ಮೈಸೂರು: ಮುಕ್ತಾಯ ಹಂತಕ್ಕೆ ಬಯೋಮೈನಿಂಗ್

ಮೈಸೂರಿನ ಸೂಯೇಜ್ ಫಾರ್ಮ್ ನಲ್ಲಿ ನಡೆಯುತ್ತಿರುವ ಬಯೋಮೈನಿಂಗ್ ಕಾಮಗಾರಿ
ಮೈಸೂರಿನ ಸೂಯೇಜ್ ಫಾರ್ಮ್ ನಲ್ಲಿ ನಡೆಯುತ್ತಿರುವ ಬಯೋಮೈನಿಂಗ್ ಕಾಮಗಾರಿ
Published on

ಪ್ರಮುಖ ಮುಖ್ಯಾಂಶಗಳು

  • ಸೂಯೇಜ್‌ಫಾರ್ಮ್‌ನಲ್ಲಿ ಕಾಮಗಾರಿ
  • 6 ಲಕ್ಷ ಟನ್ ತ್ಯಾಜ್ಯದಲ್ಲಿ 4 ಲಕ್ಷ ಟನ್ ವಿಲೇವಾರಿ
ಸದೇಶ್ ಕಾರ್ಮಾಡ್ ಮೈಸೂರು
ಸೂಯೇಜ್ ಫಾರ್ಮ್‌ನಲ್ಲಿ ಎರಡೂವರೆ ದಶಕದಿಂದ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ವಿಲೇವಾರಿ ಮಾಡುವ ಕಾಮಗಾರಿ ಬಹುತೇಕ ಮುಕ್ತಾಯ ಹಂತ ತಲುಪಿದ್ದು, ಸದ್ಯದಲ್ಲಿಯೇ ದುರ್ವಾಸನೆ ಮುಕ್ತ ವಲಯ ನಿರ್ಮಾಣ ಆಗುವ ನಿರೀಕ್ಷೆ ಇದೆ.
ಸೂಯೇಜ್ ಫಾರ್ಮ್‌ನಲ್ಲಿ ಸಂಗ್ರಹವಾದ ಪಾರಂಪರಿಕ ತ್ಯಾಜ್ಯದಿಂದ ಸುತ್ತಮುತ್ತಲಿನ ನಿವಾಸಿಗಳು ಸಾಕಷ್ಟು ಆರೋಗ್ಯ ಸಮಸ್ಯೆ ಗಳನ್ನು ಎದುರಿಸುತ್ತಿದ್ದಾರೆ. ಸೊಳ್ಳೆಗಳ ಕಾಟದಿಂದ ರಾತ್ರಿ ನೆಮ್ಮದಿಯಾಗಿ ನಿದ್ರೆ ಮಾಡಲು ಸಾಧ್ಯವಾಗದ ವಾತಾವರಣ ಇದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯವನ್ನು ಕೂಡಲೇ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿ ಸಾಕಷ್ಟು ಹೋರಾಟಗಳು ನಡೆಯಿತು. ಈ ಹೋರಾಟ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಯಿತು. ನಂತರ ಪ್ರತಾಪ್ ಸಿಂಹ ಸಂಸದರಾಗಿದ್ದ ಸಂದರ್ಭ ಪಾರಂಪರಿಕ ತ್ಯಾಜ್ಯ ವಿಲೇವಾರಿಗೆ ಬಯೋಮೈನಿಂಗ್ ಕೈಗೊಳ್ಳಲು 58 ಕೋಟಿ ರೂ. ಮಂಜೂರು ಮಾಡಿಸಿದರು.
22 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ 6 ಲಕ್ಷ ಟನ್ ಹಳೆಯ ತ್ಯಾಜ್ಯವನ್ನು ವಿಲೇವಾರಿ ಮಾಡಲು 14-3-2024 ರಂದು ಡಿ.ಎಚ್. ಪಟೇಲ್ ಎಂಬವರಿಗೆ ಕಾರ್ಯಾದೇಶ ನೀಡಲಾಯಿತು. ಇದೀಗ 4 ಲಕ್ಷ ಟನ್ ತ್ಯಾಜ್ಯ ವಿಲೇವಾರಿ ಮಾಡಲಾಗಿದ್ದು, ಇನ್ನು 2 ಲಕ್ಷ ಟನ್ ತ್ಯಾಜ್ಯ ವಿಲೇವಾರಿಗೆ ಬಾಕಿ ಇದೆ.
ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ಸ್ಥಾನ ಪಡೆಯಲು ಪ್ರತಿನಿತ್ಯ ಸಂಗ್ರಹವಾಗುವ ತ್ಯಾಜ್ಯ ಆಯಾ ದಿನವೇ ವಿಲೇವಾರಿ ಆಗಬೇಕು. ಆದರೆ, ಸೂಯೇಜ್‌ಫಾರ್ಮ್‌ನಲ್ಲಿ ತ್ಯಾಜ್ಯದ ರಾಶಿಯೇ ತುಂಬಿಕೊಂಡ ಹಿನ್ನೆಲೆಯಲ್ಲಿ ನಗರ ಸ್ವಚ್ಛ ಸರ್ವೇಕ್ಷಣೆಯಲ್ಲೂ ಹಿನ್ನಡೆ ಅನುಭವಿಸುತ್ತಿದೆ. ಈ ಪಾರಂಪರಿಕ ತ್ಯಾಜ್ಯ ಸಂಪೂರ್ಣ ವಿಲೇವಾರಿಯಾದರೆ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು ಮತ್ತಷ್ಟು ಸಾಧನೆ ತೋರಲು ಸಹಕಾರಿಯಾಗಲಿದೆ.
ಮೈಸೂರಿನಂತೆ ಮಹಾರಾಷ್ಟ್ರದ ನಾಗಪುರದಲ್ಲೂ ಹಳೆಯ ತ್ಯಾಜ್ಯ ವಿಲೇವಾರಿ ದೊಡ್ಡ ತಲೆನೋವಾಗಿತ್ತು. ನಂತರ ನಾಗಪುರ ನಗರ ಸ್ಥಳೀಯ ಸಂಸ್ಥೆಯು ಹಳೆಯ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ತೆರವುಗೊಳಿಸುವ ತೀರ್ಮಾನ ಕೈಗೊಂಡಿತ್ತು. ಮೈಸೂರು ನಗರ ಪಾಲಿಕೆಯ ತಂಡ ನಾಗಪುರಕ್ಕೆ ಭೇಟಿ ನೀಡಿ ನಾಗಪುರದಲ್ಲಿ ನಡೆಯುತ್ತಿರುವ ಬಯೋಮೈನಿಂಗ್ ಕುರಿತು ಮಾಹಿತಿ ಸಂಗ್ರಹಿಸಿತ್ತು. ಆ ನಂತರ ನಾಗಪುರದ ಮಾದರಿಯಲ್ಲಿ ನಗರದ ಸೂಯೇಜ್ ಫಾರ್ಮ್‌ನಲ್ಲಿರುವ ಹಳೆಯ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಕೈಗೊಳ್ಳಲಾಯಿತು.
ನಗರದಲ್ಲಿ ಪ್ರತಿನಿತ್ಯ 500 ಟನ್ ತ್ಯಾಜ್ಯ ಉತ್ಪತಿಯಾಗುತ್ತಿದೆ. ತ್ಯಾಜ್ಯ ಸಂಸ್ಕರಣೆಗೆ ಕೆಸರೆಯಲ್ಲಿ 22 ಕೋಟಿ ರೂ.ವೆಚ್ಚದಲ್ಲಿ 200 ಟನ್ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ, ರಾಯನಕೆರೆಯಲ್ಲಿ 9.2 ಕೋಟಿ ರೂ.ವೆಚ್ಚದಲ್ಲಿ 150 ಟನ್ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ ಪ್ರಾರಂಭಿಸಲಾಗಿದೆ. ಇದರ ಜತೆಗೆ ಸೂಯೇಜ್‌ಫಾರ್ಮ್‌ನಲ್ಲಿ ಹೊಸದಾಗಿ ಮತ್ತೊಂದು ಘಟಕ ಪ್ರಾರಂಭಿಸಲು ನಗರ ಪಾಲಿಕೆ ಯೋಜನೆ ರೂಪಿಸುತ್ತಿದೆ. ಅಲ್ಲದೆ, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಸಹಯೋಗದಲ್ಲಿ ಹಸಿ ತ್ಯಾಜ್ಯವನ್ನು ಬಳಕೆ ಮಾಡಿಕೊ ಂಡು ಕಂಪ್ರೆಸ್ಡ್ ಬಯೋ ಗ್ಯಾಸ್ (ಸಿಬಿಜಿ) ತಯಾರಿಸಲು ಈಗಾಗಲೇ ಒಡಂಬಡಿಕೆಗೆ ಸಹಿ ಹಾಕಲಾಗಿದೆ. 65.98 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಪ್ರತಿನಿತ್ಯ 145 ಟನ್ ತ್ಯಾಜ್ಯವನ್ನು ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ. ಈ ಎಲ್ಲ ಯೋಜನೆಗಳು ಕಾರ್ಯಗತಗೊಂಡರೆ ನಗರದಲ್ಲಿ ತ್ಯಾಜ್ಯ ಸಮಸ್ಯೆ ಸಂಪೂರ್ಣ ಬಗೆಹರಿಯುವ ಸಾಧ್ಯತೆ ಇದೆ.
ಏನಿದು ಬಯೋ ಮೈನಿಂಗ್?
ಪ್ರತಿನಿತ್ಯ ಸಂಗ್ರಹವಾಗುವ ತ್ಯಾಜ್ಯ ಆಯಾ ದಿನವೇ ಸಂಸ್ಕರಣೆಯಾಗದೆ ಬೆಟ್ಟದ ರೀತಿಯಲ್ಲಿ ಬೆಳೆಯುತ್ತಾ ಹೋಗುವುದು ನಗರ ಪ್ರದೇಶಗಳಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ಈ ರೀತಿ ಸಂಗ್ರಹವಾಗುವ ಪಾರಂಪರಿಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವಿಧಾನಕ್ಕೆ ಬಯೋ ಮೈನಿಂಗ್ ಎಂದು ಕರೆಯಲಾಗುತ್ತದೆ. ಬಯೋ ಮೈನಿಂಗ್‌ನಲ್ಲಿ ತ್ಯಾಜ್ಯದಲ್ಲಿರುವ ಪ್ಲಾಸ್ಟಿಕ್, ಗಾಜು, ಕಬ್ಬಿಣ ಮುಂತಾದ ವಸ್ತುಗಳನ್ನು ಬೇರ್ಪಡಿಸಲಾಗುತ್ತದೆ. ಗಾಜು, ಕಬ್ಬಿಣ ಮುಂತಾದ ವಸ್ತುಗಳನ್ನು ಮರು ಬಳಕೆ ಮಾಡಲಾಗುತ್ತದೆ. ಪ್ಟಾಸ್ಟಿಕ್ ತ್ಯಾಜ್ಯವನ್ನು ಸಿಮೆಂಟ್ ಕಂಪನಿಗಳಲ್ಲಿ ಉರುವಲಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಉಳಿದ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ತ್ಯಾಜ್ಯ ಮಣ್ಣಾಗಿ ಪರಿವರ್ತನೆಯಾದರೆ ಆ ಮಣ್ಣನ್ನು ಲ್ಯಾಂಡ್‌ಫಿಲ್ಲಿಂಗ್‌ಗೆ ಬಳಕೆ ಮಾಡಲಾಗುತ್ತಿದೆ.
ಸೂಯೇಜ್ ಫಾರ್ಮ್‌ನಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಬಯೋ ಮೈನಿಂಗ್ ಮೂಲಕ ವಿಲೇವಾರಿ ಮಾಡುವ ಕಾಮಗಾರಿ ನಡೆಯುತ್ತಿದ್ದು, ಒಟ್ಟು 6 ಲಕ್ಷ ಟನ್ ತ್ಯಾಜ್ಯದ ಪೈಕಿ ಈಗಾಗಲೇ 4 ಲಕ್ಷ ಟನ್ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ. ಶೀಘ್ರದಲ್ಲಿಯೇ ಹಳೆಯ ತ್ಯಾಜ್ಯ ಸಂಪೂರ್ಣ ವಿಲೇವಾರಿ ಆಗಲಿದೆ. ಇನ್ನು ಮುಂದೆ ಪ್ರತಿನಿತ್ಯ ಸಂಗ್ರಹವಾಗುವ ತ್ಯಾಜ್ಯ ಆಯಾ ದಿನವೇ ಸಂಸ್ಕರಣೆಯಾಗುವಂತೆ ಮಾಡಲು ಸೂಯೇಜ್‌ಫಾರ್ಮ್‌ನಲ್ಲಿ ನೂತನ ತ್ಯಾಜ್ಯ ಸಂಸ್ಕರಣ ಘಟಕ ಅಳವಡಿಸಲು ಉದ್ದೇಶಿಸಲಾಗಿದೆ. ಹೊಸ ಘಟಕ ಅಳವಡಿಸಿದರೆ ನಗರದ ತ್ಯಾಜ್ಯದ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ.
ಶೇಖ್ ತನ್ವೀರ್ ಆಸಿಫ್, ಆಯುಕ್ತರು, ನಗರ ಪಾಲಿಕೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net