ಮೇ 25ಕ್ಕೆ ಮೈಸೂರು ಕರಗ ಮೆರವಣಿಗೆ

 2025ರಲ್ಲಿ ನಡೆದ ಮೈಸೂರು ಕರಗ ಮೆರವಣಿಗೆ
2025ರಲ್ಲಿ ನಡೆದ ಮೈಸೂರು ಕರಗ ಮೆರವಣಿಗೆ
Published on
ಮೈಸೂರು: ದುಷ್ಟ ಶಕ್ತಿಯ ವಿರುದ್ಧ ಶಿಷ್ಟ ಶಕ್ತಿಯ ವಿಜಯದ ಸಂಕೇತವಾಗಿ ಪ್ರತಿ ವರ್ಷ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜೃಂಭಣೆಯಿಂದ ದಸರಾ ಉತ್ಸವ ಆಚರಿಸಲಾಗುತ್ತದೆ. ದಸರಾದಷ್ಟೇ ವೈಭವ ಹೊಂದಿರುವ ‘ಮಿನಿ ದಸರಾ’ವೆಂದೇ ಖ್ಯಾತಿ ಗಳಿಸಿರುವ ‘ಮೈಸೂರು ಕರಗ’ ಈ ಬಾರಿ ಏ.21 ರಿಂದ 26ರವರೆಗೆ ನಡೆಯಲಿದೆ.
ಇಟ್ಟಿಗೆಗೂಡಿನಲ್ಲಿರುವ ಶ್ರೀ ಮಾರಮ್ಮನವರ ದೇವಸ್ಥಾನದ (ಕರಗ ದೇವಸ್ಥಾನ)ದ ಕರಗ ಮಹೋತ್ಸವಕ್ಕೆ ಶತಮಾನದ ಇತಿಹಾಸವಿದೆ. ಲೋಕಕಲ್ಯಾಣಕ್ಕಾಗಿ ದುರಿತ ನಿವಾರಿಣಿ, ಅಮೃತವರ್ಶಿಣಿಯಾದ ಜಗದಾಂಭೆಗೆ ಕರಗ ಮಹೋತ್ಸವ ನಡೆಸಲಾಗುತ್ತದೆ. ಶತಮಾನಗಳ ಹಿಂದೆ ಊರನ್ನು ಸಾಂಕ್ರಾಮಿಕ ರೋಗವು ಆವರಿಸಿ ದಿನನಿತ್ಯ ಹತ್ತಾರು ಮಂದಿ ಸಾವನ್ನಪ್ಪಲು ಪ್ರಾರಂಭಿಸಿದರು. ಒಂದೆಡೆ ಮನೆಮಂದಿ ರೋಗದಿಂದ ನರಳುತ್ತಿದ್ದರೆ ಮತ್ತೊಂದೆಡೆ ಮಳೆ ಇಲ್ಲದೆ ಕ್ಷಾಮ ಆವರಿಸಿತ್ತು. ಇವೆಲ್ಲದರ ಜತೆಗೆ ರೋಗದಿಂದ ದಿನನಿತ್ಯ ಮೃತಪಡುವವರ ಅಂತ್ಯಸಂಸ್ಕಾರ ನಡೆಸುವುದೇ ಊರ ಜನರ ನಿತ್ಯಕಾಯಕವಾಗಿ ಬಿಟ್ಟಿತ್ತು. ಹಾಗಾಗಿ ಊರಿನ ಜನರೆಲ್ಲರೂ ಸೇರಿ ನಾಡದೇವತೆಯ ಮೊರೆಹೋಗಲು ನಿರ್ಧರಿಸಿದರು. ಆಗ ಪ್ರಾರಂಭವಾದುದೇ ಮೈಸೂರು ಕರಗ ಮಹೋತ್ಸವ.
ದುಷ್ಟ ಶಕ್ತಿಯ ನಿಗ್ರಹಕ್ಕಾಗಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಹಾಗೂ ಸಾಂಕ್ರಾಮಿಕ ರೋಗ ಮತ್ತು ಕ್ಷಾಮ ಬರಗಾಲ ನೀಗಿ ಸಲು ಮಳೆಯ ಅಧಿದೇವತೆಯಾದ ಶ್ರೀ ಮಾರಿಯಮ್ಮನವರ ಕರಗ ನಡೆಸಲಾಗುತ್ತದೆ. ಶತಮಾನದ ಹಿಂದೆ ಸಣ್ಣ ಗುಡಿಸಿಲಿನಲ್ಲಿ ಪ್ರಾರಂಭವಾದ ಮೈಸೂರು ಕರಗವು ಅಂದು ಊರಿಗೆ ಮಾತ್ರ ಸೀಮಿತವಾಗಿತ್ತು. ಕಾಲಕ್ರಮೇಣ 1924ರಿಂದ ಕರಗವು ಮೈಸೂರು ನಗರದಲ್ಲಿ ಮೆರವಣಿಗೆ ಪ್ರಾರಂಭಿಸಿತು. ಇಟ್ಟಿಗೆಗೂಡಿಗೆ ಸೀಮಿತವಾಗಿದ್ದ ಕರಗ ನಂತರ ನಗರದಲ್ಲಿ ಮೆರವಣಿಗೆ ಪ್ರಾರಂಭಿಸಿ ಈ ವರ್ಷ 102ನೇ ವರ್ಷವನ್ನು ಪೂರೈಸುತ್ತಿದೆ. ಈ ಕರಗ ಮಹೋತ್ಸವದ ವೈಭವವ ಕಂಡು ಮೈಸೂರು ಅರಸರು ‘ಮಿನಿ ದಸರೆ’ ಎಂದು ಬಣ್ಣಿಸಿದ್ದರು.
ಮನೆ ಮನೆಯಲ್ಲೂ ಪೂಜೆ: ಕರಗವು ಇಟ್ಟಿಗೆಗೂಡಿನ ಎಲ್ಲ ಬೀದಿಗಳಲ್ಲೂ ಸಂಚರಿಸಿ ಪೂಜೆ ಸ್ವೀಕರಿಸಲು ಬರುವ ದೇವಿಯನ್ನು ಭಕ್ತಾದಿಗಳು ತಮ್ಮ ಮನೆಯಲ್ಲಿ ಕೂರಿಸಿ ದೇವಿಗೆ ಹಾಲು, ಮಜ್ಜಿಗೆ, ಪಾನಕ, ಕೋಸಂಬರಿ, ಎಂದು ನಾನಾ ವಿಧವಾದ ಪ್ರಸಾದಗಳನ್ನು ದೇವಿಗೆ ನೈವೇದ್ಯ ಮಾಡಿ ಪೂಜಿಸುತ್ತಾರೆ.
ಯಾವ ಬೇದ ಭಾವವಿಲ್ಲದೆ ಹರಕೆ ಇರುವ ಎಲ್ಲರ ಮನೆಯಲ್ಲೂ ಕರಗ ಇಳಿಸಲಾಗುತ್ತದೆ. ಹರಕೆ ಇರುವ ಕನ್ಯೆಯರು ಮನೆಯಲ್ಲಿ ಕರಗವನ್ನು ಕೂರಿಸಿ ವಿವಾಹ ಪ್ರಾಪ್ತಿಗಾಗಿ ಮಾಂಗಲ್ಯ ಪೂಜೆ ನೆರವೇರಿಸುತ್ತಾರೆ, ಮುತ್ತೈದೆ ಭಾಗ್ಯಕ್ಕಾಗಿ ಮಹಿಳೆಯರು ದೇವಿಗೆ ಮಾಂಗಲ್ಯ ತೊಡಿಸಿ ಮಡಿಲಕ್ಕಿ ತುಂಬಿಸಿ ಸರ್ವಮಂಗಳೆಯಲ್ಲಿ ಪ್ರಾರ್ಥಿಸುತ್ತಾರೆ, ಸಂತಾನಪ್ರಾಪ್ತಿಗಾಗಿ ಹೆಂಗಳೆಯರು ದೇವಿಗೆ ಸೀರೆ ಕುಪ್ಪಸವಿಟ್ಟು ಪೂಜಿಸುತ್ತಾರೆ, ವಿದ್ಯಾರ್ಥಿಗಳು ವಿದ್ಯಾದೇವಿಯ ಮುಂದೆ ಪುಸ್ತಕವನ್ನಿಟ್ಟು ವಿದ್ಯಾರ್ಜನೆಗಾಗಿ ಪ್ರಾರ್ಥಿಸುತ್ತಾರೆ. ಹೀಗೆ ಭಕ್ತಾದಿಗಳು ಹಲವಾರು ಬಗೆಯಲ್ಲಿ ದೇವಿಯನ್ನು ಆರಾಧಿಸುತ್ತಾರೆ. ಈ ರೀತಿ ಪೂಜೆ ನೆರವೇರಿಸಿದವರು ಒಳಿತನ್ನು ಸಹ ಕಂಡಿದ್ದಾರೆ.
ಏ.25 ರಂದು ಕರಗ ಮೆರವಣಿಗೆ: ಈ ಬಾರಿ ಏ.25 ರಂದು ಕರಗ ಮೆರವಣಿಗೆ ಆಯೋಜಿಸಲಾಗಿದೆ. ಅಂದು ರಾತ್ರಿ 8ಕ್ಕೆ ದೇವಸ್ಥಾನದಿಂದ ಹೊರಡುವ ಕರಗ ನಗರದ ಪ್ಯಾಲೆಸ್ ಆಫೀಸ್ ರಸ್ತೆ, ನೂರಡಿ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ನಲ್ಲಪ್ಪಠಾಣಾ ರಸ್ತೆ, ಶಿವರಾಂಪೇಟೆ, ಸಯ್ಯಜಿರಾವ್ ರಸ್ತೆ, ಮಿಷನ್ ಆಸ್ಪತ್ರೆ ರಸ್ತೆ, ಕಬೀರ್ ರಸ್ತೆ, ಕಾಳಮ್ಮ ಗುಡಿ ರಸ್ತೆ, ಇರ‌್ವಿನ್ ರಸ್ತೆ, ಕುರುಬಗೇರಿ, ಕುಂಬಾರಗೇರಿ, ಅಶೋಕಾ ರಸ್ತೆ, ನಜರ್‌ಬಾದ್, ಮೃಗಾಲಯ ರಸ್ತೆಯ ಮಾರ್ಗವಾಗಿ ಸಾಗಿ ಏ.26 ರಂದು 8ಕ್ಕೆ ದೇವಸ್ಥಾನಕ್ಕೆ ಹಿಂತಿರುಗುತ್ತದೆ. ಮೆರವಣಿಗೆಗೆ ವಿವಿಧ ಕಲಾ ತಂಡಗಳು ಮೆರಗು ನೀಡಲಿವೆ. ಏ.27 ರಂದು ಬೆಳಗ್ಗಿನ ಜಾವ ಬ್ರಹ್ಮಮುಹೂರ್ತದಲ್ಲಿ ಕರಗವನ್ನು ಪಶ್ಚಿಮವಾಹಿನಿಯಲ್ಲಿ ವಿಸರ್ಜಿಸಲಾಗುವುದು. ಏ.21 ರಂದು ಚಾಮುಂಡಿಬೆಟ್ಟದ ಪಾದದಿಂದ ಬೆಳಗ್ಗೆ 11ಕ್ಕೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗವನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಗುವುದು. ಮಧ್ಯಾಹ್ನ 1ಕ್ಕೆ ಶ್ರೀ ಕೋಟೆ ಮಾರಿಯಮ್ಮ ದೇವಸ್ಥಾನದಿಂದ ಶ್ರೀ ಶಕ್ತಿ ಕರಗ ಹಾಗೂ ಶ್ರೀ ಮಾರಿಯಮ್ಮ ಕರವನ್ನು ಮೆರವಣಿಗೆ ಮೂಲಕ ತರಲಾಗುವುದು. 22, 23 ರಂದು ಇಟ್ಟಿಗೆಗೂಡಿನ ವಿವಿಧ ಬೀದಿಗಳಲ್ಲಿ ಕರಗಗಳು ತೆರಳಿ ಪೂಜೆ ಸ್ವೀಕರಿಸಲಾಗುವುದು.
ಶತಮಾನದ ಇತಿಹಾಸ ಹೊಂದಿರುವ ಇಟ್ಟಿಗೆಗೂಡಿನ ಶ್ರೀ ಮಾರಮ್ಮನವರ ದೇವಸ್ಥಾನದ (ಕರಗ ದೇವಸ್ಥಾನ)ದ ಕರಗ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಬಾರಿ ಏ.21 ರಿಂದ 26ರವರೆಗೆ ಕರಗ ಮಹೋತ್ಸವ ನಡೆಯಲಿದೆ. ಏ.25 ರಂದು ನಗರದಲ್ಲಿ ಕರಗ ಮೆರವಣಿಗೆ ನಡೆಯಲಿದ್ದು, ಮೆರವಣಿಗೆ ವೀಕ್ಷಿಸಲು ರಾಜ್ಯ, ಹೊರ ರಾಜ್ಯ ಹಾಗೂ ವಿದೇಶದಿಂದಲೂ ಜನರು ಆಗಮಿಸುತ್ತಾರೆ. ಕರಗ ಮಹೋತ್ಸವದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದ್ದರೆ ಇಷ್ಟಾರ್ಥ ನೆರವೇರುತ್ತದೆ.
ಜಿ. ಹರೀಶ್ ಕುಮಾರ್, ಜಂಟಿ ಕಾರ್ಯದರ್ಶಿ, ಶ್ರೀ ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net