ನಂಜನಗೂಡು ರಸಬಾಳೆ ಬೆಳೆಯಲು ಸರ್ಕಾರದಿಂದ ದೊರೆಯುತ್ತಿರುವ ಪ್ರೋತ್ಸಾಹದ ಪರಿಣಾಮವಾಗಿ ಇದೀಗ ನಂಜಗೂಡು ರಸಬಾಳೆ ಬೆಳೆಯ ಕ್ಷೇತ್ರ ವಿಸ್ತರಣೆಯಾಗುತ್ತಿದೆ. 2023ರಲ್ಲಿ 30 ಹೆಕ್ಟೇರ್ ಪ್ರದೇಶದಲ್ಲಿ ನಂಜನಗೂಡು ರಸಬಾಳೆ ಬೆಳೆಯಲಾಗುತಿತ್ತು. ಇದೀಗ ಈ ಕ್ಷೇತ್ರ 85.30 ಹೆಕ್ಟೇರ್‌ಗ ವಿಸ್ತರಣೆಗೊಂಡಿದೆ. ನಂಜನಗೂಡು ತಾಲೂಕಿನ ಹನುಮನಪುರ, ಸಿಂಧುವಳ್ಳಿ, ಮಾಡ್ರಹಳ್ಳಿ, ಹೆಮ್ಮರಗಾಲ, ಹಂಪಾಪುರ, ವೀರದೇವರಪುರ, ತಾಂಡವಪುರ, ಹಗಿನವಾಳು, ಹಳೇಪುರ, ಅಂಬಳೆ, ಕೊಗಲೂರು, ಕುರಹಟ್ಟಿ, ದೇವಿರಮ್ಮನಹಳ್ಳಿ, ಸಿದ್ದಯ್ಯನಹುಂಡಿ, ಹೆಡತಲೆ, ಹಳೇಪುರ, ಚಿನ್ನಂಬಳ್ಳಿ, ಅಂಬಳೆ, ದೇವರಸನಹಳ್ಳಿ ಹಾಗೂ ಕೋಡಿನರಸೀಪುರ ಗ್ರಾಮಗಳಲ್ಲಿ ನಂಜನಗೂಡು ರಸಬಾಳೆಯನ್ನು ಬೆಳೆಯಲಾಗುತ್ತಿದೆ. ಜಿಐ ಟ್ಯಾಗ್ ಹೊಂದಿರುವ ನಂಜನಗೂಡು ರಸಬಾಳೆಯನ್ನು ಬೆಳೆಯಲು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಉತ್ತೇಜನ ನೀಡಲಾಗುತ್ತಿದೆ. ಹನಿನೀರಾವರಿ ಸಹಿತ 2.20 ಹೆಕ್ಟೇರ್ ಪ್ರದೇಶಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 67,313 (ಶೇ.90 ಸಹಾಯಧನ), ಇತರ ರೈತರಿಗ 56,093 (ಶೇ.75) ಸಹಾಯಧನ ನೀಡಲಾಗುತ್ತಿದೆ.