ಶಾಲೆಯಲ್ಲಿ ಹಿಜಾಬ್ ಸೇರಿದಂತೆ ಜನಿವಾರ, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿರುವ ಕ್ರಮದ ಕುರಿತು ಪ್ರತಿಕ್ರಿಯೆ
ಮಕ್ಕಳು ನೆಮ್ಮದಿಯಾಗಿ ಓದಲಿ
ಯಾವುದು ಬೇಕು, ಯಾವುದು ಬೇಡ ಎಂದು ಪ್ರತ್ಯೇಕ ಸಂಕೇತಗಳಲ್ಲಿ ನಾನು ಹೇಳುವುದಿಲ್ಲ.
ಯಾರೋ ಎಲ್ಲೋ ಕೂತು ಒಂದು ಕಿಡಿ ಹಚ್ಚಿದರೆ ಅದು ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತದೆ. ಅದು ಆಗಬಾರದು
ಮೈಸೂರು: ಯಾವ ಧಾರ್ಮಿಕ ಸಂಕೇತಗಳ ಬಗ್ಗೆ ಮಾತನಾಡಲ್ಲ. ಮಕ್ಕಳು ಸ್ವಾತಂತ್ರೃವಾಗಿ ನೆಮ್ಮದಿಯಾಗಿ ಓದಬೇಕಷ್ಟೇ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಹೇಳಿದರು.
ಶಾಲೆಯಲ್ಲಿ ಹಿಜಾಬ್ ಸೇರಿದಂತೆ ಜನಿವಾರ, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿರುವ ರಾಜ್ಯ ಸರ್ಕಾರದ ಕ್ರಮದ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿದ, ಮಕ್ಕಳಿಗೆ ಓದಲು ಮುಕ್ತವಾದ ವಾತಾವರಣ ನಿರ್ಮಾಣವಾಗಬೇಕು.
ಈಗ ಆ ವಾತಾವರಣವಿದೆ. ಅಷ್ಟನ್ನು ಮಾತ್ರ ನಾನು ಹೇಳಬಲ್ಲೇ. ಯಾವುದು ಬೇಕು, ಯಾವುದು ಬೇಡ ಎಂದು ಪ್ರತ್ಯೇಕ ಸಂಕೇತಗಳಲ್ಲಿ ನಾನು ಹೇಳುವುದಿಲ್ಲ. ಯಾರೋ ಎಲ್ಲೋ ಕೂತು ಒಂದು ಕಿಡಿ ಹಚ್ಚಿದರೆ ಅದು ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತದೆ. ಅದು ಆಗಬಾರದು ಎಂದು ಆಶಿಸಿದರು.
ಅಧಿಕಾರ ಹಸ್ತಾಂತರ ಗೊಂದಲ ಕುರಿತು ಪ್ರತಿಕ್ರಿಯಿಸಿದ ಅವರು, ಹೆರಿಗೆಯಲ್ಲಿ ಗಂಡಾಗುತ್ತದೆಯೋ, ಹೆಣ್ಣಾಗುತ್ತದೆಯೋ ನನಗೆ ಗೊತ್ತಿಲ್ಲ. ಏನಾದರೂ ಮೊದಲು ಆಗಲಿ. ಆದ ಮೇಲೆ ಹೆಸರು ಇಡೋಣ. ಒಟ್ಟಿನಲ್ಲಿ ಏನಾದರು ಒಂದು ಆಗಬೇಕಿದೆ ಎಂದು ಹೇಳಿದರು.
ಸಂಪುಟ ಪುನಾರಚನೆಯೋ, ಸಂಪುಟ ವಿಸ್ತರಣೆಯೋ, ಅಧಿಕಾರ ಹಂಚಿಕೆಯೋ ಏನಾಗುತ್ತೊ ಯಾರಿಗೆ ಗೊತ್ತು. ಆದರೆ ಏನಾದರೂ ಒಂದು ಮೊದಲು ಆಗಬೇಕು. ಪಕ್ಷದ ವಿಚಾರ ಈಗ ಬೀದಿ ಜಗಳವಾಗಿದೆ. ಇದು ಮೊದಲು ನಿಲ್ಲಬೇಕು. ಹಾದಿಬೀದಿಯಲ್ಲಿ ಪಕ್ಷದ ವಿಚಾರ ಚರ್ಚೆ ಮಾಡುತ್ತಿದ್ದಾರೆ. ಇದನ್ನು ಹೈಕಮಾಂಡ್ ಮೊದಲು ತಪ್ಪಿಸಬೇಕಿದೆ ಎಂದು ಒತ್ತಾಯಿಸಿದರು.
ಎರಡೂವರೆ ವರ್ಷಕ್ಕೆ ಸಂಪುಟ ಪುನಾರಚನೆಯಾಗಬೇಕಿತ್ತು. ಈಗ 3 ವರ್ಷ ಮುಗಿದಿದೆ. ಅಧಿಕಾರ ಹಸ್ತಾಂತರ ವಿಚಾರ ನಮ್ಮ ಮುಂದೆ ಚರ್ಚೆ ನಡೆದಿಲ್ಲ. ಈಗಲಾದರೂ ಹೈಕಮಾಂಡ್ ಹೇಳಲಿ. ನಾವು ಅದನ್ನು ನಂಬಿದ್ದೇವೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.
ಈಗ ಕೇರಳ ವಿಚಾರವೂ ಮುಗಿದಿದೆ. ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯೂ ಮುಗಿದಿದೆ. ಈಗ ಬೇರೆ ಯಾವ ರಾಜಕೀಯ ಬೆಳವಣಿಗೆಗಳು ಎಲ್ಲೂ ಇಲ್ಲ. ಈಗ ಕರ್ನಾಟಕದ ವಿಚಾರವನ್ನು ಹೈಕಮಾಂಡ್ ಕೈಗೆತ್ತಿಕೊಳ್ಳಬೇಕು. ಹೈಕಮಾಂಡ್ ಈಗಲಾದರೂ ನಮ್ಮ ಮೇಲೆ ದೃಷ್ಟಿ ಬೀರಲಿ. ನಮ್ಮ ವಿಚಾರಗಳ ಕಡೆ ಗಮನಹರಿಸಲಿ ಎಂದು ಕೋರಿದರು.