ಮೈಸೂರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟವಾದ ಜಮೀನು ಮತ್ತೆ ಮಾರಾಟ : 1.50 ಕೋಟಿ ರೂ.ವಂಚನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಈಗಾಗಲೇ ಇತರರಿಗೆ ಮಾರಾಟವಾಗಿದ್ದ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಮತ್ತೊಮ್ಮೆ ಮಾರಾಟ ಮಾಡಿ 1.50 ಕೋಟಿ ವಂಚನೆ ಎಸಗಿದ ಆರೋಪದಡಿ ಇಲವಾಲ ಪೊಲೀಸ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಯಲಚಹಳ್ಳಿ ಗ್ರಾಮದ ಸರ್ವೆ ನಂ.157ರ ಜಮೀನಿಗೆ ಸಂಬಂಧಿಸಿದಂತೆ ನಾರಾಯಣಗೌಡ, ಅವರ ಪತ್ನಿ ಲಕ್ಷ್ಮೀ, ಮಧ್ಯವರ್ತಿ ಭಾನುಪ್ರಕಾಶ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರುದಾರ ರಾಮಕೃಷ್ಣನಗರದ ಶೇಖರ್ ನೀಡಿರುವ ದೂರಿನ ಪ್ರಕಾರ, ಭಾನುಪ್ರಕಾಶ್ ಮಧ್ಯವರ್ತಿಯಾಗಿ ಪರಿಚಯವಾಗಿದ್ದು, ಇಲವಾಲ ಹೋಬಳಿಯ ಯಲಚಹಳ್ಳಿ ಗ್ರಾಮದ ಸರ್ವೆ ನಂ.157ರಲ್ಲಿ 2 ಎಕರೆ 30 ಗುಂಟೆ ಜಮೀನು ಮಾರಾಟಕ್ಕಿದೆ ಎಂದು ತಿಳಿಸಿದ್ದ. ಬಳಿಕ ಶೇಖರ್ ಹಾಗೂ ಅವರ ಸ್ನೇಹಿತ ಬಸವರಾಜು ಜಮೀನನ್ನು ವಸತಿ ಬಡಾವಣೆ ನಿರ್ಮಿಸುವ ಉದ್ದೇಶದಿಂದ ಖರೀದಿಸಲು ಮುಂದಾಗಿದ್ದರು. ಈ ವೇಳೆ ಜಮೀನಿನ ಮಾಲೀಕ ನಾರಾಯಣಗೌಡ ಅವರು ಜಮೀನು ತಮ್ಮ ಹೆಸರಿನಲ್ಲಿದ್ದು, ಇದುವರೆಗೆ ಯಾರಿಗೂ ಮಾರಾಟ ಮಾಡಿಲ್ಲ ಎಂದು ಆರ್‌ಟಿಸಿ ಹಾಗೂ ಋಣಭಾರ ರಹಿತ್ಯ ದಾಖಲೆಗಳನ್ನು ತೋರಿಸಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
2023ರ ಅಕ್ಟೋಬರ್18ರಂದು ನೋಂದಾಯಿತ ಕ್ರಯಪತ್ರದ ಮೂಲಕ ಜಮೀನು ಖರೀದಿಸಲಾಗಿದ್ದು, ಚೆಕ್‌ಗಳ ಮೂಲಕ 99 ಲಕ್ಷ ಹಾಗೂ ಟಿಡಿಎಸ್ ರೂಪದಲ್ಲಿ 1 ಲಕ್ಷ ಸೇರಿ ಒಟ್ಟು 1 ಕೋಟಿ ಪಾವತಿಸಲಾಗಿದೆ. ಇದಲ್ಲದೆ, ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ ಸೇರಿದಂತೆ ಇತರೆ ವೆಚ್ಚಗಳನ್ನು ಭರಿಸಲಾಗಿದ್ದು, ಮಧ್ಯವರ್ತಿ ಭಾನುಪ್ರಕಾಶ್‌ಗೆ ಕಮಿಷನ್ ರೂಪದಲ್ಲಿ 38 ಲಕ್ಷ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೆಲವು ದಿನಗಳ ಬಳಿಕ ಜಮೀನಿಗೆ ಭೇಟಿ ನೀಡಿದಾಗ ರವಿಕಿರಣ್ ಎಂಬವರು ತಾವು ಈ ಜಮೀನನ್ನು 2019-20ರಲ್ಲಿಯೇ ಖರೀದಿಸಿರುವುದಾಗಿ ತಿಳಿಸಿದ್ದು, ಆಗ ಮೋಸ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಗುರುವಾರ ಶೇಖರ್ ಇಲವಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net