ಎಐಡಿಎಸ್ಒ ಬೃಹತ್ ಪ್ರತಿಭಟನಾ ಸಮಾವೇಶ

 ಸರ್ಕಾರಿ ಶಾಲೆಗಳನ್ನು ಉಳಿಸುವಂತೆ ಆಗ್ರಹಿಸಿ ನಗರದಲ್ಲಿ ಪಾಲಕರು, ಮಕ್ಕಳು ಸಮಾವೇಶದಲ್ಲಿ ಭಾಗವಹಿಸಿರುವ ದೃಶ್ಯ.
ಸರ್ಕಾರಿ ಶಾಲೆಗಳನ್ನು ಉಳಿಸುವಂತೆ ಆಗ್ರಹಿಸಿ ನಗರದಲ್ಲಿ ಪಾಲಕರು, ಮಕ್ಕಳು ಸಮಾವೇಶದಲ್ಲಿ ಭಾಗವಹಿಸಿರುವ ದೃಶ್ಯ.
Published on
ನಂಜನಗೂಡು: ಸರ್ಕಾರಿ ಶಾಲೆಗಳ ಉಳಿವಿಗಾಗಿ ಹಾಗೂ ಕೆಪಿಎಸ್ ಮ್ಯಾಗ್ನೆಟ್ ವಿರೋಧಿಸಿ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಎಐಡಿಎಸ್ಒ ಬೃಹತ್ ಸಮಾವೇಶ ನಡೆಯಿತು.
ತಾಲೂಕಿನ ಗ್ರಾಮಗಳ ಸರ್ಕಾರಿ ಶಾಲಾ ಮಕ್ಕಳು ಮತ್ತು ಪಾಲಕರ ನೇತೃತ್ವದಲ್ಲಿ ಜರುಗಿದ ತಾಲೂಕು ಮಟ್ಟದ ಪ್ರತಿಭಟನಾ ಸಮಾವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
40 ಸಾವಿರ ಸರ್ಕಾರಿ ಶಾಲೆಗಳನ್ನು ಮುಗಿಸುವ ಹುನ್ನಾರ ನಡೆಸಲಾಗುತ್ತದೆ. ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಸರ್ಕಾರ ಮುಂದಾಗಿದೆ. ಕೂಡಲೇ ಯೋಜನೆಯನ್ನು ರದ್ದುಗೊಳಿಸಬೇಕು. ಶಾಲೆಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರಗಳ ಕ್ರಮ ಸರಿಯಲ್ಲ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ತವರು ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕಿನ ಹದಿನಾರು ಗ್ರಾಮದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ತೆರೆದು ಹದಿನಾರು ಮೊಳೆ, ಮೂಡಹಳ್ಳಿ, ಮಲ್ಲರಾಜನಹುಂಡಿ, ಮಾದಯ್ಯನಹುಂಡಿ, ಆಲತ್ತೂರು ಗ್ರಾಮಗಳ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲಾಗುತ್ತಿದೆ. ಹೊರಳವಾಡಿ ಗ್ರಾಮದಲ್ಲಿ ಇಮ್ಮಾವು, ಉಪ್ಪಲಿಗರ ಹುಂಡಿ, ಹುಳಿಮಾವು, ತೊರೆಮಾವು, ಬೊಕ್ಕಹಳ್ಳಿ, ಕೆಂಪಿಸಿದ್ದನ ಹುಂಡಿ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಉಪಾಧ್ಯಾಯರು ಮತ್ತು ಪರಿಕರಗಳ ಸಮೇತ ವಿಲೀನಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನಾ ಸಮಾವೇಶದಲ್ಲಿ ಎಐಡಿಎಒ ರಾಜ್ಯ ಉಪಾಧ್ಯಕ್ಷರಾದ ಸಿಎಂ ಅಪೂರ್ವಾ, ಉಮಾದೇವಿ, ಸ್ವಾತಿ, ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದ ಕೊಪ್ಪ, ಜಿಲ್ಲಾ ಕಾರ್ಯದರ್ಶಿ ನಿತಿನ್, ಚಂದ್ರಶೇಖರಮೇಟಿ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೆಜ್ಜಿಗೆ ಪ್ರಕಾಶ್, ಬಸವರಾಜು, ಉಗ್ರನರಸಿಂಹಗೌಡ, ದಸಂಸ ಸಂಚಾಲಕ ಮೂಡಹಳ್ಳಿ ಪ್ರಸಾದ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net