ಮಣ್ಣಿನ ಫಲವತ್ತತೆ ಹೆಚ್ಚಳಕ್ಕೆ ಸಾವಯವ ಕೃಷಿ ಸಹಕಾರಿ

ಎಚ್ ಡಿ ಕೋಟೆ ಪಟ್ಟಣದ ತೋಟಗಾರಿಕಾ ಕಚೇರಿಯಲ್ಲಿ ಆಯೋಜಿಸಿದ್ದ ರೈತರ ಸಭೆಯಲ್ಲಿ ವೈಜ್ಞಾನಿಕ ಹಾಗೂ ಸಾವಯವ ಕೃಷಿ ಪದ್ಧತಿಗಳ ಬಗ್ಗೆ ತೋಟಗಾರಿಕೆ ಇಲಾಖೆ  ಸಹಾಯಕ ನಿರ್ದೇಶಕಿ ನೇತ್ರಾವತಿ ಮಾಹಿತಿ ನೀಡಿದರು. ಹ್ಯಾಂಡ್‌ಪೋಸ್ಟ್ ರವಿ, ಪ್ರಕಾಶ್, ಬಿ.ಸತೀಶ್ ಆರಾಧ್ಯ, ಮಲಾರ ಪುಟ್ಟಯ್ಯ, ರೇವಣ್ಣ, ಶೈಲಾರಾಧ್ಯ, ನಾಗರಾಜು, ರಘು ಇತರರು ಇದ್ದರು.
ಎಚ್ ಡಿ ಕೋಟೆ ಪಟ್ಟಣದ ತೋಟಗಾರಿಕಾ ಕಚೇರಿಯಲ್ಲಿ ಆಯೋಜಿಸಿದ್ದ ರೈತರ ಸಭೆಯಲ್ಲಿ ವೈಜ್ಞಾನಿಕ ಹಾಗೂ ಸಾವಯವ ಕೃಷಿ ಪದ್ಧತಿಗಳ ಬಗ್ಗೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ನೇತ್ರಾವತಿ ಮಾಹಿತಿ ನೀಡಿದರು. ಹ್ಯಾಂಡ್‌ಪೋಸ್ಟ್ ರವಿ, ಪ್ರಕಾಶ್, ಬಿ.ಸತೀಶ್ ಆರಾಧ್ಯ, ಮಲಾರ ಪುಟ್ಟಯ್ಯ, ರೇವಣ್ಣ, ಶೈಲಾರಾಧ್ಯ, ನಾಗರಾಜು, ರಘು ಇತರರು ಇದ್ದರು.
Published on

ಎಚ್.ಡಿ.ಕೋಟೆ:

ತಾಲೂಕಿನಲ್ಲಿ ನೀರಿನ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ ತೋಟಗಾರಿಕಾ ಬೆಳೆಗಳ ತೇವಾಂಶವನ್ನು ಕಾಪಾಡಿಕೊಳ್ಳಲು ರೈತರು ಹೆಚ್ಚಿನ ಗಮನ ಹರಿಸಬೇಕು ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕಿ ನೇತ್ರಾವತಿ ಸಲಹೆ ನೀಡಿದರು.

ಪಟ್ಟಣದ ತೋಟಗಾರಿಕಾ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ರೈತರ ಸಭೆಯಲ್ಲಿ ಅವರು ಮಾತನಾಡಿದರು.
ಕಡಿಮೆ ನೀರಿನ ಲಭ್ಯತೆಯಲ್ಲಿಯೇ ಬೆಳೆಗಳ ಬೆಳವಣಿಗೆ ಉತ್ತಮವಾಗುವಂತೆ ವೈಜ್ಞಾನಿಕ ಹಾಗೂ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಜಮೀನಿನಲ್ಲಿ ಎರೆಹುಳು ಗೊಬ್ಬರ ಬಳಸುವುದರ ಜತೆಗೆ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೆ, ತೇವಾಂಶವನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ತೆಂಗಿನ ಬೆಳೆಗಾರರು ತೆಂಗಿನ ಗಿಡಗಳಿಗೆ ಉಪ್ಪು ಹಾಕುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ತೆಂಗಿನ ಬಿತ್ತನೆ ಸಂದರ್ಭದಲ್ಲಿ ಮಾತ್ರ ಅಗತ್ಯ ಪ್ರಮಾಣದಲ್ಲಿ ಉಪ್ಪನ್ನು ಬಳಸಬಹುದಾಗಿದ್ದು, ನಂತರದ ಬೆಳವಣಿಗೆಯ ಹಂತದಲ್ಲಿ ತೆಂಗಿನ ಗಿಡಗಳಿಗೆ ಉಪ್ಪು ಹಾಕುವುದನ್ನು ರೈತರು ತಪ್ಪಿಸಬೇಕು ಎಂದು ಮನವಿ ಮಾಡಿದರು. ಅತಿಯಾದ ಉಪ್ಪಿನ ಬಳಕೆಯಿಂದ ಮಣ್ಣಿನ ಗುಣಮಟ್ಟ ಹಾಗೂ ಬೆಳೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ರೈತರು ಎಚ್ಚರಿಕೆ ವಹಿಸಬೇಕು ಎಂದರು.
ಅನುಭವಿ ರೈತರ ಜಮೀನುಗಳಿಗೆ ಭೇಟಿ: ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಆದಾಯ ಗಳಿಸುತ್ತಿರುವ ರೈತರ ಜಮೀನುಗಳನ್ನು ತೋಟಗಾರಿಕಾ ಇಲಾಖೆ ಗುರುತಿಸಿದೆ. ಇಂತಹ ಪ್ರಗತಿಪರ ರೈತರ ಅನುಭವ ಹಾಗೂ ಕೃಷಿ ಪದ್ಧತಿಗಳನ್ನು ಇತರ ರೈತರಿಗೆ ಪರಿಚಯಿಸುವ ಉದ್ದೇಶದಿಂದ ಅವರ ಜಮೀನುಗಳಿಗೆ ರೈತರ ಪ್ರವಾಸ ಆಯೋಜಿಸಲಾಗುತ್ತಿದೆ. ಆಸಕ್ತ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಾವಯವ ಕೃಷಿಯ ಕುರಿತು ಪ್ರಾಯೋಗಿಕ ಮಾಹಿತಿ ಪಡೆದುಕೊಳ್ಳಬೇಕು ಎಂದು ನೇತ್ರಾವತಿ ಹೇಳಿದರು.
ರೈತ ಮಿತ್ರದಿಂದ ಹಲವು ಸೌಲಭ್ಯ:
ರೈತ ಮಿತ್ರ ಯೋಜನೆಯಲ್ಲಿ ನೋಂದಾಯಿಸಿಕೊಂಡು 5 ರಿಂದ 7 ಗುಂಟೆ ಜಮೀನಿನಲ್ಲಿ ಸೊಪ್ಪು ಬೆಳೆಯುವ ರೈತರಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು. ರೈತರು ಬೆಳೆದ ಸೊಪ್ಪಿನ ಖರೀದಿಯನ್ನು ರೈತ ಮಿತ್ರ ವತಿಯಿಂದಲೇ ಮಾಡಲಾಗುತ್ತದೆ. ಬಿತ್ತನೆಗೆ ಅಗತ್ಯವಿರುವ ಬೀಜ ಹಾಗೂ ಸಾವಯವ ಗೊಬ್ಬರವನ್ನು ಸಹ ಉಚಿತವಾಗಿ ನೀಡಲಾಗುವುದು. ಈ ಯೋಜನೆಯಡಿ ಇದುವರೆಗೆ ಇಲಾಖೆಯ ವತಿಯಿಂದ 40 ರೈತರ ಹೆಸರುಗಳನ್ನು ಸೂಚಿಸಲಾಗಿದ್ದು, ಆಸಕ್ತ ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.

ಪ್ರತಿ ಗ್ರಾಮದಲ್ಲೂ ಸುಮಾರು 50 ಎಕರೆ ತೋಟಗಾರಿಕಾ ಪ್ರದೇಶದ ರೈತರನ್ನು ಒಳಗೊಂಡ ಗುಂಪುಗಳನ್ನು ರಚಿಸಲಾಗಿದೆ. ಈ ಗುಂಪಿನ ರೈತರ ಅಗತ್ಯಕ್ಕೆ ಅನುಗುಣವಾಗಿ ಹಸು ಸಾಕಣೆ ಮ್ಯಾಟ್, ಜೀವಾಮೃತ ತಯಾರಿಕೆಗೆ ಡ್ರಮ್ ಹಾಗೂ ಎರೆಹುಳು ತೊಟ್ಟಿ ನಿರ್ಮಾಣಕ್ಕೆ ಸಹಾಯಧನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಇಲಾಖೆಯಿಂದ ಒದಗಿಸಲಾಗುವುದು. ರೈತರು ಇಲಾಖೆಯ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಕೃಷಿ ವೆಚ್ಚ ಕಡಿಮೆ ಮಾಡಿಕೊಂಡು ಆದಾಯ ಹೆಚ್ಚಿಸಿಕೊಳ್ಳಬೇಕು ಎಂದರು.

ಸಭೆಯ ವೇಳೆ ರೈತರಿಗೆ ದ್ರವ ರೂಪದ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣವನ್ನು ಎಕರೆಗೆ ಮೂರು ಲೀಟರ್‌ನಂತೆ ವಿತರಿಸಲಾಯಿತು. ಇದರ ಬಳಕೆ, ಸಾವಯವ ಕೃಷಿ ಪದ್ಧತಿ, ಬೆಳೆಗಳ ನಿರ್ವಹಣೆ, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ವಿಧಾನ ಹಾಗೂ ನೀರಿನ ಸಮರ್ಪಕ ಬಳಕೆ ಕುರಿತು ರೈತರಿಗೆ ಅಗತ್ಯ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಹ್ಯಾಂಡ್‌ಪೋಸ್ಟ್ ರವಿ, ಪ್ರಕಾಶ್, ಬಿ.ಸತೀಶ್ ಆರಾಧ್ಯ, ಮಲಾರ ಪುಟ್ಟಯ್ಯ, ರೇವಣ್ಣ, ಶೈಲಾರಾಧ್ಯ, ನಾಗರಾಜು, ರಘು ಸೇರಿದಂತೆ ರೈತರು ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net