ಗಮನ ಸೆಳೆಯುತ್ತಿದೆ ದನಗಳ ಪರಿಷೆ

ದನಗಳ ಜಾತ್ರೆಯಲ್ಲಿ ಕಣ್ಮನ ಸೆಳೆಯುತ್ತಿರುವ ಜಾನುವಾರುಗಳು.
ದನಗಳ ಜಾತ್ರೆಯಲ್ಲಿ ಕಣ್ಮನ ಸೆಳೆಯುತ್ತಿರುವ ಜಾನುವಾರುಗಳು.
Published on
ನಂಜನಗೂಡು: ತಾಲೂಕಿನ ಸುತ್ತೂರು ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ದನಗಳ ಜಾತ್ರೆ ಕೂಡ ಒಂದಾಗಿದೆ. ಈ ಬಾರಿ 55ನೇ ಭಾರಿ ದನಗಳ ಪರಿಷೆ ನಡೆಯುತ್ತಿದೆ.
ಮೈಸೂರು, ಚಾಮರಾಜನಗರ, ಮಂಡ್ಯ, ಮಳವಳ್ಳಿ, ಹಾಸನ ಸೇರಿದಂತೆ ಹಲವು ಭಾಗಗಳಿಂದ ರೈತರು ಉತ್ತಮ ತಳಿಯ ಜಾನುವಾರುಗಳನ್ನು ಇಲ್ಲಿಗೆ ತರುತ್ತಾರೆ. ಜಾನುವಾರುಗಳ ಖರೀದಿ ಮತ್ತು ಮಾರಾಟಕ್ಕೆ ಪರಿಷೆ ಉತ್ತಮ ವೇದಿಕೆಯಾಗಿದೆ. ಅತ್ಯುತ್ತಮ ತಳಿಯ ರಾಸುಗಳಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುತ್ತದೆ. ಈ ಬಾರಿ ಎಚ್‌ಎಫ್ ಹೋರಿಗಳು, ಮಲ್ನಾಡ್ ಗಿಡ್ಡ, ಹಳ್ಳಿಕಾರ್ ತಳಿಯ ಲಕ್ಷಾಂತರ ರೂ. ಬೆಲೆಬಾಳುವ ಎತ್ತುಗಳು ಜಾತ್ರೆಯಲ್ಲಿ ಪಾಲ್ಗೊಂಡಿವೆ. ಪಶುಸಂಗೋಪನಾ ಇಲಾಖೆಯ ಸಹಯೋಗದೊಂದಿಗೆ ಜಾನುವಾರುಗಳಿಗೆ ಉಚಿತ ಆರೋಗ್ಯ ತಪಾಸಣೆ, ಲಸಿಕೆ ಮತ್ತು ಜಂತುಹುಳು ನಿವಾರಕ ಔಷಧ ವಿತರಿಸಲಾಗುತ್ತದೆ.
ಬಲು ಚೆಂದ ಫಲ ಪುಷ್ಪ ಪ್ರದರ್ಶನ: ಕೃಷಿ ಮೇಳದ ಪಕ್ಕದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಹೂಗಳಿಂದ ಅಲಂಕೃತಗೊಂಡಿರುವ ಬೃಹದಾಕಾರದ ಲಿಂಗ, ಮಹದೇಶ್ವರಸ್ವಾಮಿ, ಶಿವರಾತ್ರಿ ಶಿವಯೋಗಿಗಳ ಆಕೃತಿ, ಆನೆ, ಟ್ರ್ಯಾಕ್ಟರ್‌ಗಳನ್ನು ವಿವಿಧ ಬಗೆಯ ಹೂವುಗಳಿಂದ ನಿರ್ಮಿಸಲಾಗಿದ್ದು, ಪ್ರವಾಸಿಗರಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೇಳಿ ಮಾಡಿಸಿದ ಸ್ಥಳವಾಗಿದೆ.
ಜಾನುವಾರುಗಳ ಪ್ರದರ್ಶನ : ಕೃಷಿ ಮೇಳ ಹಲವು ವೈವಿಧ್ಯದಿಂದ ಕೂಡಿದೆ. ಇತ್ತೀಚಿನ ದಿನಗಳಲ್ಲಿ ದೇಸಿ ಜಾನುವಾರುಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಮೇಳದಲ್ಲಿ ಜನರಿಗೆ ತಿಳಿಯದ ದೇಸಿ ತಳಿಗಳಾದ ಒಂಗೆಲ್, ಗಿರ್, ಜಾಪ್ರಭಾದಿ, ಪಂಚ ಕಲ್ಯಾಣಿ ಎಮ್ಮೆ, ಪುಂಗನೂರು, ಕಾಂಕ್ರೀಜ್, ಸ್ವರ್ಣ ಕಪಿಲಾ, ಲಕ್ಷ್ಮೀರುದ್ರಂ, ಹಳ್ಳಿಕಾರ್, ಮಲ್ನಾಡ್ ಗಿಡ್ಡ, ಪಂಜಾಬ್ ಬೀಟರ್ ಪರಿಚಯಿಸಲಾಗಿದೆ.
ಸಂಪ್ರದಾಯಿಕ ಬಯೋಚಾರ್ :
ಬಹಳ ಹಿಂದಿನಿಂದಲೂ ಇರುವ ಬಯೋಚಾರ್ ಪದ್ಧತಿ ಮೂಲಕ ಒಣ ಪದಾರ್ಥಗಳನ್ನು ಸುಟ್ಟು ಗಿಡಗಳಿಗೆ ಗೊಬ್ಬರ ನೀಡುವ ಪ್ರಾತ್ಯಕ್ಷತೆ ನೀಡಲಾಗುತ್ತಿದೆ. 200 ರಿಂದ 250 ಲೀಟರ್ ಕಬ್ಬಿಣದ ಡ್ರಮ್ ಉಪಯೋಗಿಸಿ ಒಣಗಿದ ಬೆರಣಿ, ಕಟ್ಟಿಗೆ ಉಪಯೋಗಿಸಿ ಅತಿ ಉಷ್ಣಾಂಶದಿಂದ ವಾಯು ಮಾಲಿನ್ಯ ಆಗದ ರೀತಿಯಲ್ಲಿ ಬೇಯಿಸಿ, ತಣ್ಣಗಾದ ನಂತರ ಸಗಣಿ, ನೀರು ಸೇರಿಸಿ ಗಿಡಗಳಿಗೆ ಗೊಬ್ಬರವಾಗಿ ಉಪಯೋಗಿಸುವ ಮೂಲಕ ಒಣ ಪದಾರ್ಥಗಳನ್ನು ಗೊಬ್ಬರ ಮಾಡುವುದು ವಿಶೇಷವಾಗಿದೆ.
ಆರೋಗ್ಯ ತಪಾಸಣೆ : ಜೆಎಸ್‌ಎಸ್ ವೈದ್ಯಕೀಯ ಸಂಸ್ಥೆಯಿಂದ ಜಾತ್ರೆಗೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಉಚಿತವಾಗಿ ಎಲ್ಲ ಮಾದರಿಯ ವೈದ್ಯಕೀಯ ತಪಾಸಣೆ ಮಾಡಿ ಉಚಿತ ಪರಿಕರ ವಿತರಣೆ ಮಾಡುವುದು ಜಾತ್ರೆಯ ಎಲ್ಲ ದಿನಗಳೂ ನಡೆಯುತ್ತದೆ.
ಸುತ್ತೂರು ಜಾತ್ರೆಯಲ್ಲಿ ಕಿವಿಗೆ ಇಂಪಾಗಿಸುವ ಸಾಂಸ್ಕೃತಿಕ ಮತ್ತು ಮನೋರಂಜನೆ ಕಾರ್ಯಕ್ರಮಗಳು ಕೂಡ ಆಯೋಜಿಸಲಾಗಿದೆ. ಸುಗಮ ಸಂಗೀತ, ಸೋಬಾನೆ ಪದ, ಭರತನಾಟ್ಯ, ಡಾನ್ಸ್, ನಾಟಕ ಪ್ರದರ್ಶನ, ಚಿಣ್ಣರ ಕ್ರೀಡೆಗಳು ರಂಜಿಸುತ್ತಿವೆ. ದೇಸಿ ಕ್ರೀಡೆಗಳ ಕಲರವ: ಶನಿವಾರ ದೇಸಿ ಆಟಗಳು ನೋಡುಗರ ಮೈ ರೋಮಾಂಚನಗೊಳಿಸಿದವು. ಹಗ್ಗ-ಜಗ್ಗಾಟ, ಗುಂಡು ಎತ್ತುವುದು, ಮೂಟೆ ಹೊತ್ತು ಓಡುವುದು ಸೇರಿದಂತೆ ಹಲವು ಕ್ರೀಡೆಗಳು ನಡೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net