ಅಹಿಂದ ರೈತಸಂಘದಿಂದ ಪ್ರತಿಭಟನೆ

 ಹುಣಸೂರು ನಗರದಲ್ಲಿ ಅಹಿಂದ ರೈತಸಂಘದ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸೋಮನಹಳ್ಳಿ ಶಿವಶೇಖರ್, ಚನ್ನಪ್ಪ ನವಿಲೂರು, ವಾಸುದೇವ್, ಮಹದೇವಮ್ಮ, ಶ್ರುತಿ, ಭಾಗ್ಯಾ ಇದ್ದರು.
ಹುಣಸೂರು ನಗರದಲ್ಲಿ ಅಹಿಂದ ರೈತಸಂಘದ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸೋಮನಹಳ್ಳಿ ಶಿವಶೇಖರ್, ಚನ್ನಪ್ಪ ನವಿಲೂರು, ವಾಸುದೇವ್, ಮಹದೇವಮ್ಮ, ಶ್ರುತಿ, ಭಾಗ್ಯಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Demand for the formation of a separate tobacco board in the state
ಹುಣಸೂರು: ರಾಜ್ಯಕ್ಕೆ ಪ್ರತ್ಯೇಕ ತಂಬಾಕು ಮಂಡಳಿ ರಚನೆ, ರೈತರಿಗೆ ಸಾಗುವಳಿ ಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಹಿಂದ ರೈತಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಸಂವಿಧಾನ ವೃತ್ತದಲ್ಲಿ ಜಮಾವಣೆಗೊಂಡು ಸಂಘದ ನೂರಾರು ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಪ್ರತಿಭಟನಾ ಮೆರವಣಿಗೆ ನಡೆಸಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಸೋಮನಹಳ್ಳಿ ಶಿವಶೇಖರ್, ಕಳದ 5 ದಶಕಗಳಿಂದ ಹುಣಸೂರು ಉಪವಿಭಾಗ ವ್ಯಾಪ್ತಿಯಲ್ಲಿ ವಿದೇಶಗಳಿಗೆ ರಪ್ತು ಆಗುವಂತಹ ಗುಣಮಟ್ಟದ ವರ್ಜೀನಿಯ ತಂಬಾಕನ್ನು ರೈತರು ಬೆಳೆಯುತ್ತಿದ್ದಾರೆ. ಆದರೆ ಈ ರೈತರಿಗೆ ವೈಜ್ಞಾನಿಕ ಮತ್ತು ಉತ್ತಮ ದರವನ್ನು ನೀಡುವಲ್ಲಿ ಮಾತ್ರ ತಂಬಾಕು ಮಂಡಳಿ ಸೋತಿದೆ. ಇದಕ್ಕೆ ಪ್ರಮುಖ ಕಾರಣ ತಂಬಾಕು ಮಂಡಳಿ ಸಂಪೂರ್ಣವಾಗಿ ಆಂಧ್ರಪ್ರದೇಶದ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಹಿಡಿತದಲ್ಲಿದೆ. ರಾಜ್ಯದ ತಂಬಾಕು ರೈತರಿಗೆ ನ್ಯಾಯ ಸಿಗಬೇಕೆಂದರೆ ರಾಜ್ಯಕ್ಕೆ ಪ್ರತ್ಯೇಕ ತಂಬಾಕು ಮಂಡಳಿಯನ್ನು ರಚಿಸಿ ರಾಜ್ಯದ ಅಧಿಕಾರಿಗಳನ್ನೇ ನೇಮಕಗೊಳಿಸಬೇಕು ಎಂದು ಆಗ್ರಹಿಸಿದರು.
ಹುಣಸೂರು ನಗರದ ಗಡಿಭಾಗದಿಂದ 7 ಕಿ.ಮೀ. ವ್ಯಾಪ್ತಿಯಲ್ಲಿ ರೈತರು ಫಾರ್ಮ್ ನಂ.50, 53 ಮತ್ತು 57ರಡಿ ಸಾಗುವಳಿ ಪತ್ರಕ್ಕಾಗಿ ಈ ಹಿಂದೆ ಅರ್ಜಿ ಸಲ್ಲಿಸಿದ್ದು, ಇದೀಗ ನಗರಸಭೆ ವ್ಯಾಪ್ತಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಭೂಮಿ ಬಂದಿದ್ದು, ರೈತರಿಗೆ ಸಾಗುವಳಿ ಪತ್ರ ಸಿಗದೆ ಅನ್ಯಾಯವಾಗುತ್ತಿದೆ. ಸಮಸ್ಯೆಯನ್ನು ಬಗೆಹರಿಸಿ ರೈತರಿಗೆ ನ್ಯಾಯ ಒದಗಿಸಬೇಕು. ರಾಜ್ಯ ಸರ್ಕಾರ ಪೋಡಿಮುಕ್ತ ಗ್ರಾಮದ ಅಭಿಯಾನಕ್ಕೆ ಕರೆ ನೀಡಿದ್ದರೂ ತಾಲೂಕಿನಲ್ಲಿ ಒಂದು ಗ್ರಾಮವೂ ಈವರೆಗೆ ಪೋಡಿಮುಕ್ತ ಗ್ರಾಮವಾಗಿಲ್ಲ. ಕಂದಾಯ ಮತ್ತು ಸರ್ವೇ ಇಲಾಖೆ ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ತಹಸೀಲ್ದಾರ್ ಜೆ.ಮಂಜುನಾಥ್ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಚನ್ನಪ್ಪ ನವಿಲೂರು, ರಾಜ್ಯ ಕಾರ್ಯದರ್ಶಿ ವಾಸುದೇವ, ಮುಖಂಡರಾದ ಹೊಸೂರು ಕೃಷ್ಣಕುಮಾರ್, ವರದರಾಜು, ಮಹದೇವಮ್ಮ, ಶ್ರುತಿ, ಭಾಗ್ಯಾ, ಎ.ಪಿ.ಸ್ವಾಮಿ, ಉಮೇಶ್, ಕೊಳಗಟ್ಟ ಕೃಷ್ಣ, ಬೆಂಕಿ ಮಹದೇವ್ ಇತರರು ಇದ್ದರು.
ಹಕ್ಕೊತ್ತಾಯಗಳಿವು:
  • ತಾಲೂಕಿನ ಉದ್ದೂರು ಮತ್ತು ಆಸ್ಪತ್ರೆ ಕಾವಲ್ ಸೊಸೈಟಿ ಭೂಮಿಗಳಿಗೆ ಶೀಘ್ರ ಸಾಗುವಳಿ ಪತ್ರ ವಿತರಿಸಬೇಕು.
  • ನಗರದ ಎಪಿಎಂಸಿ ಯಾರ್ಡಿನಲ್ಲಿ ರೈತರ ಬಳಕೆಗಾಗಿ ನಿರ್ಮಿಸಿರುವ ಮಳಿಗೆಗಳಲ್ಲಿ ದಲ್ಲಾಳಿಗಳ ದರ್ಬಾರ್ ನಡೆದಿದ್ದು, ರೈತರಿಗೆ ಅನುಕೂಲ ಮಾಡಿಕೊಡಬೇಕು.
  • ತಾಲೂಕಿನಲ್ಲಿ 5 ಸಾವಿರಕ್ಕೂ ಹೆಚ್ಚು ಭೂಮಿಯನ್ನು ಲ್ಯಾಂಡ್ ಬ್ಯಾಂಕ್‌ಗೆ ಸೇರ್ಪಡೆಗೊಳಿಸಿ ಕೈಗಾರಿಕೋದ್ಯಮಿಗಳಿಗೆ ನೀಡುವ ಹುನ್ನಾರ ನಡೆದಿದ್ದು, ಜಿಲ್ಲಾಧಿಕಾರಿಗಳು ಗಮನಿಸಿ ತಡೆಹಿಡಿಯಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net