ಮೈಸೂರು: ವಿಶ್ವವಿದ್ಯಾಲಯಗಳಲ್ಲಿ ಈಗ ಪ್ರಚಲಿತದಲ್ಲಿರುವ ಬೋಧನಾ ಕಾರ್ಯದ ರೀತಿ ಬದಲಾಯಿಸಬೇಕಿದೆ ಎಂದು ಇಸ್ರೋ ವಿಶ್ರಾಂತ ಅಧ್ಯಕ್ಷ ಡಾ.ಎಸ್.ಸೋಮನಾಥ್ ಅಭಿಪ್ರಾಯಪಟ್ಟರು.
ನಗರದ ಕ್ರಾಫರ್ಡ್ ಭವನದಲ್ಲಿ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾಲಯದ 106ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು. ವಿದ್ವಾಂಸರು ಹಾಗೂ ಸಂಶೋಧಕರು
ಶ್ರದ್ಧಾವಂತರಾಗಿರುವುದರೊಂದಿಗೆ ಪ್ರಸ್ತುತತೆಗೆ ಒಗ್ಗಿಕೊಂಡಿರಬೇಕು. ಸೀಮಾತೀತರಾಗಿ ಎಲ್ಲರೊಂದಿಗೆ ಬೆರೆಯಬೇಕು. ಆದರೆ, ಮೂಲ ಬೇರಿನ ಬಗ್ಗೆ ಕಾಳಜಿ ಇಟ್ಟುಕೊಂಡಿರಬೇಕು. ಪ್ರಸ್ತುತ ಪ್ರಪಂಚಕ್ಕೆ ವಿಜ್ಞಾನ ಮತ್ತು ಆತ್ಮಸಾಕ್ಷಿಯ ಅಗತ್ಯ ಇದೆ ಎಂದರು.
ಶೈಕ್ಷಣಿಕ ಕ್ಷೇತ್ರವೂ ಕೈಗಾರಿಕೆ ವಲಯ, ಸರ್ಕಾರ ಹಾಗೂ ನಾಗರಿಕ ಸಮಾಜದೊಂದಿಗೆ ಹೆಜ್ಜೆ ಹಾಕಬೇಕಾದ ಅನಿವಾರ್ಯ ಇದೆ. ವಿಶ್ವವಿದ್ಯಾಲಯಗಳು ಪರಿವರ್ತನಾ ಸಂಶೋಧನಾಲಯವಾಗಬೇಕು. ಇಲ್ಲಿ ಸಂಶೋಧನೆಗಳು ಕಾಗದದಿಂದ ಮೂಲರೂಪ ಪಡೆದುಕೊಂಡು ಉತ್ಪನ್ನಗಳಾಗಿ ಆವಿರ್ಭವಿಸುತ್ತವೆ. ಅಲ್ಲಿ ವಿದ್ಯಾರ್ಥಿಗಳು ಸಾಧ್ಯತೆಯ ಸ್ವರೂಪಗಳನ್ನು ಪ್ರಾಯೋಗಿಕವಾಗಿ ಕಲಿಯುತ್ತಾರೆ ಎಂದರು.
ಜ್ಞಾನದ ಮೂಲ ಉದ್ದೇಶ ಮನುಷ್ಯನ ಉಪಯೋಗಕ್ಕಾಗಿ ಎಂಬುದನ್ನು ಮರೆಯಬಾರದು. ಭೌತಿಕ ಪ್ರಗತಿ, ಅಂತರಂಗದ ಬೆಳವಣಿಗೆ ಪರಸ್ಪರ ಪ್ರತಿಸ್ಪರ್ಧಿಗಳಲ್ಲ,
ಅವು ಒಂದನ್ನೊಂದು ಅವಲಂಬಿಸಿ ಮುಂದೆ ಸಾಗುವಂತಹವು. ಜತೆಗೆ ಸರ್ವಾಂಗ ಬೆಳವಣಿಗೆಗೆ ಪೂರಕವಾಗಿರುವವು ಎಂದು ನಮ್ಮ ನಾಗರಿಕತೆಯ ಪರಂಪರೆಯು ತಿಳಿಸಿಕೊಟ್ಟಿದೆ.
ಪ್ರಾಚೀನ ಗಣಿತಶಾಸ್ತ್ರದಿಂದ ಆಧುನಿಕ ಔಷಧ ವಿಜ್ಞಾನದವರೆಗೆ ಭಾರತ ಕೇವಲ ಶಕ್ತಿ ಸಾಧನ ಒದಗಿಸಿಲ್ಲ. ಮನುಷ್ಯನ ಜೀವಿತದ ಉದ್ದೇಶವನ್ನೂ ತಿಳಿಸಿದೆ. ಈ ವಿಚಾರ ತಿಳಿದು ಅದನ್ನು ದೃಢವಾಗಿ ಅವಲಂಬಿಸಿಕೊಂಡು, ಲೋಕ ಗ್ರಹಿಸುವುದರೊಂದಿಗೆ ವಿದ್ಯಾರ್ಥಿಗಳು ತಮ್ಮ ಅಂತರಂಗದ ದನಿಯನ್ನು ಸದಾ ಆಲಿಸುತ್ತಿರಬೇಕು ಎಂದು ಕಿವಿಮಾತು ಹೇಳಿದರು.
ಹವಾಮಾನ ಬದಲಾವಣೆಯೂ ಕೃಷಿಯನ್ನು ಮರು ರೂಪಿಸುತ್ತಿದೆ. ನೀರು, ಆರೋಗ್ಯದ ಮೇಲೆ ಪ್ರಭಾವ ಬೀರಿದೆ. ಸಂಪನ್ಮೂಲ ಸೀಮಿತವಾಗಿರುವುದರಿಂದ ಇರುವುದನ್ನೂ ಜೋಪಾನವಾಗಿ ಬಳಸಬೇಕಾದ ಅನಿವಾರ್ಯತೆಯಿದೆ.
ಆರ್ಥಿಕ ಅಭದ್ರತೆ, ಸುರಕ್ಷತಾ ಸಮಸ್ಯೆಗಳು ನಮ್ಮ ನಿರ್ಧಾರ, ನಮ್ಮ ಸಾಂಸ್ಥಿಕ ಸದೃಢತೆಯನ್ನು ಕೆಣಕುತ್ತಿವೆ. ಆದರೆ, ಇದರಿಂದ ನಿರಾಸೆಯಾಗಬೇಕಾದ ಅಗತ್ಯವಿಲ್ಲ. ಇವುಗಳು ನಮ್ಮಲ್ಲಿ ಶಿಸ್ತುಬದ್ಧ ಭರವಸೆಗೆ ಕಾರಣವಾಗಿವೆ ಎಂದು ಸ್ಫೂರ್ತಿ ಬಿತ್ತಿದ್ದರು.
ಇಂಜಿನಿಯರುಗಳು, ವಿಜ್ಞಾನಿಗಳು, ಕಲಾವಿದರು, ಬೋಧಕರು, ಉದ್ಯಮಿಗಳು, ಸಾರ್ವಜನಿಕ ಸೇವಕರು ಸಮಸ್ಯೆಗಳಿಗೆ ಪರಿಹಾರ ನೀಡುವಂತಹ ಸ್ಥಾನದಲ್ಲಿ ಇರುವವರು. ಸಮಸ್ಯೆಗಳಿರುವೆಡೆಯಲ್ಲಿ ನಿಮ್ಮ ಮನಸ್ಸು ಕೊಡಿ. ಅವುಗಳನ್ನು ಪತ್ತೆ ಮಾಡಿ, ಅವುಗಳ ಬಗ್ಗೆ ಧ್ಯಾನಿಸಿ. ಆಗ ಪರಿಹಾರ ಹೊಳೆಯುತ್ತದೆ ಎಂದು ಹೇಳಿದರು.
ಪ್ರಪಂಚವನ್ನು ಎದುರಿಸುವಾಗ ಸೋಲು ಅನುಭವಕ್ಕೆ ಬರುತ್ತದೆ. ಸೋಲೆಂದರೆ ಅದೇ ನಿರ್ಣಾಯಕ ಸಂಗತಿಯಲ್ಲ. ಅದೊಂದು ಕಲಿಕೆಯ ಮಾಹಿತಿ, ಅನುಭವವಷ್ಟೆ. ಕೌಶಲ ವೃದ್ಧಿಸಿಕೊಳ್ಳಲು ಅದನ್ನು ಬಳಸಿಕೊಳ್ಳಬೇಕು.
ನಡೆಯುವ ಹಾದಿ ಸದೃಢಗೊಳಿಸಿಕೊಳ್ಳಲು ಹಾಗೂ ಸ್ವಂತ ಸತ್ವ ಅರಿತುಕೊಂಡು ಹೊಸ ಯೋಜನೆ ರೂಪಿಸುವುದಕ್ಕೆ ಅಂತರಂಗದ ಚೈತನ್ಯ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಂತ್ರಜ್ಞಾನವೂ ಎಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿ ಪರಿಣಮಿಸುತ್ತದೆ. ಬಾಹ್ಯಾಕಾಶವೆಂಬುದು ವಿಶಾಲ ಸತ್ಯದ ಕುರುಹು. ಕಠಿಣ ಕಾರ್ಯ ಮಾಡುತ್ತಲೇ ಭಾರತವೂ ಗುರಿ ತಲುಪಬೇಕಾಗಿದೆ. ಸ್ವಾಯತ್ತತೆಯನ್ನೂ ಮುಂದುವರಿಯಬೇಕಾಗಿದೆ. ಉತ್ಪಾದನಾ ವ್ಯವಸ್ಥೆಯಲ್ಲಿ ಸಂಪೂರ್ಣ ಸಾಧನೆ ಹೊಂದುವುದರೊಂದಿಗೆ ಸರಬರಾಜುದಾರರನ್ನೂ ಪೋಷಣೆ ಮಾಡಬೇಕು ಎಂದರು.
ಯಂತ್ರಾಂಶ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಪಾರಂಪರಿಕ ಜ್ಞಾನವನ್ನು ಮುಂದುವರಿಸಬೇಕು. ಅದರಲ್ಲಿ ತಂತ್ರಾಂಶವನ್ನೂ ಸಮ್ಮಿಳಿತಗೊಳಿಸಬೇಕಾಗಿದೆ. ಬಾಹ್ಯಾಕಾಶದಿಂದ ಸೆಮಿಕಂಡಕ್ಟರ್‌ಗಳವರೆಗೆ, ಜೈವಿಕ ತಂತ್ರಜ್ಞಾನದಿಂದ ಶುದ್ಧ ಇಂಧನದವರೆಗೆ ಜಾಗತಿಕ ತಂತ್ರಜ್ಞಾನ ಬೆಳೆಸಬೇಕು.
ಇದು ಸಾಧ್ಯವಾಗಬೇಕಾದರೆ ಸಂಶೋಧನೆಯನ್ನು ಕೈಗಾರಿಕೋದ್ಯಮವಾಗಿ ಪರಿವರ್ತಿಸಬೇಕು. ಕೈಗಾರಿಕೆಗಳನ್ನು ಕೂಡ ಸಂಶೋಧನೆಗಳತ್ತ ಹೊರಳಿಸಬೇಕು ಎಂದರು.
ನಿರಂತರತೆ ಮತ್ತು ಸೃಜನಶಿಲತೆ ಒಡನಾಡಿಗಳೇ ಹೊರತು, ಸ್ಪರ್ಧಿಗಳಲ್ಲ ಎಂಬುದನ್ನು ಮೈಸೂರು ದಸರಾ ಸಾಬೀತುಪಡಿಸಿದೆ.
ಅದೇ ರೀತಿ ಸತ್ಯ, ಅನುಕಂಪ ಮತ್ತು ಕುತೂಹಲ ಮುಂದಿನ ತಲೆಮಾರಿನವರು ಅನುಸರಿಸಬೇಕಾದ ಮೌಲ್ಯಗಳು. ವಿಕಸಿತ ಭಾರತದ ಸಾಮರ್ಥ್ಯ ಸಾಕ್ಷಾತ್ಕರಿಸಿಕೊಳ್ಳಬೇಕಾದರೆ, ಭಾರತವು ಸಶಕ್ತ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಬೇಕಾದರೆ ಪರಂಪರೆಯ ಕೊಂಡಿಗಳನ್ನು ಬೆಸೆಯಬೇಕು ಎಂದರು.