ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ವಿ.ಅರವಿಂದ್, ಟಿ.ಸೂರ್ಯನಾರಾಯಣ, ಪ್ರೊ.ಕೆ.ಎಸ್.ಸುರೇಶ್, ಪ್ರೀತಂ ಸುರಾನಾ, ಎನ್.ಮಂಜುಳಾ, ಡಾ.ಎನ್. ವಾಣಿಶ್ರೀ ಭಾಗವಹಿಸಿದ್ದರು.
ಕಾನೂನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸವಾಲುಗಳಿಗೆ ಸಿದ್ಧರಾಗಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಹೇಳಿದರು.
ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಚೆನ್ನೈನ ಸುರಾನ ಮತ್ತು ಸುರಾನ ಅಂತಾರಾಷ್ಟ್ರೀಯ ಅಟಾರ್ನಿಸ್ ಸಂಸ್ಥೆ ವತಿಯಿಂದ ಭಾನುವಾರ ಆಯೋಜಿಸಿದ್ದ 23ನೇ ಕಾರ್ಪೋರೇಟ್ ಕಾನೂನು ಅಣುಕು ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಈಗಂತೂ ವಾದ ಮಾತ್ರ ಸಾಕಾಗುವುದಿಲ್ಲ. ತಂತ್ರಜ್ಞಾನ, ಕೌಶಲ್ಯ ಸಹ ಅಗತ್ಯ. ಅಲ್ಲದೇ ವೃತ್ತಿಪರ ಚಿಂತನೆ, ಮನೋಭಾವ ಹಾಗೂ ವರ್ತನೆಯಲ್ಲಿ ಬದಲಾವಣೆಯೂ ಅಗತ್ಯವಾಗಿ ಬೇಕಾಗಿದೆ ಎಂದರು.
ಉತ್ತಮ ವಕೀಲರಾಗಬೇಕಾದರೇ ಸಂಕೀರ್ಣ ವಿಷಯಗಳನ್ನು ಸರಳವಾಗಿ ವಿವರಿಸುವ ಸಾಮರ್ಥ್ಯವು ಅತ್ಯಗತ್ಯ. ಭಾಷೆಯಲ್ಲಿ ನಿಖರತೆ, ವಾದದಲ್ಲಿ ಸರಿಯಾದ ರಚನೆ ಮತ್ತು ಪ್ರಸ್ತುತ ಪಡಿಸುವಾಗ ಸಂಕ್ಷಿಪ್ತತೆಯನ್ನು ಬೆಳೆಸಿಕೊಳ್ಳಬೇಕು. ಇದರ ಜತೆಗೆ ಕುತೂಹಲ ಬಹಳ ಮುಖ್ಯ. ಪ್ರಶ್ನಿಸುವುದನ್ನು ರೂಢಿಸಿಕೊಳ್ಳಬೇಕು. ಈ ಪ್ರಶ್ನೆಗಳು ನಿಜವಾದ ಅರಿವಿಗೆ ದಾರಿ ಮಾಡಿಕೊಡುತ್ತವೆ. ಶಿಸ್ತು ಹಾಗೂ ಸಂಶೋಧನೆಯೂ ವಕೀಲರಿಗೆ ಆತ್ಮವಿಶ್ವಾಸ ನೀಡುತ್ತದೆ. ಏಕೆಂದರೆ ನ್ಯಾಯಾಲಯದಲ್ಲಿ ವಾದ ಮಾಡುವ ಸಮಯದಲ್ಲಿ ಅದರ ಹಿಂದೆ ನೀವು ಮಾಡಿಕೊಂಡಿರುವ ಸಿದ್ಧತೆ ಮುಖ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಕಾನೂನು ವೃತ್ತಿಯು ವರ್ಷಗಳಿಂದಿಚೆಗೆ ಗಮನಾರ್ಹವಾಗಿ ರೂಪಾಂತರಗೊಂಡಿದೆ. ಒಂದು ಕಾಲದಲ್ಲಿ ಇತರ ಆಯ್ಕೆಗಳು ಇಲ್ಲದಿದ್ದಾಗ ಮಾತ್ರ ಕಾನೂನು ವೃತ್ತಿಯನ್ನು ಆಯ್ಕೆ ಮಾಡಲಾಗುತ್ತಿತ್ತು. ಅಂತಹ ಕಾಲ ಈಗ ಇಲ್ಲ. ಇಂದಿನ ದಿನಗಳಲ್ಲಿ ವ್ಯಾಪಕತೆ, ಅವಕಾಶಗಳು ಮತ್ತು ಮಹತ್ವದಿಂದಾಗಿ ಕಾನೂನು ಮೊದಲ ಆಯ್ಕೆಯಾಗಿ ಪರಿಗಣಿಸಲಾಗುತ್ತಿದೆ. ಈ ವೃತ್ತಿಯೂ ಪರಂಪರಗತ ನ್ಯಾಯಾಂಗ ವಾದ-ವಿವಾದಗಳಿಗೆ ಮಾತ್ರ ಸೀಮಿತವಾಗಿಲ್ಲ. ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯಿಂದ ಕಾನೂನು ವೃತ್ತಿಪರರಿಗೆ ಸಂಶೋಧನೆ, ಕರಡು ಬರವಣಿಗೆ, ಪ್ರಕರಣ ವಿಶ್ಲೇಷಣೆ ಮತ್ತು ತಂತ್ರ ರೂಪಿಸಲು ಹಲವಾರು ಉಪಕರಣಗಳು ಲಭ್ಯವಿವೆ ಎಂದರು.
ಹಿರಿಯ ವಕೀಲ ಟಿ.ಸೂರ್ಯನಾರಾಯಣ, ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್.ಸುರೇಶ್, ಚೆನ್ನೈನ ಸುರಾನ ಮತ್ತು ಸುರಾನ ಅಂತಾರಾಷ್ಟ್ರೀಯ ಅಟಾರ್ನಿಸ್ ಸಂಸ್ಥೆಯ ಪ್ರೀತಂ ಸುರಾನಾ, ಸಿಜಿಎಸ್‌ಟಿ ಉಪ ಆಯುಕ್ತೆ ಎನ್.ಮಂಜುಳಾ, ಪ್ರಾಂಶುಪಾಲೆ ಡಾ.ಎನ್. ವಾಣಿಶ್ರೀ ಇದ್ದರು.