚೆಗೆ ಪಟ್ಟಣದಲ್ಲಿ ಮಾದಕವಸ್ತು ಸೇವನೆ ಅಮಲಿನಲ್ಲಿ ಯುವಕನ ಕೊಲೆ ನಡೆದ ಪ್ರಕರಣದ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿ, ಪಟ್ಟಣದಲ್ಲಿ ಮಾದಕ ವಸ್ತು ಸೇವನೆಯಲ್ಲಿ ಯುವ ಸಮೂಹ ತೊಡಗಿ ಅಪರಾಧ ಪ್ರಕರಣ ಹೆಚ್ಚಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಇದರಿಂದ ತಾಲೂಕಿಗೆ ಹಾಗೂ ನನಗೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೈಸೂರು ಸೇರಿದಂತೆ ಬೇರೆ ಬೇರೆ ನಗರಗಳಿಂದ ಮಾದಕವಸ್ತು ಪಟ್ಟಣಕ್ಕೆ ಸರಬರಾಜು ಆಗುತ್ತಿರುವ ಬಗ್ಗೆ ಮಾಹಿತಿ ಇದೆ. ಕಳೆದ ಹಲವು ತಿಂಗಳ ಹಿಂದೆ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಇದರ ಬಗ್ಗೆ ನಿಗಾ ಇಡಲು ತಿಳಿಸಿದ್ದೆ. ಹಾಗಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲು ಮಾಡಿ ಜೈಲಿಗೆ ಕಳಿಸುವ ಕೆಲಸವನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಯುವಕರು ದಾರಿತಪ್ಪುವ ಕೆಲಸ ಆಗುತ್ತಿದ್ದು, ಪಾಲಕರು ತಮ್ಮ ಮಕ್ಕಳ ಮೇಲೆ ಗಮನಹರಿಸಬೇಕು. ಕಾಲೇಜಿಗೆ ಹೋದಾಗ ಮತ್ತು ಮನೆಗೆ ಬಂದಾಗ ಅವರ ಚಲನವಲನ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದರು.
ತಾಲೂಕಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಬೇಸರವಾಗುತ್ತಿದ್ದು, ಈಗಾಗಲೇ ಸೂಚನೆ ನೀಡಿದರೂ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಮರುಕಳಿಸಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಗಮನಕ್ಕೆ ತಂದು ಕ್ರಮಕ್ಕೆ ಒತ್ತಾಯಿಸಲಾಗುವುದು. ಮಾದಕವಸ್ತು ಸೇವನೆ ಮಾಡುವವರ ಹಾಗೂ ಮಾರಾಟ ಮಾಡುವವರ ಮಾಹಿತಿಯನ್ನು ಪೊಲೀಸರಿಗೆ ನೀಡಿದವರಿಗೆ ಇಲಾಖೆ ಸೂಕ್ತ ಬಹುಮಾನ ನೀಡಬೇಕು ಎಂದು ಶಾಸಕರು ತಿಳಿಸಿದರು.
ಪುರಸಭಾ ಮಾಜಿ ಉಪಾಧ್ಯಕ್ಷ ಆಸಿಫ್ ಇಕ್ಬಾಲ್ ಮಾತನಾಡಿ, ಪಟ್ಟಣದ ಮುಸ್ಲಿಂ ಬ್ಲ್ಯಾಕ್‌ನಲ್ಲಿ ಯುವಕರು ಮಾದಕವ್ಯಸನಕ್ಕೆ ಒಳಗಾಗಿ, ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ತಿಳಿವಳಿಕೆ ನೀಡಲು ಹೋದವರಿಗೆ ವ್ಯಸನದ ಮತ್ತಿನಲ್ಲಿ ಅವರ ವಿರುದ್ಧ ಗಲಾಟೆ ಮಾಡಿರುವ ಪ್ರಕರಣಗಳು ನಡೆದಿವೆ. ಇದರಿಂದ ನಿವಾಸಿಗಳು ಆತಂಕದಲ್ಲಿ ಇದ್ದಾರೆ. ಹಾಗಾಗಿ, ಪೊಲೀಸ್ ಇಲಾಖೆ ರಾತ್ರಿ ವೇಳೆ ಮತ್ತು ನಿರ್ಜನ ಪ್ರದೇಶಗಳಲ್ಲಿ ಗಸ್ತು ಮಾಡುವ ಕೆಲಸ ಹೆಚ್ಚಾಗಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ಉಪ ಪೋಲಿಸ್ ವರಿಷ್ಠಾಧಿಕಾರಿ ಸಿ.ಮಲ್ಲಿಕ್, ಹುಣಸೂರು ಡಿವೈಎಸ್ಪಿ ರವಿ, ಇನ್‌ಸ್ಪೆಕ್ಟರ್‌ಗಳಾದ ಗಂಗಾಧರ್, ಪ್ರಸನ್ನ ಕುಮಾರ್, ಸಬ್ ಇನ್‌ಸ್ಪೆಕ್ಟರ್ ಚಂದ್ರಹಾಸನ್, ಕಿರಣ್, ಚಿಕ್ಕನಾಯಕ ಇದ್ದರು.