ಆಷಾಢ ಶುಕ್ರವಾರ ಹಾಗೂ ವರ್ಧಂತಿ ಮಹೋತ್ಸವ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆಗಳನ್ನು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಬುಧವಾರ ಖುದ್ದು ಪರಿಶೀಲಿಸಿದರು.
ಇದೇ ವೇಳೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಭಕ್ತರಿಗೆ ಸುಗಮ ದರ್ಶನವೇ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದ ಸಚಿವರು, ನಿಗದಿತ ಸಮಯ ನಂತರ ಆಗಮಿಸುವ ವಿಐಪಿಗಳು ಸಾಮಾನ್ಯ ಸಾಲಿನಲ್ಲೇ ದರ್ಶನ ಪಡೆಯಬೇಕು ಎಂದು ಹೇಳಿದರು.
ಲೋಪವಾಗದಂತೆ ಎಲ್ಲ ಸಿದ್ಧತೆ:
ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಸುಲಭ ದರ್ಶನ ಕಲ್ಪಿಸುವುದು ನಮ್ಮ ಮೊದಲ ಆದ್ಯತೆ. ಇದಕ್ಕಾಗಿ ಯಾವುದೇ ಲೋಪವಾಗದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿಐಪಿ ಹಾಗೂ ಶಿಫಾರಸು ಪತ್ರ ತಂದವರಿಗೆ ಬೆಳಗ್ಗೆ 5.30 ರಿಂದ 9.30ವರೆಗೆ ಮಾತ್ರ ಪ್ರತ್ಯೇಕ ಸರತಿ ಸಾಲಿನ ಮೂಲಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಅಗತ್ಯ ಬಿದ್ದರೆ ಸಂಜೆ ವೇಳೆಗೆ ಮತ್ತೊಂದು ಕೋಟಾ ನಿಗದಿಪಡಿಸಲಾಗುವುದು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
300 ರೂ.ಟಿಕೆಟ್ ಮತ್ತು ಸಾಮಾನ್ಯ ಸರತಿ ಸಾಲು ಒಂದೇ ಕಡೆ ಸೇರುತ್ತಿದ್ದರಿಂದ ಗೊಂದಲ ಉಂಟಾಗುತ್ತಿತ್ತು. ಹೀಗಾಗಿ ಸದ್ಯಕ್ಕೆ 300 ರೂ.ಟಿಕೆಟ್ ವ್ಯವಸ್ಥೆ ರದ್ದುಗೊಳಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ವಾರ ಪರ್ಯಾಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾಲ್ನಡಿಗೆಯಲ್ಲಿ ಮೆಟ್ಟಿಲು ಹತ್ತಿ ಬರುವ ಭಕ್ತರಿಗಾಗಿ 3 ಕಡೆ ತಾತ್ಕಾಲಿಕ ತಂಗುದಾಣ, ಶೌಚಗೃಹ, ಕುಡಿಯುವ ನೀರು, ಬಾದಾಮಿ ಹಾಲು ಹಾಗೂ ಬಿಸ್ಕೆಟ್ ವಿತರಣೆಯ ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲೇ ಮೆಟ್ಟಿಲುಗಳ ಬಳಿ ಶಾಶ್ವತ ಶೌಚಗೃಹ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಖಾಸಗಿ ವಾಹನಗಳಿಗೆ ನಿಷೇಧ:
ಸಚಿವರು, ಶಾಸಕರು, ನ್ಯಾಯಾಧೀಶರು ಹಾಗೂ ಅವರ ತಕ್ಷಣದ ಕುಟುಂಬಸ್ಥರ ವಾಹನಗಳಿಗೆ ಮಾತ್ರ ಬೆಟ್ಟದ ಮೇಲಕ್ಕೆ ಹೋಗಲು ಅನುಮತಿ ಇರಲಿದೆ. ಶಿಫಾರಸು ಪತ್ರ ತಂದವರ ವಾಹನಗಳಿಗೂ ಅವಕಾಶವಿರುವುದಿಲ್ಲ. ಲಲಿತ ಮಹಲ್ ಬಳಿ ವಾಹನ ಪಾರ್ಕ್ ಮಾಡಿ, ಸರ್ಕಾರಿ ಉಚಿತ ಬಸ್‌ಗಳ ಮೂಲಕವೇ ಬೆಟ್ಟಕ್ಕೆ ಬರಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಡಿಸಿಪಿಗಳಾದ ಡಾ.ಹರ್ಷಾ ಪ್ರಿಯಂವದ, ಸುಂದರ್ ರಾಜ್, ಚಾಮುಂಡಿಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಇದ್ದರು.