ಮನರೇಗಾ ತಿದ್ದುಪಡಿಯಿಂದ ದುಡಿಯುವ ಹಕ್ಕಿಗೆ ಮಾರಕ

ನಗರದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ‘ನರೇಗ ಬಚಾವ್ ಸಂಗ್ರಾಮ್’ ಸಿದ್ಧತಾ ಸಭೆಯಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿದರು. ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ವಕ್ತಾರ ಎಚ್.ಎ.ವೆಂಕಟೇಶ್, ಮುಖಂಡ ಜಿ.ಎನ್.ನಂಜುಂಡಸ್ವಾಮಿ ಇತರರಿದ್ದರು.
ನಗರದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ‘ನರೇಗ ಬಚಾವ್ ಸಂಗ್ರಾಮ್’ ಸಿದ್ಧತಾ ಸಭೆಯಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿದರು. ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ವಕ್ತಾರ ಎಚ್.ಎ.ವೆಂಕಟೇಶ್, ಮುಖಂಡ ಜಿ.ಎನ್.ನಂಜುಂಡಸ್ವಾಮಿ ಇತರರಿದ್ದರು.
Published on
ಮೈಸೂರು: ಮನಮೋಹನ್ ಸಿಂಗ್ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆ ಬಡಜನರಿಗೆ ಉದ್ಯೋಗ ಖಾತ್ರಿ ನೀಡಿತ್ತು. ಯೋಜನೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಕೇಂದ್ರ ಸರ್ಕಾರ ತೆಗೆದು ಹಾಕುವುದರ ಜತೆಗೆ ಜನರ ದುಡಿಯುವ ಹಕ್ಕನ್ನು ಕಿತ್ತುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ದೂರಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ನರೇಗಾ ಬಚಾವ್ ಸಂಗ್ರಾಮ್ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಹೆಸರನ್ನು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಅವಮಾನ ಮಾಡಿದೆ. ಕೇಂದ್ರದ ಎನ್‌ಡಿಎ ಸರ್ಕಾರ ಅನೇಕ ಹೆಸರುಗಳನ್ನು ಬದಲಾವಣೆ ಮಾಡುತ್ತಿದೆ. ಆದರೆ, ದೇಶದ ಅಭಿವೃದ್ಧಿ, ಜನರ ಸ್ಥಿತಿ ಹಾಗೆಯೇ ಇದೆ. ನರೇಗಾ ಯೋಜನೆ ಮಹಾತ್ಮ ಗಾಂಧೀಜಿಯ ಅಂತ್ಯೋದಯ ಮತ್ತು ಸ್ವರಾಜ್ ಆಶಯವನ್ನು ಒಳಗೊಂಡಿತ್ತು. ನರೇಗಾ ತಿದ್ದುಪಡಿ ದುಡಿಯುವ ಹಕ್ಕು, ರಾಜಕೀಯ, ಆರ್ಥಿಕ ಮತ್ತು ಸಂವಿಧಾನ ಹಕ್ಕನ್ನು ಉಲ್ಲಂಘನೆ ಮಾಡುತ್ತದೆ. ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸದೆ ತರಾತುರಿಯಲ್ಲಿ ಕಾಯ್ದೆ ತಂದಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ. ಈ ಕಾಯ್ದೆ ದುಡಿಯುವ ಹಕ್ಕಿಗೆ ಮಾರಕವಾಗಿದೆ ಎಂದು ದೂರಿದರು.
ಕೆಲಸ ಬೇಕು ಎನ್ನುವವರಿಗೆ ಕೆಲಸ ಕೊಡಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ದುಡಿಯುವ ಹಕ್ಕು ಕೊಟ್ಟಿದ್ದಾರೆ. ಆದರೆ ಇಂದು ಆ ದುಡಿಯುವ ಹಕ್ಕಿಗೆ ಹಾಗೂ ಬದುಕುವ ಹಕ್ಕಿಗೆ ಕೇಂದ್ರ ಸರ್ಕಾರ ಧಕ್ಕೆ ಬರುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅರೋಪಿಸಿದರು.

ಪ್ರಧಾನಿ ಮೋದಿ ಅವರು ಕೋವಿಡ್ ಸಂಕಷ್ಟದ ಕಾಲದಲ್ಲಿ ದೀಪ ಹಚ್ಚಿ, ಜಾಗಟೆ ಬಡಿಯುವಂತೆ ಕರೆಕೊಟ್ಟರು. ಆದರೆ ನರೇಗಾ 19 ಕೋಟಿ ಜನರಿಗೆ ನೆರವಾಯಿತು. ದೇಶದಲ್ಲಿ 12 ಕೋಟಿ ಜನರು ಮತ್ತು ರಾಜ್ಯದಲ್ಲಿ 70 ಲಕ್ಷ ಜನರು ಅವಲಂಬಿತರಿದ್ದಾರೆ. ನರೇಗಾ ಉದ್ಯೋಗವನ್ನು ಅವಲಂಬಿಸಿರುವ 7 ಸಾವಿರ ನೌಕರರು ಬೀದಿ ಪಾಲಾಗುತ್ತಾರೆ ಎಂದು ಆರೋಪಿಸಿದರು.
ಹೊಸ ಕಾಯ್ದೆಯಿಂದ ಗ್ರಾಮ ಸಭೆ, ಪಂಚಾಯಿತಿ ಅಧಿಕಾರ ಮೊಟಕು ಮಾಡಲಾಗಿದೆ. ದನದ ಕೊಟ್ಟಿಗೆ, ಹೊಲದ ರಸ್ತೆ ನಿರ್ಮಾಣ ಸೇರಿದಂತೆ ಯಾವುದಕ್ಕೂ ಅವಕಾಶ ಇಲ್ಲವಾಗಿದೆ. ದೇಶದ ಜನಪರವಾದ ಯೋಜನೆಯನ್ನು ನಾಶ ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಈ ಯೋಜನೆಗೆ ಕೇಂದ್ರ ಸರ್ಕಾರವೇ ಶೇ.100 ಹಣ ಕೊಡುತ್ತಿತ್ತು. ಈಗ ಕೇಂದ್ರ ಸರ್ಕಾರ ಶೇ.60 ಹಣ ಕೊಟ್ಟರೆ ರಾಜ್ಯ ಸರ್ಕಾರ ಶೇ.40 ಹಣ ನೀಡಬೇಕಾಗಿದೆ. ಈ ರೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಪಾಲುಗಳನ್ನು ಕೊಡಬೇಕೆಂದಾಗ ಯೋಜನೆ ಸಂಬಂಧ ರಾಜ್ಯ ಸರ್ಕಾರಗಳ ಜತೆಗೆ ಕೇಂದ್ರ ಸರ್ಕಾರ ಚರ್ಚಿಸಬೇಕು ಎಂದು ತಿಳಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ವಕ್ತಾರ ಎಚ್.ಎ.ವೆಂಕಟೇಶ್, ಮುಖಂಡ ಜಿ.ಎನ್.ನಂಜುಂಡಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net