ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಮೈಸೂರು ಕೃಷ್ಣಮೂರ್ತಿ ಮಾತನಾಡಿದರು. ಡಾ.ಬಿ.ಆರ್.ಜಯಕುಮಾರಿ, ಡಾ.ಎಚ್.ಆರ್.ತಿಮ್ಮೇಗೌಡ, ಡಾ.ವಿನೋದಮ್ಮ ಇನ್ನಿತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಾಹಿತಿ ಪ್ರೊ.ಮೈಸೂರು ಕೃಷ್ಣಮೂರ್ತಿ ಬಣ್ಣನೆ ವಿಶೇಷ ಉಪನ್ಯಾಸ
ಮೈಸೂರು:
ಕುಮಾರವ್ಯಾಸ ಕನ್ನಡಿಗರು ಹೆಮ್ಮೆ ಪಡುವಂಥ ಕವಿಯಷ್ಟೇ ಮಾತ್ರವಲ್ಲ, ಅವರು ಇಡೀ ಜಗತ್ತಿಗೆ ಬೇಕಾದ ಕವಿ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ, ಸಾಹಿತಿ ಪ್ರೊ.ಮೈಸೂರು ಕೃಷ್ಣಮೂರ್ತಿ ಹೇಳಿದರು.
ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕುಮಾರವ್ಯಾಸ ಭಾರತದಲ್ಲಿ ಕರ್ಣಭೇದ ಪ್ರಸಂಗ’ ಕುರಿತು ಮಾತನಾಡಿದ ಅವರು, ಜಗತ್ತಿನ ಹಲವು ಭಾಷೆಗಳಿಗೆ ಕುಮಾರವ್ಯಾಸನ ಕರ್ಣಾಟ ಭಾರತ ಕಥಾ ಮಂಜರಿ ಭಾಷಾಂತರವಾಗಿದೆ.
ವಿಶ್ವ ಸಾಹಿತ್ಯದಲ್ಲಿ ಕುಮಾರವ್ಯಾಸ ಭಾರತ ಸೇರಿ ಹೋಗಿರುವುದು ಕನ್ನಡಿಗರ ಹಿರಿಮೆಯ ಸಂಕೇತ. ವಿಶ್ವಮಟ್ಟದಲ್ಲಿ ಕನ್ನಡಕ್ಕೆ ಕೀರ್ತಿ ತಂದುಕೊಟ್ಟ ಮಹಾಕವಿ ಕುಮಾರವ್ಯಾಸ ಎಂದು ನುಡಿದರು.
ಕುಮಾರವ್ಯಾಸ ಭಾರತದಲ್ಲಿ ಕ್ಲಿಷ್ಟ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಕರ್ಣನ ಪಾತ್ರದ ಮೂಲಕ ಕುಮಾರವ್ಯಾಸ ಅಭಿವ್ಯಕ್ತಿಸುತ್ತಾನೆ. ಕರ್ಣ ಅಧಿಕಾರವನ್ನು ತೃಣ ಸಮಾನವೆಂದು ಬಗೆಯುವುದು ಅವನ ಉದಾತ್ತತೆಗೆ ನಿದರ್ಶನ.
ಇದು ಆತ ರಾಜ್ಯದ ಆಸೆಗೆ ಸೋಲುವವನಲ್ಲ ಎಂಬುದು ಜಗತ್ತಿಗೆ ಸಂದೇಶವಾಗಿದೆ. ಅಧಿಕಾರದ ವ್ಯಾಮೋಹಕ್ಕೆ ಹಪಹಪಿಸುತ್ತಿರುವವರಿಗೆ ಇದುವೇ ಪಾಠವಾಗಬೇಕಿದೆ ಎಂದರು.
ಜತೆಗೆ ಸಂಬಂಧಗಳು ಕುಸಿಯುತ್ತಿರುವ ಸನ್ನಿವೇಶದಲ್ಲಿ ಕರ್ಣ- ದುರ್ಯೋಧನರ ನಡುವಿನ ಸ್ನೇಹ ಸಂಬಂಧ, ರಾಜನಿಷ್ಠೆ ಔಚಿತ್ಯವೆನಿಸಿದೆ. ರಕ್ತ ಸಂಬಂಧ ಹಾಗೂ ಸ್ನೇಹ ಸಂಬಂಧಗಳ ನಡುವೆ ಕರ್ಣ ಸ್ನೇಹ ಸಿಂಧೂರ ಆಯ್ಕೆ ಮಾಡಿಕೊಂಡದ್ದು ವಿಶಿಷ್ಟ ಎನಿಸಿದೆ ಎಂದು ನುಡಿದರು.
ವೈಜ್ಞಾನಿಕ ಯುಗದಲ್ಲಿ ಮನುಷ್ಯತ್ವ ಮರೆಯಾಗುತ್ತಿದೆ. ಮನುಷ್ಯತ್ವವುಳ್ಳ ಮನುಷ್ಯರನ್ನಾಗಿ ರೂಪಿಸುವುದಕ್ಕೆ ಕಾವ್ಯ ಓದುವುದು, ಕೇಳುವುದು ಔಚಿತ್ಯಪೂರ್ಣವಾಗಿದೆ. ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿ ಇದೆ ಎಂದರೆ, ಅವರು ಮನುಷ್ಯರಾಗುವ ನಿಜದ ಹಾದಿಯಲ್ಲಿ ಇದ್ದಾರೆ ಎಂದು ಅರ್ಥ.
ಯಾವುದೇ ವಿಷಯದ ವಿದ್ಯಾರ್ಥಿಗಳು ಕಾವ್ಯ ಹಾಗೂ ಸಾಹಿತ್ಯದ ಓದಿನಿಂದ ದೂರ ಉಳಿಯಬಾರದು. ಪ್ರಸ್ತುತ ಸಮಾಜದಲ್ಲಿ ಹಿಂಸೆ ಮತ್ತು ಕ್ರೌರ್ಯಗಳು ಹೆಚ್ಚುತ್ತಿರುವ ಸನ್ನಿವೇಶದಲ್ಲಿ ಕಾವ್ಯ ಹಾಗೂ ಸಾಹಿತ್ಯದ ಓದು ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಬೆಳೆಯುವುದಕ್ಕೆ ಸ್ಫೂರ್ತಿಯಾಗುತ್ತವೆ ಎಂದರು.
ಪ್ರಾಂಶುಪಾಲೆ ಡಾ. ಬಿ.ಆರ್.ಜಯಕುಮಾರಿ, ಡಾ.ಎಚ್.ಆರ್. ತಿಮ್ಮೇಗೌಡ, ಡಾ. ವಿನೋದಮ್ಮ, ಸಹಾಯಕ ಪ್ರಾಧ್ಯಾಪಕರಾದ ಎಂ.ನಾಗೇಶ್, ಸಿ.ಎಂ.ಕಿರಣ್‌ಕುಮಾರ್, ಜೆ.ಮನೋಜ್‌ಕುಮಾರ್ ಇನ್ನಿತರರಿದ್ದರು