ಸ್ವಚ್ಛ ನಂಜನಗೂಡಿಗೆ ಸಾರ್ವಜನಿಕರು ಕೈ ಜೋಡಿಸಿ

ನಂಜನಗೂಡಿನ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನಗರಸಭೆ ಆಯೋಜಿಸಿದ್ದ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಶಾಸಕ ದರ್ಶನ್ ಚಾಲನೆ ನೀಡಿದರು. ಆಯುಕ್ತರಾದ ಬಸವರಾಜು, ಶ್ರೀಕಂಠ ಸ್ವಾಮಿ, ಗಾಯತ್ರಿ ಮೋಹನ್ ಇತರರು ಇದ್ದರು.
ನಂಜನಗೂಡಿನ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನಗರಸಭೆ ಆಯೋಜಿಸಿದ್ದ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಶಾಸಕ ದರ್ಶನ್ ಚಾಲನೆ ನೀಡಿದರು. ಆಯುಕ್ತರಾದ ಬಸವರಾಜು, ಶ್ರೀಕಂಠ ಸ್ವಾಮಿ, ಗಾಯತ್ರಿ ಮೋಹನ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನ್ ಧ್ರುವನಾರಾಯಣ ಕರೆ
  • ಮ್ಯಾರಥಾನ್ ಸ್ಪರ್ಧೆಗೆ ಚಾಲನೆ
ನಂಜನಗೂಡು: ನಗರದ ಸ್ವಚ್ಛತೆಗಾಗಿ ಅರಿವು ಮೂಡಿಸುವ ಉದ್ದೇಶದಿಂದ ಮ್ಯಾರಥಾನ್ ಸ್ಪರ್ಧೆ ಆಯೋಜಿಸಲಾಗಿದೆ. ಹಾಗಾಗಿ ಸ್ವಚ್ಛ ಸುಂದರ ನಂಜನಗೂಡಿಗೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಕರೆ ನೀಡಿದರು.
ನಗರದ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಭಾನುವಾರ ನಗರಸಭಾ ವತಿಯಿಂದ ಆಯೋಜಿಸಿದ್ದ ಓಡೋನ ನಂಜನಗೂಡಿಗಾಗಿ, ಒಂದಾಗೋಣ ಸ್ವಚ್ಛತೆಗಾಗಿ ಎಂಬ ಶೀರ್ಷಿಕೆಯಲ್ಲಿ ಏರ್ಪಡಿಸಿದ್ದ ಮ್ಯಾರಥಾನ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ನಂಜನಗೂಡು ನಗರ ದಿನೇ ದಿನೆ ವೇಗವಾಗಿ ಬೆಳೆಯುತ್ತಿದೆ. ನಗರದ ವ್ಯಾಪ್ತಿಯಲ್ಲಿ ಎಲ್ಲಿಂದರಲ್ಲಿ ಕಸ ಬಿಸಾಡುವುದು ಪ್ರತಿನಿತ್ಯ ಕಾಣುತ್ತೇವೆ. ಕಸದ ವಾಹನ ದಿನನಿತ್ಯ ಮನೆ ಬಾಗಿಲಿಗೆ ಬರುತ್ತಿದ್ದರೂ, ಪ್ಲಾಸ್ಟಿಕ್ ಕವರ್‌ಗಳಲ್ಲಿ ಕಸವನ್ನು ಹಾಕಿಕೊಂಡು ನಾಲೆಗಳು, ಮುಖ್ಯ ರಸ್ತೆಯ ಹೊರಭಾಗಗಳಲ್ಲಿ ಎಲ್ಲೆಂದರಲ್ಲಿ ಬಿಸಾಡುವುದನ್ನು ತಪ್ಪಿಸಬೇಕಾಗಿದೆ. ಹಸಿ ಮತ್ತು ಒಣ ಕಸಗಳನ್ನು ಬೇರ್ಪಡಿಸಿ ವಾಹನಕ್ಕೆ ನೀಡಿ. ನಗರದ ಪ್ರಮುಖ ಪ್ರವಾಸಿ ತಾಣ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಸ್ನಾನಘಟ್ಟದ ಬಳಿ ಹೊರಭಾಗದಿಂದ ಪ್ರವಾಸಿಗರು ಕಸಕಡ್ಡಿ ಸೇರಿದಂತೆ ಬಟ್ಟೆಗಳನ್ನು ಬಿಸಾಡಿ ಹೋಗುವುದು ಕಂಡುಬರುತ್ತದೆ. ಪ್ರವಾಸಿಗರಿಗೆ ಸ್ಥಳೀಯರು ಕೂಡ ಸರಿಯಾದ ಮಾಹಿತಿ ನೀಡಿ ನದಿಗೆ ಕಸಕಡ್ಡಿಗಳನ್ನು ಬಿಸಾಡದಂತೆ ಮನವರಿಕೆ ಮಾಡಬೇಕಿದೆ ಎಂದರು.
ಮ್ಯಾರಥಾನ್ ಹಿನ್ನೆಲೆ ಜೂನಿಯರ್ ಕಾಲೇಜು ಆವರಣದಿಂದ ಮಹಾತ್ಮ ಗಾಂಧಿ ರಸ್ತೆಯ ಮೂಲಕ ನಗರಸಭೆಗೆ ತಲುಪಿ, ರಾಷ್ಟ್ರಪತಿ ರಸ್ತೆ ಮೂಲಕ ಮತ್ತೆ ಜೂನಿಯರ್ ಕಾಲೇಜು ಆವರಣಕ್ಕೆ ವೇಗವಾಗಿ ಆಗಮಿಸುವ ಸ್ಪರ್ಧಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ನಗರಸಭಾ ಆಯುಕ್ತ ಬಸವರಾಜು, ಡಿವೈಎಸ್ಪಿ ಧರ್ಮೇಂದ್ರ, ಕೃಷ್ಣಕಾಂತ ಕೋಳಿ, ಮಾಜಿ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಗಾಯತ್ರಿ ಮೋಹನ್, ಮಂಜುನಾಥ್, ಕಮಲೇಶ್ ಸೇರಿದಂತೆ ನೂರಾರು ಸಂಖ್ಯೆಯ ಸ್ಪರ್ಧಿಗಳು ಹಾಗೂ ಮುಖಂಡರು, ನಗರಸಭಾ ಅಧಿಕಾರಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net