ನಂಜನಗೂಡು ರಸಬಾಳೆ ಘಮಲು ವಿಸ್ತರಣೆ

ನಂಜನಗೂಡು ರಸಬಾಳೆ
ನಂಜನಗೂಡು ರಸಬಾಳೆ
Published on

ಪ್ರಮುಖ ಮುಖ್ಯಾಂಶಗಳು

  • ನಂಜನಗೂಡು ರಸಬಾಳೆ ಕ್ಷೇತ್ರ ವಿಸ್ತರಣೆ
  • ರೈತರಿಗೆ ಆರ್ಥಿಕ ನೆರವು
  • ರೋಗ ಬಾಧೆ, ವಾಣಿಜ್ಯ ಬೆಳೆಗಳು ಪ್ರದೇಶ ವಿಸ್ತರಣೆಗೆ ಅಡ್ಡಿ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ವಿಶೇಷ ಪರಿಮಳ, ರುಚಿ, ತಿರುಳಿನ ಸ್ವಾದದ ವೈಶಿಷ್ಟತೆ ಹೊಂದಿರುವ ‘ನಂಜನಗೂಡು ರಸಬಾಳೆ’ ಕೃಷಿಯ ಕ್ಷೇತ್ರ ವ್ಯಾಪ್ತಿ ವೃದ್ಧಿಯಾಗಿದೆ. ಇದನ್ನು ಬೆಳೆಯುವ ರೈತರಿಗೆ ಆರ್ಥಿಕ ಸಹಾಯಧನ, ಉತ್ತೇಜನದ ಉಪಕ್ರಮಗಳು ಫಲಕೊಟ್ಟಿವೆ.
ನಂಜನಗೂಡು ರಸಬಾಳೆ ಹಣ್ಣು ಅಳಿವಿನ ಅಂಚು ಸೇರುತ್ತಿರುವ ಬೆಳೆ. ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ 2006ರಲ್ಲೇ ಭೌಗೋಳಿಕ ಗುರುತಿನ ಮಾನ್ಯತೆ(ಜಿಐ ಟ್ಯಾಗ್) ಲಭ್ಯವಾಗಿದೆ. ಈ ಬೆಳೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮೂಲಕ ಸಂರಕ್ಷಣೆಗೆ  ಅವಕಾಶ ಕಲ್ಪಿಸಲಾಗಿದೆ.

ರೈತರಿಗೆ ಆರ್ಥಿಕ ನೆರವು:

ರೈತರಿಗೆ ಆರ್ಥಿಕ ನೆರವು ನೀಡಿ ನಂಜನಗೂಡು ರಸಬಾಳೆ ಕೃಷಿ ಪ್ರದೇಶ ವಿಸ್ತರಣೆಗೆ ಪ್ರೋತ್ಸಾಹಿಸಲಾಗುತ್ತಿದೆ. ಹಾಗಾಗಿ ಇದರ ಕೃಷಿ ಮಾಡುವ ರೈತರ ಸಂಖ್ಯೆ, ಕೃಷಿ ಕಾರ್ಯಕ್ಷೇತ್ರ ವಿಸ್ತರಣೆಯಾಗಿದೆ. ಇದನ್ನು ಬೆಳೆಯುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಅರ್ಧ ಎಕರೆಗೆ ಶೇ.90ರಂತೆ 67,311ರೂ.ದೊರೆಯುತ್ತದೆ. ಸಾಮಾನ್ಯ ರೈತರಿಗೆ ಶೇ.75ರಂತೆ 56,093 ಸಹಾಯಧನ ನೀಡಲಾಗುತ್ತಿದೆ.
2023-24ನೇ ಸಾಲಿನಲ್ಲಿ 49 ರೈತರಿಗೆ 908 ಹೆಕ್ಟೇರ್ ಪ್ರದೇಶ ವಿಸ್ತರಣೆಗಾಗಿ 16.83 ಲಕ್ಷ ರೂ.ಸಹಾಯಧನ ಕೊಡಲಾಗಿದೆ. ಅಂತೆಯೇ, 2024-25ನೇ ಸಾಲಿನಲ್ಲಿ 20.10 ಹೆಕ್ಟೇರ್ ಪ್ರದೇಶ ವಿಸ್ತರಣೆಗಾಗಿ ಭೌತಿಕ ಪ್ರಗತಿಯಾಗಿದ್ದು, 106 ರೈತರಿಗೆ 35.71ಲಕ್ಷ ರೂ.ಹಣಕಾಸಿನ ನೆರವು ದೊರೆತಿದೆ. 
ಪ್ರಸಕ್ತ 2025-26ನೇ ಸಾಲಿನಲ್ಲಿ 10.59 ಹೆಕ್ಟೇರ್ ಪ್ರದೇಶ ವಿಸ್ತರಣೆಗಾಗಿ 35.59 ಲಕ್ಷ ರೂ. ಅನುದಾನ ವಿನಿಯೋಗಿಸಲಾಗಿದೆ. ಜತೆಗೆ, ಈ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಕುರಿತು ಈ ವರೆಗೆ 340 ರೈತರಿಗೆ ತರಬೇತಿ ಕೊಡುವ ಮೂಲಕ ಅವರನ್ನು ಸಜ್ಜುಗೊಳಿಸಲಾಗಿದೆ. ಇದರೊಂದಿಗೆ ಪಾರಂಪರಿಕವಾದ ನಂಜನಗೂಡು ರಸಬಾಳೆಯನ್ನು ಭವಿಷ್ಯದಲ್ಲಿ ಉಳಿಸಿಕೊಳ್ಳಲು ವಿವಿಧ ಉಪಕ್ರಮಗಳ ಮೂಲಕ ಶ್ರಮಿಸಲಾಗುತ್ತಿದೆ.

ರುಚಿಕರವಾದ ಹಣ್ಣು: 

ಕೆಲ ಆಯ್ದ ಪ್ರದೇಶಗಳಲ್ಲಿ ಮಾತ್ರ ಬೆಳೆಯುವ ತಳಿ ಇದು. ಕಪ್ಪು ಮೆಕ್ಕಲು, ಲವಣಯುಕ್ತ ಮಣ್ಣು ಈ ತಳಿಯ ಉತ್ಕೃಷ್ಟ ಗುಣಧರ್ಮಕ್ಕೆ ಮುಖ್ಯಕಾರಣ. ಇದು ಅತ್ಯಂತ ಸ್ವಾದಿಷ್ಟ ತಳಿಗಳಲ್ಲಿ ಒಂದು. 8-9 ಅಡಿ ಎತ್ತರ ಬೆಳೆಯುವ ಗಿಡ ಇದು. ಆಕರ್ಷಕ ಹಳದಿ ವರ್ಣದ ಗಟ್ಟಿ ತಿರುಳು. 
ತೆಳು ಸಿಪ್ಪೆ ಹೊಂದಿದ ರುಚಿಕರವಾದ ಹಣ್ಣು. ಚೆನ್ನಾಗಿ ಬೆಳೆದ ಗೊನೆಯಲ್ಲಿ ಸುಮಾರು 125 ಹಣ್ಣಗಳಿರುತ್ತವೆ. ಪೌರಾಣಿಕ ಹಿನ್ನೆಲೆಯುಳ್ಳ ರಸಬಾಳೆಯನ್ನು ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿರುವ ನಂಜನಗೂಡು ಶ್ರೀನಂಜುಂಡೇಶ್ವರ ದೇವರ ಪೂಜೆಗಾಗಿ ಬಳಸಲಾಗುತ್ತಿತ್ತು. 


ನಂಜನಗೂಡು ತಾಲೂಕಿನಲ್ಲೇ ಅಧಿಕ ಕೃಷಿ:

ಅಂದಾಜು 35 ಹೆಕ್ಟೇರ್ ಪ್ರದೇಶದಲ್ಲಿ ಈ ರಸಬಾಳೆ ಹಣ್ಣಿನ ಕೃಷಿ ಕಾಣಬಹುದಾಗಿದೆ. ಇದು ನಂಜನಗೂಡು ತಾಲೂಕಿನ ಕೆಲವು ಹಳ್ಳಿಗಳಲ್ಲಿ ಮಾತ್ರ ಸೀಮಿತ ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ನಂಜನಗೂಡು ಹೆಸರಿನೊಂದಿಗೆ ಇದು ಹೆಸರುವಾಸಿಯಾಗಿದೆ. 
ಈ ತಾಲೂಕಿನ ದೇವರಸನಹಳ್ಳಿ, ಕೋಡಿನರಸೀಪುರ, ವೀರದೇವರಪುರ, ತಾಂಡವಪುರ, ಹಗಿನವಾಳು, ಹಳೇಪುರ, ಅಂಬಳೆ, ಕೂಗಲೂರು, ಕುರಹಟ್ಟಿ, ದೇವೀರಮ್ಮನಹಳ್ಳಿ, ಸಿದ್ದಯ್ಯನಹುಂಡಿ, ಹೆಡತೆಲೆ, ಹಳೇಪುರ, ಚಿನ್ನಂಬಳ್ಳಿ, ಹೆಮ್ಮರಗಾಲ, ಹಂಪಾಪುರ, ಅಂಬಳೆ, ಕಾರ್ಯ, ಕಾರಾಪುರ, ಚುಂಚನಹಳ್ಳಿ, ಹರದನಹಳ್ಳಿ, ಹನುಮನಪುರ, ಸಿಂಧುವಳ್ಳಿ, ಮಾಡ್ರಹಳ್ಳಿ ಗ್ರಾಮಗಳಲ್ಲಿ ಈ ಬೆಳೆಯನ್ನು ಬೆಳೆಯುವ ಮೂಲಕ ಪೋಷಣೆ ಮಾಡಲಾಗುತ್ತಿದೆ.

ರೋಗ, ವಾಣಿಜ್ಯ ಬೆಳೆಯ ವ್ಯಾಮೋಹವೇ ಇದಕ್ಕೆ ಅಡ್ಡಿ:

ಈ ತಳಿಯನ್ನು ಬೆಳೆಯುತ್ತಿರುವ ರೈತರ ಸಂಖ್ಯೆ, ವಿಸ್ತೀರ್ಣವು ತೋಟಗಾರಿಕೆ ಇಲಾಖೆಯ ಪರಿಶ್ರಮದಿಂದಾಗಿ ವೃದ್ಧಿಗೊಳ್ಳುತ್ತಿದೆ. ಆದಾಗ್ಯೂ, ಬೆಳೆಯು ಸೂಕ್ಷ್ಮತರವಾಗಿದೆ. ವಿಸ್ತೀರ್ಣ ಕ್ಷೀಣಿಸಲು ಪನಾಮ ಸೊರಗು ರೋಗ, ರೋಗಮುಕ್ತ ಕಂದುಗಳ ಅಲಭ್ಯತೆ, ನೀರು ನಿರ್ವಹಣೆಯಲ್ಲಿ ಅಸಮರ್ಪಕ ಕ್ರಮಗಳು ಕಾರಣವಾಗಿದೆ.
 ಜತೆಗೆ, ಹೆಚ್ಚುವರಿ ಇಳುವರಿ ನೀಡುತ್ತಿರುವ ಬಾಳೆ ತಳಿಗಳಾದ ಪಚ್ಚಬಾಳೆ, ಏಲಕ್ಕಿ ಬಾಳೆ ಮೇಲಿನ ವ್ಯಾಮೋಹ ನಂಜನಗೂಡು ರಸಬಾಳೆ ಬೆಳೆ ವಿಸ್ತರಣೆಗೆ ಅಡ್ಡಿಯಾಗುತ್ತಿದೆ. ಈ ವಾಣಿಜ್ಯ ಬೆಳೆಗಳಿಂದ ದೊರೆಯುವ ಅಧಿಕ ಲಾಭದ ಮೇಲೆಯೇ ರೈತರ ಆಸೆ ಕೇಂದ್ರೀಕೃತವಾಗಿದೆ. ಹೀಗಾಗಿ, ನಂಜನಗೂಡು ರಸಬಾಳೆ ಬಿಟ್ಟು ಈ ಬಾಳೆಯತ್ತ ಒಲವು ತೋರುತ್ತಿದ್ದಾರೆ.

ಸಂರಕ್ಷಣೆ, ಪ್ರದೇಶ ವಿಸ್ತರಣೆಗೂ ಕ್ರಮ: 

ಈ ಬಾಳೆ ಬೆಳೆಯನ್ನು ಬೆಳೆಯುವಂತೆ ಆಸಕ್ತಿ ತೋರಿಸಲು ಮತ್ತು ಇದನ್ನು ಸಂರಕ್ಷಣೆ ಮಾಡಲು ವಿವಿಧ ಕ್ರಮ ತೆಗೆದುಕೊಳ್ಳಲಾಗಿದೆ. 2023-24ರಿಂದ 2028-29ರ ವರೆಗೆ 6 ವರ್ಷಗಳ ಅವಧಿಗೆ ಹಂತ ಹಂತವಾಗಿ ಈ ಬೆಳೆಯ ಸಂರಕ್ಷಣೆ, ಪ್ರದೇಶ ವಿಸ್ತರಣೆ, ಕೋಯ್ಲೋತ್ತರ ನಿರ್ವಹಣೆ, ಮಾರುಕಟ್ಟೆಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ರೂಪಿಸಿಕೊಂಡಿದೆ. 
ತೋಟಗಾರಿಕೆ ಇಲಾಖೆ, ಇಲವಾಲದಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದ ಕೇಂದ್ರ, ಸುತ್ತೂರಿನ ಜೆಎಸ್‌ಎಸ್ ಕೆವಿಕೆ ಸಂಸ್ಥೆಗಳ ತಜ್ಞರನ್ನು ಒಳಗೊಂಡ ತಾಂತ್ರಿಕ ಸಮಿತಿ ರಚಿಸಲಾಗಿದೆ. ಇದು ರೈತರಿಗೆ ತರಬೇತಿ, ಪ್ರಾತ್ಯಕ್ಷತೆ, ಪನಾಮಾ ರೋಗ ಹತೋಟಿಗೆ ಕುರಿತು ಸಲಹೆ, ಮಾರ್ಗದರ್ಶನವನ್ನು ರೈತರಿಗೆ ನೀಡುತ್ತಿದೆ.

ರೋಗ ನಿಯಂತ್ರಿಸಬಹುದು:

ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಸಾವಯವ ಪದ್ಧತಿಯಲ್ಲಿ ಕೃಷಿ ನಡೆಸಿದಲ್ಲಿ ನಂಜನಗೂಡು ರಸಬಾಳೆಗೆ ಬರುವ ರೋಗ ಬಾಧೆ ನಿಯಂತ್ರಿಸಬಹುದು. ಅಧಿಕ ತೇವಾಂಶ, ರಾಸಾಯನಿಕ ಗೊಬ್ಬರ ಬಳಕೆಯಿಂದ ಬಾಳೆ ಗಿಡಕ್ಕೆ ಪನಾಮ ಸೊರಗು ಬಾಧೆ ಆವರಿಸಲಿದೆ. ಬಾಳೆ ಗಿಡ ಬೆಳೆಯುವಿಕೆ ಹಂತದಲ್ಲೇ ನಾಶವಾಗುವ ಆತಂಕವಿದೆ. ರೋಗ ನಿಯಂತ್ರಣಕ್ಕೆ ರೈತರು ಕ್ಯಾಲ್ಸಿಯಂ ಬಳಸಬೇಕು. 
ಗಿಡದ ಬುಡಕ್ಕೆ ಸುಣ್ಣ ಸುರಿಯುವುದು, ಗಿಡಕ್ಕೆ ಕಾರ್ಬೆಂಡೆಜಿಂ ರಾಸಾಯನಿಕ ಸಿಂಪರಣೆಯಿಂದ ರೋಗ ನಿಯಂತ್ರಿಸಬಹುದಾಗಿದೆ. ಆದರೆ, ಕೆಲ ರೈತರು ನಂಜನಗೂಡು ರಸಬಾಳೆಗೆ ಯೂರಿಯಾ, ಅಮೋನಿಯಂ ಸಲ್ಫೇಟ್ ಹೆಚ್ಚಿನ ಪ್ರಮಾಣದಲ್ಲಿ ಬಳಸಿ ರೋಗ ಹೆಚ್ಚಾಗಲು ಕಾರಣರಾಗುತ್ತಿದ್ದಾರೆ. ರೋಗ ಆವರಿಸಿದಲ್ಲಿ ಆರಂಭದಲ್ಲಿ ಗಿಡದ ಎಲೆಗಳು ಕಂದು ಬಣ್ಣಕ್ಕೆ ತಿರುಗಲಿದ್ದು, ನಂತರ ಎಲೆ ಪೂರ್ಣ ಪ್ರಮಾಣದಲ್ಲಿ ಒಣಗಿ ಹೋಗಿ ಗಿಡದ ಬುಡದಲ್ಲಿ ಬಿರುಕು ಕಾಣಿಸಿಕೊಂಡು ಒಣಗುತ್ತದೆ. ರೈತರು ಜಾಗ್ರತೆಯಿಂದ ಗಿಡ ಆರೈಕೆ ಮಾಡಬೇಕು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಕ್ಕೂ ರಫ್ತು:

ಔಷಧೀಯ ಗುಣವುಳ್ಳ ನಂಜನಗೂಡು ರಸಬಾಳೆ ಹಣ್ಣಿನ ಸೇವನೆಯಿಂದ ಎದೆ ಉರಿ ಶಮನವಾಗುತ್ತದೆ. ಜತೆಗೆ ದೇಹದಲ್ಲಿ ಪಚನ ಕ್ರಿಯೆಗೆ ಅನುಕೂಲಕರ. ಹಣ್ಣಿನ ಸುವಾಸನೆ ಮತ್ತು ರುಚಿಯಿಂದಾಗಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ವಿದೇಶಕ್ಕೂ ರಫ್ತು ಮಾಡಲಾಗುತ್ತಿದೆ. ಮಾಲ್ದೀವ್ಸ್, ಶ್ರೀಲಂಕಾ, ಅರಬ್ ದೇಶಗಳಿಗೂ ಇದನ್ನು ಉತ್ತಮವಾಗಿ ಪ್ಯಾಕಿಂಗ್ ಮಾಡಿ ರವಾನಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ತಮ್ಮ ‘ಮನ್ ಕೀ ಬಾತ್’ ಆಕಾಶವಾಣಿ ಕಾರ್ಯಕ್ರಮದಲ್ಲೂ ನಂಜನಗೂಡು ರಸಬಾಳೆಯನ್ನು ಪ್ರಸ್ತಾಪಿಸಿ ಪ್ರಶಂಸಿಸಿದ್ದರು
"

ನಂಜನಗೂಡು ರಸಬಾಳೆ ಬೆಳೆಯ ಸಂರಕ್ಷಣೆ, ಪ್ರದೇಶ ವಿಸ್ತರಣೆ ವಿವಿಧ ಕ್ರಮ ವಹಿಸಲಾಗಿದೆ. ಈ ಬಾಳೆ ಬೆಳೆಯನ್ನು ಬೆಳೆಯುವಂತೆ ರೈತರಲ್ಲಿ ಆಸಕ್ತಿ ಬೆಳೆಸಲಾಗುತ್ತದೆ. ಅದಕ್ಕಾಗಿ ಅವರಿಗೆ ಸಹಾಯಧನ ನೀಡಿ ಉತ್ತೇಜನ ಸಹ ಕೊಡಲಾಗುತ್ತಿದೆ. ಇದು ಫಲಕೊಟ್ಟಿದ್ದು, ಈ ಬೆಳೆ ಬೆಳೆಯಲು ರೈತರು ಮುಂದೆ ಬರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net