ನಂಜನಗೂಡಿನ ಟೀಚರ್ಸ್ ಕಾಲನಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಇನ್ಸ್‌ಪೆಕ್ಟರ್ ಸಿ.ಎಂ. ರವೀಂದ್ರ, ಎಎಸ್‌ಐಗಳಾದ ದೇವರಾಜು, ಮಂಜುನಾಥ್, ಲಿಂಗೇಗೌಡ ಹಾಜರಿದ್ದರು.
ನಂಜನಗೂಡು: ಯಾವುದೇ ಸಮಸ್ಯೆಗಳಿದ್ದರೂ ಠಾಣೆಗೆ ನೇರವಾಗಿ ಬಂದು ಪೊಲೀಸರನ್ನು ಸಂಪರ್ಕಿಸಿ ಎಂದು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಿ.ಎಂ. ರವೀಂದ್ರ ತಿಳಿಸಿದರು.
ನಗರದ ಟೀಚರ್ಸ್ ಕಾಲನಿಯಲ್ಲಿ ಮೈಸೂರು ಜಿಲ್ಲಾ ಪೊಲೀಸ್, ನಂಜನಗೂಡು ಪಟ್ಟಣ ಪೊಲೀಸ್ ಠಾಣೆ, ಉಪವಿಭಾಗೀಯ ಕಚೇರಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳವು, ದರೋಡೆ, ಸರಗಳ್ಳತನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ತಡೆಗೆ ಸಾರ್ವಜನಿಕರಿಗೆ ಕುಟುಂಬ ಸಂಭ್ರಮ, ಸ್ನೇಹ ಬಳಗ ಮತ್ತು ಪೊಲೀಸ್ ಇಲಾಖೆ ವತಿಯಿಂದ ಆಗಾಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿರುತ್ತದೆ. ನಿವಾಸಿಗಳು ಮನೆಗಳ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಅಪರಿಚಿತ ವ್ಯಕ್ತಿಗಳು ಕಂಡಾಗ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮನೆಯಿಂದ 2 -3 ದಿನಗಳ ಕಾಲ ಹೊರಗಡೆ ಹೋದರೆ ಆಗ ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು. ತುರ್ತು ಸಂದರ್ಭಗಳಿಗೆ 122ಗೆ ಕರೆ ಮಾಡಬೇಕು. ಇಲಾಖೆಯೊಂದಿಗೆ ಸಾರ್ವಜನಿಕರು ಸಹಕಾರ ನೀಡಿದರೆ ಅಪರಾಧ ಪ್ರಕರಣ ತಡೆಗಟ್ಟುವುದು ಸುಲಭ ಎಂದರು.
ಮೊಬೈಲ್ ಫೋನ್ ಆ್ಯಪ್‌ಗಳ ಬಳಕೆ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು. ಯಾವುದೇ ಕರೆಗಳು ಬಂದಾಗ ಅವರಿಗೆ ಖಾತೆ ವಿವರ ಮತ್ತು ಒಟಿಪಿ ನೀಡಬಾರದು. ಮಕ್ಕಳಿಗೆ ಪಾಲಕರು ಮೊಬೈಲ್ ಫೋನ್ ಕೊಡಬಾರದು. ಈ ಬಗ್ಗೆ ಗಮನಹರಿಸಿ ಎಂದು ಸಲಹೆ ನೀಡಿದರು.
ತುರ್ತು ಸೇವೆಗಳು, ಮನೆ ಕಳ್ಳತನ, ಸರಕಳ್ಳತನ, ಸೈಬರ್ ಅಪರಾಧ, ಆನ್‌ಲೈನ್ ವಂಚನೆ, ಮಾದಕ ವಸ್ತುಗಳು, ಕಾನೂನು ಅರಿವು ಮತ್ತು ಜಾಗೃತಿ ಮೂಡಿಸಲಾಯಿತು.