ಚಾಮುಂಡಿ ದರ್ಶನಕ್ಕೆ 2 ಸಾವಿರ ಟಿಕೆಟ್‌ಗೆ ವಿರೋಧ

ಚಾಮುಂಡಿ ವಿಶೇಷ ದರ್ಶನಕ್ಕೆ 2 ಸಾವಿರ ರೂ. ಟಿಕೆಟ್ ನಿಗದಿಗೊಳಿಸಿರುವುದನ್ನು ವಿರೋಧಿಸಿ  ಕರ್ನಾಟಕ ಸೇನಾ ಪಡೆಯಿಂದ ಸೋಮವಾರ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾ ಯಿತು. ತೇಜೇಶ್, ಲೋಕೇಶ್‌ಗೌಡ, ಗೋಲ್ಡನ್ ಸುರೇಶ್, ಪ್ರಭುಶಂಕರ್, ಕೃಷ್ಣಪ್ಪ, ಪ್ರಜೀಶ್, ಸಿಂಧುವಳ್ಳಿ ಶಿವಕುಮಾರ್ ಇದ್ದರು.
ಚಾಮುಂಡಿ ವಿಶೇಷ ದರ್ಶನಕ್ಕೆ 2 ಸಾವಿರ ರೂ. ಟಿಕೆಟ್ ನಿಗದಿಗೊಳಿಸಿರುವುದನ್ನು ವಿರೋಧಿಸಿ ಕರ್ನಾಟಕ ಸೇನಾ ಪಡೆಯಿಂದ ಸೋಮವಾರ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾ ಯಿತು. ತೇಜೇಶ್, ಲೋಕೇಶ್‌ಗೌಡ, ಗೋಲ್ಡನ್ ಸುರೇಶ್, ಪ್ರಭುಶಂಕರ್, ಕೃಷ್ಣಪ್ಪ, ಪ್ರಜೀಶ್, ಸಿಂಧುವಳ್ಳಿ ಶಿವಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಸೇನಾಪಡೆ ಪ್ರತಿಭಟನೆ
ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರಗಳಂದು ದೇವಿಯ ವಿಶೇಷ ದರ್ಶನಕ್ಕೆ 2 ಸಾವಿರ ರೂ. ಟಿಕೆಟ್ ನಿಗದಿ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ಚಾಮುಂಡಿಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಭಕ್ತರಿಂದ 2,000 ರೂಪಾಯಿ ಲೂಟಿ ಮಾಡಲು ಹೊರಟಿದೆ. ಈ ದುಬಾರಿ ಟಿಕೆಟ್‌ನಿಂದಾಗಿ ಸಾಮಾನ್ಯ ಭಕ್ತರನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಉಚಿತ ಗ್ಯಾರಂಟಿಗಳನ್ನು ಘೋಷಿಸಿ, ಈಗ ಅವುಗಳಿಗೆ ಹಣ ಹೊಂದಿಸಲಾಗದೆ ದಿವಾಳಿಯಾಗಿದೆ. ಇದರಿಂದಾಗಿ ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲೆ ಕಣ್ಣು ಹಾಕಿ, ಭಕ್ತರಿಂದ ಹಣ ವಸೂಲಿ ಮಾಡಲು ಮುಂದಾಗಿರುವುದು ಖಂಡನೀಯ. ಚಾಮುಂಡಿಬೆಟ್ಟದಲ್ಲಿ ಈ ಹಿಂದೆ ಇದ್ದ 50 ರೂ. ಮತ್ತು 300 ರೂ.ಗಳ ವಿಶೇಷ ದರ್ಶನ ಟಿಕೆಟ್‌ಗಳನ್ನು ರದ್ದುಗೊಳಿಸಿರುವುದು ಸರಿಯಲ್ಲ ಎಂದು ಕಿಡಿ ಕಾರಿದರು.
ಚಾಮುಂಡಿಬೆಟ್ಟವು ಮೈಸೂರು ಮಹಾರಾಜರ ಕೊಡುಗೆ. ಭಕ್ತರಿಗೆ ದೇವಿಯ ದರ್ಶನ ಉಚಿತವಾಗಿ ಸಿಗಬೇಕು ಎಂಬುದು ಅವರ ಆಶಯವಾಗಿತ್ತು. ಆದರೆ, ಸರ್ಕಾರ ಇಲ್ಲಿ ವ್ಯಾಪಾರೀಕರಣ ಮಾಡುತ್ತಿದೆ. ಸ್ವತಃ ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಒಡೆಯರ್ ಮತ್ತು ಪ್ರಮೋದಾದೇವಿಯವರೇ ಈ ನಿರ್ಧಾರ ಖಂಡಿಸಿದ್ದಾರೆ. ಇಂತಹ ದುಬಾರಿ ಟಿಕೆಟ್ ವ್ಯವಸ್ಥೆ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಲ್ಲೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
2,000 ರೂ ವಿಶೇಷ ದರ್ಶನ ಟಿಕೆಟ್ ಅನ್ನು ತಕ್ಷಣವೇ ರದ್ದುಗೊಳಿಸಿ, ಕಳೆದ ವರ್ಷಗಳಂತೆ 50 ರೂ. ಮತ್ತು 300 ರೂ.ಗಳ ದರ್ಶನ ವ್ಯವಸ್ಥೆ ಮುಂದುವರಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ತೇಜೇಶ್, ಪದಾಧಿಕಾರಿಗಳಾದ ಗೋಲ್ಡನ್ ಸುರೇಶ್, ಪ್ರಭುಶಂಕರ್, ಕೃಷ್ಣಪ್ಪ, ಪ್ರಜೀಶ್, ಸಿಂಧುವಳ್ಳಿ ಶಿವಕುಮಾರ್, ಗಿರೀಶ್, ಬೋಗಾದಿ ಸಿದ್ದೇಗೌಡ, ಮಧುವನ ಚಂದ್ರು, ಸೋಮೇಗೌಡ, ಹೊನ್ನೇಗೌಡ, ಮಂಜುಳಾ, ಶೋಭಾ ರಾಣಿಗೌಡ, ವಿಜಯೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net