ಪದ್ಮಶ್ರೀ ಪ್ರಶಸ್ತಿ ಪುರಸ್ಕರಾದ ಸಮರಕಲೆಗಳ ತಜ್ಞ ಹಾಸನ ರಘು ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನೈಪುಣ್ಯ ವಿದ್ಯಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಆರ್. ರಘು, ಕಾರ್ಯದರ್ಶಿ ಆರ್. ಕೌಟಿಲ್ಯ, ಪ್ರಾಂಶುಪಾಲ ಮಹೇಂದ್ರ, ಉಪ ಪ್ರಾಂಶುಪಾಲೆ ಶಾಲಿನಿ, ಇದ್ದರು.
ಮೈಸೂರು: ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಣ ಸಂಸ್ಥೆಗಳು ಹಾಗೂ ಪಾಲಕರ ಮೇಲಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ. ಸವಿತಾ ಹೇಳಿದರು.
ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ನಗರದ ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ‘ಜನಪದ ತೇರು’ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಡೀ ಸಮಾಜ ಶಿಕ್ಷಣದ ಮೇಲೆ ನಿಂತಿದೆ. ಹಾಗಾಗಿ ವಿದ್ಯಾರ್ಥಿಗಳು ಮುಂದೆ ಸಮಾಜಕ್ಕೆ ಕೊಡುಗೆ ನೀಡುವ ರೀತಿಯಲ್ಲಿ ತಯಾರಿಸಬೇಕು ಎಂದು ಹೇಳಿದರು.
ಮಕ್ಕಳು ಕೇವಲ ಆರು ಗಂಟೆ ಮಾತ್ರ ಶಾಲೆಯಲ್ಲಿ ಇರುತ್ತಾರೆ. ಉಳಿದ ಅವಧಿಯಲ್ಲಿ ಮನೆಯಲ್ಲಿ ಇರುತ್ತಾರೆ. ಹಾಗಾಗಿ ಮಕ್ಕಳು ಏನು ಮಾಡುತ್ತಿದ್ದಾರೆ ಹಾಗೂ ಅವರು ಹೇಗೆ ಓದುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಜತೆಗೆ ಮಕ್ಕಳಿಂದ ಮೊಬೈಲ್ಅನ್ನು ದೂರ ಇಡಬೇಕು. ಮಕ್ಕಳು ಮೊಬೈಲ್ನಲ್ಲಿ ಮುಳುಗಿ ಹೋಗುತ್ತಿದ್ದು, ದೈಹಿಕ ಚಟುವಟಿಕೆಯಲ್ಲಿ ತೊಡಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲವು ಮಕ್ಕಳು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದು ಆತಂಕಕಾರಿ ವಿಚಾರ. ಮಕ್ಕಳು ಏತಕ್ಕೆ ಈ ರೀತಿ ಆಗುತ್ತಿದ್ದಾರೆ ಎಂದು ಎಲ್ಲರು ಆಲೋಚಿಸಬೇಕು. ಉತ್ತಮ ಮಕ್ಕಳನ್ನು ರೂಪಿಸಲು ಪಾಲಕರು ಅವರಿಗೆ ಉತ್ತಮ ಮಾರ್ಗದರ್ಶನವನ್ನು ಮಾಡಬೇಕು. ಪಾಲಕರು ಸದಾ ಕೆಲಸದ ಒತ್ತಡದಲ್ಲಿ ಇರುತ್ತಾರೆ. ಇದರ ನಡುವೆ ಮಕ್ಕಳಿಗೋಸ್ಕರ ಒಂದಷ್ಟು ಸಮಯ ಮೀಸಲಿಡಬೇಕು. ನಿಮ್ಮ ಒತ್ತಡವನ್ನು ಯಾವುದೇ ಕಾರಣಕ್ಖೂ ಮಕ್ಕಳ ಮೇಲೆ ಹೇರಬಾರದು ಎಂದು ಹೇಳಿದರು.
ಶಿಕ್ಷಣತಜ್ಞೆ ಡಾ.ಎಲ್. ಸವಿತಾ ಮಾತನಾಡಿ, ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಎಂಬ ಕುರಿತು ಪಾಲಕರು ಆಲೋಚಿಸಬೇಕು. ಅವರನ್ನು ಉತ್ತಮ ರೀತಿಯಲ್ಲಿ ಬೆಳೆಸಬೇಕು. ಇಲ್ಲವಾದಲ್ಲಿ ಹಾದಿ ತಪ್ಪಿ ಹೋಗುವ ಸಾಧ್ಯತೆ ಇದೆ. ಮಕ್ಕಳು ನಮ್ಮ ಪ್ರತಿಬಿಂಬ. ಹಾಗಾಗಿ ನಮ್ಮ ನಡೆ ಉತ್ತಮವಾಗಿ ಇರಬೇಕು. ನಮ್ಮನ್ನು ಮಕ್ಕಳು ನೋಡಿ ಕಲಿಯುತ್ತಾರೆ ಎಂದರು.