ಹುಣಸೂರು : ಶ್ರೀ ಕೃಷ್ಣ ಭಾರತ ನೆಲದ ಸಂಸ್ಕೃತಿ ಮತ್ತು ಪರಂಪರೆಯ ಅಸ್ಮಿತೆ ಎಂದು ಸಾಹಿತಿ ಡಾ.ಮಾದುಪ್ರಸಾದ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಅಂಗವಾಗಿ ಆಯೋಜಿಸಿದ್ದ ಶ್ರೀ ಕೃಷ್ಣ ಮತ್ತು ಕುಚೇಲ ವೇಷಭೂಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೂಗಳಿಗೆ ಆರಾಧನೆಗೆ ನೂರೊಂದು ದೇವರುಗಳಿದ್ದಾರೆ. ಆದರೆ ಈ ನೆಲದ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರ ತಿಳಿಸುವ ದೇವರು ಶ್ರೀಕೃಷ್ಣ ಎಂಬುದು ಎಲ್ಲರ ನಂಬಿಕೆ. ಕುರುಕ್ಷೇತ್ರದಲ್ಲಿ ಗೀತೋಪದೇಶದೊಂದಿಗೆ ಬದುಕು, ಸಂಬಂಧಗಳು, ರಾಷ್ಟ್ರಪ್ರೇಮ, ಭಕ್ತಿ, ನಂಬಿಕೆ ಎಲ್ಲವನ್ನೂ ತಿಳಿಸಿದ್ದಾನೆ. ಬಡಕುಚೇಲನ ಆಪ್ತ ಗೆಳೆಯನಾಗಿ ಗೆಳೆತನಕ್ಕೆ ಜಾತಿ, ಮತ, ಪಂಥ, ಸಿರಿವಂತಿಕೆ ಬೇಧ ಭಾವವಿಲ್ಲ ಎಂದು ಪ್ರತಿಪಾದಿಸಿದ್ದಾನೆ. ದೇಶದ ಒಳಿತಿಗಾಗಿ, ತನ್ನ ಜನರ ಕಲ್ಯಾಣಕ್ಕಾಗಿ ರಾಜಕಾರಣ ಹೇಗಿರಬೇಕೆಂಬ ಸಂದೇಶವನ್ನೂ ನೀಡಿದ್ದಾನೆ. ಬಾಲಕೃಷ್ಣನ ಸಾಹಸಗಳನ್ನು ತಿಳಿಸುವ ಕಾರ್ಯ ಎಲ್ಲರಿಂದಾಗಬೇಕಿದೆ ಎಂದರು.
ಮುಖ್ಯಶಿಕ್ಷಕ ಎಚ್.ಎಸ್.ಸುರೇಶ್ ಮಾತನಾಡಿ, ಪಠ್ಯಪುಸ್ತಕದಲ್ಲಿ ಕೃಷ್ಣ ಮತ್ತು ಕುಚೇಲ ಪಠ್ಯದ ಭಾಗವಾಗಿ ಈ ಸೌಹಾರ್ದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪಾಲಕರ ಸಂಪೂರ್ಣ ಸಹಕಾರದೊಂದಿಗೆ ಮುದ್ದುಮಕ್ಕಳು ಬಾಲಕೃಷ್ಣರಾಗಿ ಕಂಗೊಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಇನ್ನೂರಕ್ಕೂ ಹೆಚ್ಚು ಮಕ್ಕಳು ಕೃಷ್ಣ, ರಾಧೆ, ಯಶೋದೆ, ಕುಚೇಲ ಮುಂತಾದ ವೇಷಭೂಷಣದೊಂದಿಗೆ ಕಂಗೊಳಿಸಿದರು.
ಎಸ್‌ಡಿಎಂಸಿ ಉಪಾಧ್ಯಕ್ಷ ರಫೀಕ್, ಸದಸ್ಯ ಚಲುವರಾಜ್, ಶಿಕ್ಷಕರಾದ ವೀಣಾ, ಜಯರಾಮೇಗೌಡ, ಆರೋಕ್ಯಮೇರಿ, ಸುಧಾ, ಡಾ.ಚಲುವರಾಜ್, ಕೃಷ್ಣಮೂರ್ತಿ, ವಸಂತಕುಮಾರಿ, ಸೋಮಸುಂದರ್, ಕವಿತಾ, ಶಿಲ್ಪಾ, ರಾಧಿಕಾ, ಖಾಜೀಮ ಇತರರು ಇದ್ದರು.