ಕೆ.ಬಿ.ರವಿ ವ್ಯಕ್ತಿತ್ವ ಸಮಾಜಕ್ಕೆ ಮಾದರಿ

ಬೆಟ್ಟದಪುರ ಸಮೀಪದ ಕೂಣಸೂರು ಗ್ರಾಮದಲ್ಲಿ ಆಯೋಜಸಿದ ದಿ.ಕೆ.ಬಿ ರವಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿದರು. ಶಂಕರ ಬಿದರಿ, ಬೋರಲಿಂಗಯ್ಯ ವಿವಿಧ ಮಠದ ಮಠಾಧೀಶರು ಇತರರಿದ್ದರು.
ಬೆಟ್ಟದಪುರ ಸಮೀಪದ ಕೂಣಸೂರು ಗ್ರಾಮದಲ್ಲಿ ಆಯೋಜಸಿದ ದಿ.ಕೆ.ಬಿ ರವಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿದರು. ಶಂಕರ ಬಿದರಿ, ಬೋರಲಿಂಗಯ್ಯ ವಿವಿಧ ಮಠದ ಮಠಾಧೀಶರು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಬಣ್ಣನೆ
  • ನುಡಿ ನಮನ ಕಾರ್ಯಕ್ರಮ
ಬೆಟ್ಟದಪುರ: ಕರ್ತವ್ಯ ನಿಮಿತ್ತ ತೆರಳುತ್ತಿದ್ದ ವೇಳೆ ಮಧ್ಯಪ್ರದೇಶದಲ್ಲಿ ಆ.28ರಂದು ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಮೃತಪಟ್ಟ ಬೆಂಗಳೂರು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಕೆ.ಬಿ.ರವಿ ಅವರ ನುಡಿ ನಮನ ಕಾರ್ಯಕ್ರಮ ಪಿರಿಯಾಪಟ್ಟಣ ತಾಲೂಕಿನ ಕೂಣಸೂರು ಗ್ರಾಮದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.
ಕೆ.ಬಿ.ರವಿ ಭಾವಚಿತ್ರಕ್ಕೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಶಂಕರ ಬಿದರಿ, ವಿವಿಧ ಮಠಗಳ ಸ್ವಾಮೀಜಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಕುಟುಂಬದ ಸದಸ್ಯರು ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಅರ್ಪಿಸಿದರು.
ಬಳಿಕ ಮಾತನಾಡಿದ ಸುತ್ತೂರು ಶ್ರೀಗಳು, ಮನುಷ್ಯರಾಗಿ ಹುಟ್ಟಿದ ಎಲ್ಲರಿಗೂ ಹುಟ್ಟು ಮತ್ತು ಸಾವು ಪ್ರಕೃತಿಯ ನಿಯಮ. ಆದರೆ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮಾಜಮುಖಿ ಸೇವೆಯೇ ಮನುಷ್ಯನ ಬದುಕನ್ನು ಅರ್ಥಪೂರ್ಣಗೊಳಿಸುತ್ತದೆ. ಕುಟುಂಬದ ಅಭಿವೃದ್ಧಿ ಜತೆಗೆ ಸಮಾಜದ ಒಳಿತಿಗಾಗಿ ದುಡಿಯುವವರ ಹೆಸರು ಸದಾ ಜನಮನದಲ್ಲಿ ಉಳಿಯುತ್ತದೆ. ರವಿ ಅಂತಹ ವ್ಯಕ್ತಿತ್ವ ಹೊಂದಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸುತ್ತಿರುವುದೇ ಅವರ ಸೇವೆಗೆ ದೊರೆತ ಗೌರವವಾಗಿದೆ ಎಂದು ಹೇಳಿದರು.
ದಕ್ಷಿಣ ವಲಯದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಬೋರಲಿಂಗಯ್ಯ ಮಾತನಾಡಿ, ಪೊಲೀಸ್ ಇಲಾಖೆ ಒಂದು ಕುಟುಂಬದಂತೆ ಕಾರ್ಯನಿರ್ವಹಿಸುತ್ತದೆ. ಸಿಬ್ಬಂದಿ ಹಾಗೂ ಅವರ ಕುಟುಂಬದವರು ಯಾವುದೇ ಸಂಕಷ್ಟಕ್ಕೆ ಸಿಲುಕಿದಾಗ ಇಲಾಖೆ ಅವರ ಬೆನ್ನಿಗೆ ನಿಲ್ಲುತ್ತದೆ. ರವಿ ಅವರ ಕುಟುಂಬಕ್ಕೂ ಮುಂದಿನ ದಿನಗಳಲ್ಲಿ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ, ನಿವೃತ್ತ ಐಜಿಪಿ ಶಂಕರ ಮಹಾದೇವ ಬಿದರಿ ಮಾತನಾಡಿ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ದಿ.ರವಿ ಅವರು ಸಮಾಜದಲ್ಲಿ ವಿಶೇಷ ಸ್ಥಾನ ಗಳಿಸಿದ್ದರು. ಅವರ ಅಗಲಿಕೆ ಸಮಾಜಕ್ಕೂ ತುಂಬಲಾರದ ನಷ್ಟ ಎಂದರು.
ವಿವಿಧ ಮಠದ ಮಠಾಧೀಶರು, ಪೊಲೀಸ್ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸ್ನೇಹಿತರು, ಗ್ರಾಮಸ್ಥರು ಭಾಗವಹಿಸಿ ದಿವಂಗತ ರವಿ ಕೆ.ಬಿ.ಅವರ ಸೇವೆ ಮತ್ತು ವ್ಯಕ್ತಿತ್ವವನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net