ಮಹಾರಾಜ ಟ್ರೋಫಿ ಮೈಸೂರು ಚರಣಕ್ಕೆ ತೆರೆ

‘ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ-20 ಕ್ರಿಕೆಟ್ ಟೂರ್ನಿ
‘ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ-20 ಕ್ರಿಕೆಟ್ ಟೂರ್ನಿ
Published on

ಪ್ರಮುಖ ಮುಖ್ಯಾಂಶಗಳು

  • ಸತತ 6 ದಿನ ನಡೆದ ಪಂದ್ಯಾವಳಿ
ಅವಿನಾಶ್ ಜೈನಹಳ್ಳಿ ಮೈಸೂರು
ಹೊಸ ಆಟಗಾರರ ಪ್ರತಿಭೆ ಅನಾವರಣ... ಆಟಗಾರರಿಂದ ಸಿಕ್ಸರ್, ಬೌಂಡರಿಗಳ ಸುರಿಮಳೆ... ಮೈದಾನದತ್ತ ಹರಿದುಬಂದ ಕ್ರಿಕೆಟ್ ಪ್ರೇಮಿಗಳು... ನಗರದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ 5ನೇ ಆವೃತ್ತಿಯ ‘ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ-20 ಕ್ರಿಕೆಟ್ ಟೂರ್ನಿಯ ಪ್ರಮುಖಾಂಶಗಳಿವು.
ಸಾಂಸ್ಕೃತಿಕ ನಗರಿಯ ಕ್ರಿಕೆಟ್ ಪ್ರೇಮಿಗಳಿಗೆ ಭರಪೂರ ಮನರಂಜನೆ ನೀಡಿದ ಮಹಾರಾಜ ಟ್ರೋಫಿ ಪಂದ್ಯಾವಳಿಯ ಮೈಸೂರು ಚರಣಕ್ಕೆ ಗುರುವಾರ ಅದ್ದೂರಿಯಾಗಿ ತೆರೆ ಬಿತ್ತು.
ನಗರದಲ್ಲಿ ಸತತ 6 ದಿನಗಳ ನಡೆದ ಪಂದ್ಯಾವಳಿ ಯಶಸ್ವಿಗೊಂಡಿತು. ಮಳೆಯಿಂದ ರದ್ದಾದ ಕೋಸ್ಟಲ್ ಕಿಂಗ್ಸ್ ಮಂಗಳೂರು ಮತ್ತು ಹುಬ್ಬಳ್ಳಿ ಟೈಗರ್ಸ್‌ ನಡುವಿನ ಒಂದು ಪಂದ್ಯ ಹೊರತಾಗಿ ಉಳಿದ 11 ಪಂದ್ಯಗಳು ರೋಚಕ ಅನುಭವ ನೀಡಿದವು. ಪ್ರೇಕ್ಷಕರಿಗೆ ಕ್ರಿಕೆಟ್ ರಸ ಉಣಬಡಿಸಿದವು. ಟೂರ್ನಿಯ ಉಳಿದ ಪಂದ್ಯಗಳು ಹುಬ್ಬಳ್ಳಿ ಹಾಗೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ.
ಸಾಂಸ್ಕೃತಿಕ ನಗರಿಯ ಜನತೆ ಅಂತಿಮ ದಿನವಾದ ಗುರುವಾರವೂ ‘ಮಹಾರಾಜ ಟ್ರೋಫಿ’ ಟಿ-20 ಕ್ರಿಕೆಟ್ ಟೂರ್ನಿಯ ಗುಂಗಿನಲ್ಲಿ ಮಿಂದೆದ್ದೆರು. ಮುಖ್ಯವಾಗಿ ಪ್ರಮುಖ ಸ್ಟಾರ್ ಆಟಗಾರರನ್ನು ಕಂಡು ಖುಷಿಪಟ್ಟರು. ನಿರೀಕ್ಷೆಗೂ ಮೀರಿ ಆಗಮಿಸಿದ್ದ ಅಭಿಮಾನಿಗಳು ಕ್ರಿಕೆಟ್ ಹಬ್ಬದ ರಸದೌತಣ ಸವಿದರು.
ಅಂತಿಮ ದಿನ ಕೋಸ್ಟಲ್ ಕಿಂಗ್ಸ್ ಮಂಗಳೂರು-ಮೈಸೂರು ವಾರಿಯರ್ಸ್‌ ನಡುವೆ ಮೊದಲ ಪಂದ್ಯ ಹಾಗೂ ಹುಬ್ಬಳ್ಳಿ ಟೈಗರ್ಸ್‌-ಗುಲ್ಬರ್ಗ ಮಿಸ್ಟಿಕ್ಸ್ ನಡುವೆ ಎರಡನೇ ಪಂದ್ಯ ನಡೆಯಿತು. ಐಪಿಎಲ್ ಹಾಗೂ ರಾಷ್ಟ್ರೀಯ ತಂಡದಲ್ಲಿ ಆಡಿ ಗಮನ ಸೆಳೆದಿರುವ ಸ್ಟಾರ್ ಆಟಗಾರರು ಕಡೇ ದಿನ ಟೂರ್ನಿಗೆ ರಂಗು ನೀಡಿದರು.
ಪ್ರಮುಖವಾಗಿ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಐಪಿಎಲ್‌ನ ದೆಹಲಿ ತಂಡದ ಪರ ಆಡುವ ಕೋಸ್ಟಲ್ ಕಿಂಗ್ಸ್, ಮಂಗಳೂರು ತಂಡದ ನಾಯಕ ಕರುಣ್ ನಾಯರ್, ಐಪಿಎಲ್‌ನ ಕೆಕೆಆರ್ ತಂಡದ ಪರ ಆಡುವ ಮನೀಶ್ ಪಾಂಡೆ, ಪಂಜಾಬ್ ತಂಡದ ಪರ ಆಡುವ ಮೈಸೂರು ವಾರಿಯರ್ಸ್‌ ತಂಡದ ನಾಯ ವೈಶಾಕ್ ವಿಜಯ್‌ಕುಮಾರ್, ಹುಬ್ಬಳ್ಳಿ ಟೈಗರ್ಸ್‌ ತಂಡದ ಮಯಾಂಕ್ ಅಗರ್ವಾಲ್ ಅವರನ್ನು ಮೈದಾನದಲ್ಲಿ ನೋಡುತ್ತಿದ್ದಂತೆ ಪ್ರೇಕ್ಷಕರು ಹರ್ಷ ವ್ಯಕ್ತಪಡಿಸಿದರು. ಯಾವುದೇ ತಂಡದ ಆಟಗಾರರು ಒಂದೊಂದು ರನ್ ಪೂರೈಸಿದಾಗಲೂ ಶಿಳ್ಳೆ ಹೊಡೆದು ಸಂಭ್ರಮಿಸಿದರು. ಪ್ರತಿ ಆಟಗಾರರು ಬ್ಯಾಟಿಂಗ್ ಮಾಡುವಾಗ ಮೈದಾನದ ಮೂಲೆ-ಮೂಲೆಯಿಂದಲೂ ‘ಸಿಕ್ಸ್... ಸಿಕ್ಸ್.... ಸಿಕ್ಸ್...’ ಎಂದು ಕೂಗಿದರು.
ಐಪಿಎಲ್ ಮಾದರಿಯಲ್ಲೇ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಕ್ರೇಜ್ ಹುಟ್ಟಿಸಿದ್ದ ಮಹಾರಾಜ ಟೂರ್ನಿಗೆ ಜೂನ್ 20 ರಂದು ಮೈಸೂರಿನಲ್ಲಿ ವೈಭವೋಪೇತವಾಗಿ ಚಾಲನೆ ಸಿಕ್ಕಿ, ಪ್ರಮುಖ 12 ಲೀಗ್ ಪಂದ್ಯಗಳು ಜರುಗಿದವು. ಹುಬ್ಬಳ್ಳಿಯಲ್ಲಿ ಜೂನ್ 27ರಿಂದ ಜುಲೈ 3ರವರೆಗೆ ಹಾಗೂ ಬೆಂಗಳೂರಿನಲ್ಲಿ ಜುಲೈ 5 ರಿಂದ 12ರವರೆಗೆ ಪಂದ್ಯಗಳು ನಡೆಯಲಿವೆ. ಬೆಂಗಳೂರಿನಲ್ಲಿ 10 ಪಂದ್ಯಗಳು ನಡೆಯಲಿವೆ. ಕ್ವಾಲಿಫೈಯರ್-1, ಎಲಿಮಿನೇಟರ್, ಕ್ವಾಲಿಫೈಯರ್-2 ಹಾಗೂ ಫೈನಲ್ ಪಂದ್ಯಗಳಿಗೆ ಬೆಂಗಳೂರು ಸಾಕ್ಷಿಯಾಗಲಿದೆ.
ಮೈಸೂರಿನ ಕ್ರಿಕೆಟ್ ಪ್ರೇಮಿಗಳು ಮೈಸೂರು ವಾರಿಯರ್ಸ್‌, ಕೋಸ್ಟಲ್ ಕಿಂಗ್ಸ್ ಮಂಗಳೂರು, ಗುಲ್ಬರ್ಗಾ ಮಿಸ್ಟಿಕ್ಸ್, ಹುಬ್ಬಳ್ಳಿ ಟೈಗರ್ಸ್‌, ಬೆಂಗಳೂರು ಬ್ಲಾಸ್ಟರ್ಸ್‌ ಮತ್ತು ಶಿವಮೊಗ್ಗ ಯೋಧಾಸ್ ತಂಡಗಳ ಪ್ರದರ್ಶನ ಕಂಡು ಖುಷಿಪಟ್ಟರು. ಸ್ಟಾರ್ ಆಟಗಾರರನ್ನು ನೋಡಿ ಸಂಭ್ರಮಿಸಿದರು. ಮೈಸೂರಿನಲ್ಲಿ ನಡೆದ ಮಹಾರಾಜ ಟ್ರೋಫಿಯ ಮೊದಲ ಚರಣದ 12 ಪಂದ್ಯದಲ್ಲೂ ಸ್ಥಳೀಯ ಆಟಗಾರರು ಮಿಂಚಿದರು. ಎಲ್.ಆರ್. ಚೇತನ್, ಎಲ್.ಆರ್. ಕುಮಾರ್, ಎಂ.ಜಿ.ನವೀನ್, ಗೌತಮ್ ಸಾಗರ್, ಎಚ್.ಎಸ್.ಶರತ್, ಎಂ.ವೆಂಕಟೇಶ್ ಹಾಗೂ ನಿಕಿನ್ ಜೋಷ್ ಗಮನ ಸೆಳೆಯುವ ಪ್ರದರ್ಶನ ನೀಡಿದರು.
ಟೂರ್ನಿ ಸಣ್ಣಪುಟ್ಟ ವರ್ತಕರಿಗೂ ಭರ್ಜರಿ ವ್ಯಾಪಾರ ನೀಡಿತು. ಪಂದ್ಯಾವಳಿ ವೀಕ್ಷಣೆಗೆ ನಿರೀಕ್ಷೆಗೂ ಮೀರಿದ ಜನ ಆಗಮಿಸಿದ್ದ ಕಾರಣ ಮೈದಾನದ ಸುತ್ತಮುತ್ತ ಪಾನಿಪುರಿ, ಐಸ್‌ಕ್ರಿಮ್, ಕಡಲೆಕಾಯಿ, ಚುರುಮುರಿ, ಸೌತೆಕಾಯಿ, ಮಿಠಾಯಿ ಇನ್ನಿತರ ವಸ್ತುಗಳು ಭರ್ಜರಿಯಾಗಿ ಮಾರಾಟವಾಯಿತು. ಮೈಸೂರು ವಾರಿಯರ್ಸ್‌ ಪಂದ್ಯ ಇದ್ದ ದಿನಗಳಲ್ಲಿ ಹೆಚ್ಚಿನ ವ್ಯಾಪಾರ ನಡೆಯಿತು.
‘ಇಂತಹ ಕ್ರಿಕೆಟ್ ಪಂದ್ಯಾವಳಿಗಳು ಮೈಸೂರಿನಲ್ಲಿ ಆಗಾಗ್ಗೆ ನಡೆಯಬೇಕು. ಇದರಿಂದ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ಜತೆಗೆ, ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ಅವಕಾಶ ಸಿಕ್ಕಿದಂತಾಗುತ್ತದೆ. ನನಗಂತೂ ಮನೀಷ್ ಪಾಂಡೆ, ಮಯಾಂಕ್, ವೈಶಾಕ್ ಅವರನ್ನು ಹತ್ತಿರದಿಂದ ನೋಡಿ ಖುಷಿಯಾಯಿತು’ ಎಂದು ಕ್ರಿಕೆಟ್ ಪ್ರೇಮಿ ಚಂದ್ರು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net