ಮ್ಯಾರಾಥಾನ್‌ನಿಂದ ದೈಹಿಕ ಶಕ್ತಿ, ಆತ್ಮವಿಶ್ವಾಸ ಹೆಚ್ಚಳ: ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಅಭಿಮತ
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಭಾರತ್ ಕ್ಯಾನ್ಸರ್ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ಮ್ಯಾರಾಥಾನ್‌ಗೆ ಡಾ.ಐ.ಬಿ.ಪ್ರಭುಗೌಡ ಚಾಲನೆ ನೀಡಿದರು. ಡಾ.ಕೆ.ಎನ್.ಸಂತೋಷ್‌ಕುಮಾರ್, ಗಂಗಾಧರ್, ಡಾ.ಸರ್ವೇಶ ರಾಜೇ ಅರಸ್, ಡಾ.ಎಸ್.ಚಂದ್ರಶೇಖರ್, ಡಾ.ಶಶಿಧರ್, ಡಾ. ಎಂ.ಬಿ.ಆಶಾ, ಡಾ. ಸಚಿನ್, ಡಾ. ರಾಜಾಪುರ ಪರಶುರಾಮ್ ಇತರರು ಇದ್ದರು.
ಆಧುನಿಕ ಸಮಾಜದಲ್ಲಿ ದೈಹಿಕ ಸಾಮರ್ಥ್ಯ ಮತ್ತು ಸಾಮಾಜಿಕ ಜವಾಬ್ದಾರಿ ಅತ್ಯಂತ ಮಹತ್ವದ್ದು
ದೈಹಿಕ ಶಕ್ತಿ, ಮಾನಸಿಕ ಶಾಂತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗಿವೆ
ಮೈಸೂರು:‘ವೇಗಸ್-26’ ಮತ್ತು ‘ಸಂಸ್ಕೃತಿ-26’ ಸಾಂಸ್ಕೃತಿಕ ಹಬ್ಬಗಳ ಪೂರ್ವಭಾವಿಯಾಗಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಂಎಂಸಿ ಮತ್ತು ಆರ್‌ಐ), ಭಾರತ್ ಕ್ಯಾನ್ಸರ್ ಆಸ್ಪತ್ರೆ (ಬಿಎಚ್‌ಐಒ) ಸಹಯೋಗದೊಂದಿಗೆ ಕ್ಯಾನ್ಸರ್ ಜಾಗೃತಿ ಮ್ಯಾರಾಥಾನ್ ಆಯೋಜಿಸಲಾಗಿತ್ತು.
ಜಾಗೃತಿಗಾಗಿ ಓಟ, ಗುಣಪಡಿಸಲು ಪೈಪೋಟಿ ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಈ ಓಟದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರು, ಆರೋಗ್ಯ ವೃತ್ತಿಪರರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು. ಮುಕ್ತ ವಿಭಾಗದ ಪುರುಷರ ಓಟದಲ್ಲಿ ಪುರುಷೋತ್ತಮ್ ಪ್ರಥಮ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ದಿವ್ಯಶ್ರೀ ವಿಜೇಯಿಯಾದವರು.
ಓಟಕ್ಕೆ ಚಾಲನೆ ನೀಡಿದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಡಾ.ಐ.ಬಿ.ಪ್ರಭುಗೌಡ ಮಾತನಾಡಿ, ಆಧುನಿಕ ಸಮಾಜದಲ್ಲಿ ದೈಹಿಕ ಸಾಮರ್ಥ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ಒತ್ತಿ ಹೇಳಿದರು. ಇಂದಿನ ವೇಗದ ಜಗತ್ತಿನಲ್ಲಿ ಜನರು ಒತ್ತಡ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದ ಬಳಲುತ್ತಿದ್ದು, ಮ್ಯಾರಾಥಾನ್‌ಗಳು ದೈಹಿಕ ಶಕ್ತಿ, ಮಾನಸಿಕ ಶಾಂತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗಿವೆ ಎಂದು ತಿಳಿಸಿದರು.
ಒಂದೇ ಗುರಿಯೊಂದಿಗೆ ವಿವಿಧ ಸ್ತರದ ಜನರನ್ನು ಒಗ್ಗೂಡಿಸಿ ಮುನ್ನಡೆಯಲು ಇಂತಹ ಕ್ರೀಡಾಕೂಟಗಳು ಪ್ರೇರಣೆ ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಕೆ.ಎನ್.ಸಂತೋಷ್‌ಕುಮಾರ್ ಮಾತನಾಡಿ, ಕ್ಯಾನ್ಸರ್ ರೋಗದ ತಡೆಗಟ್ಟುವಿಕೆ ಮತ್ತು ಆರಂಭಿಕ ಹಂತದಲ್ಲಿ ರೋಗ ಪತ್ತೆಹಚ್ಚುವಿಕೆಯ ಪ್ರಾಮುಖ್ಯತೆಯನ್ನು ವಿವರಿಸಿದರು.
ಕ್ಯಾನ್ಸರ್ ಕೇವಲ ರೋಗಿಯನ್ನಷ್ಟೇ ಅಲ್ಲದೆ ಇಡೀ ಕುಟುಂಬ ಮತ್ತು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸಮಯೋಚಿತ ಚಿಕಿತ್ಸೆಯಿಂದ ಜೀವ ಉಳಿಸಬಹುದು ಮತ್ತು ಚಿಕಿತ್ಸೆಯ ಸಮಯದಲ್ಲಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಚೇತರಿಕೆಯ ವೇಗವನ್ನು ಹೆಚ್ಚಿಸುತ್ತದೆ ಎಂದು ಮಾಹಿತಿ ನೀಡಿದರು.
ಈ ಮ್ಯಾರಾಥಾನ್ ಕೇವಲ ಕ್ರೀಡೆಯನ್ನು ಉತ್ತೇಜಿಸುವುದಕ್ಕಷ್ಟೇ ಸೀಮಿತವಾಗಿರದೆ, ಸಾರ್ವಜನಿಕರಲ್ಲಿ ನಿಯಮಿತ ಆರೋಗ್ಯ ತಪಾಸಣೆ ಮತ್ತು ಉತ್ತಮ ಜೀವನಶೈಲಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಿತ್ತು ಎಂದು ತಿಳಿಸಿದರು.