ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ಅಚ್ಚುಕಟ್ಟು ಪ್ರದೇಶದ ರಸ್ತೆ ಅಭಿವೃದ್ಧಿಗೆ ಶಾಸಕ ದರ್ಶನ್ ಭೂಮಿ ಪೂಜೆ ನೆರವೇರಿಸಿದರು. ಕಾಡ ಅಧ್ಯಕ್ಷ ಮರಿಸ್ವಾಮಿ, ಉಪ್ಪಿನಹಳ್ಳಿ ಶಿವಣ್ಣ, ರಘು, ಮಂಜು ಇತರರು ಇದ್ದರು.
ನಂಜನಗೂಡು: ಕ್ಷೇತ್ರ ವ್ಯಾಪ್ತಿಯ ಎಲ್ಲ ಅಚ್ಚುಕಟ್ಟು ಪ್ರದೇಶಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.
ತಾಲೂಕಿನ ದೇವರಸನಹಳ್ಳಿ ಹಾಗೂ ಹೊಸೂರು ಗ್ರಾಮಗಳ ಅಚ್ಚುಕಟ್ಟು ಪ್ರದೇಶಗಳ ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
34 ಕ್ಷೇತ್ರಗಳ ಪೈಕಿ ಕಾಡಾದಿಂದ ಕ್ಷೇತ್ರಕ್ಕೆ 2.30 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇಂದು 1 ಕೋಟಿ ರೂ. ವೆಚ್ಚದಲ್ಲಿ ಅವಶ್ಯವಿರುವ ಕಡೆಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಡಾದಿಂದ ಕಡಿಮೆ ಅನುದಾನ ಬರುತ್ತಿದೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ. ಯತೀಂದ್ರ ಹಾಗೂ ಡಿ.ಕೆ. ಶಿವಕುಮಾರ್ ಅವರ ನಿರಂತರ ಶ್ರಮದಿಂದ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಹಣದಲ್ಲಿ ಕಾಮಗಾರಿಗಳನ್ನು ನಡೆಸಲಾಗುವುದು. ಕಳೆದ ಬಾರಿ ದೇವರಸನಹಳ್ಳಿ ರಸ್ತೆ ಅಭಿವೃದ್ಧಿಗಾಗಿ ಹಣ ಬಿಡುಗಡೆಯಾಗಿತ್ತು. 25 ವರ್ಷಗಳಿಂದ ಅಭಿವೃದ್ಧಿ ಕಾಣದ ರಸ್ತೆ ಇಂದು ಮುಕ್ತಾಯದ ಹಂತದಲ್ಲಿದೆ. ಹಾಗೆ ಹೊಸೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಂಡಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನದ ಮೂಲಕ ಗ್ರಾಮವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಸಿದ್ದಲಿಂಗಪ್ಪ, ಉಪ್ಪಿನಹಳ್ಳಿ ಶಿವಣ್ಣ, ದೇವರಸನಹಳ್ಳಿ ರಘು, ಕಳಲೆ ರಾಜೇಶ್, ಸೌಭಾಗ್ಯ ನಂಜುಂಡಸ್ವಾಮಿ, ಮಂಜು, ಮುನಿಯಮ್ಮ ಮತ್ತಿತರರು ಹಾಜರಿದ್ದರು.