ಭಾಷೆ ಬೆಳವಣಿಗೆಗೆ ರಾಜಕಾರಣ ಬೆಸೆಯಬಾರದು

 ಹುಣಸೂರು ನಗರದ ರೋಟರಿ ಭವನದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಎಚ್.ಕೆ.ಮಹದೇವ, ಡಾ.ವಸಂತಕುಮಾರ್, ಅಧ್ಯಾಪಕ ಲಕ್ಷ್ಮೀಕಾಂತ್, ಲೋಕೇಶ್, ಸೋಮಣ್ಣ ಇತರರಿದ್ದರು.
ಹುಣಸೂರು ನಗರದ ರೋಟರಿ ಭವನದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಎಚ್.ಕೆ.ಮಹದೇವ, ಡಾ.ವಸಂತಕುಮಾರ್, ಅಧ್ಯಾಪಕ ಲಕ್ಷ್ಮೀಕಾಂತ್, ಲೋಕೇಶ್, ಸೋಮಣ್ಣ ಇತರರಿದ್ದರು.
Published on
ಹುಣಸೂರು: ಜಗತ್ತಿನ ಎಲ್ಲ ಜ್ಞಾನಗಳೂ ಕನ್ನಡ ಭಾಷೆಯ ಮೂಲಕ ಕನ್ನಡಿಗನನ್ನು ತಲುಪಿದಲ್ಲಿ ಕನ್ನಡ ಭಾಷೆ, ನೆಲ ಉಳಿಯಲು ಸಾಧ್ಯ ಎಂದು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ವಸಂತಕುಮಾರ್ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ರೋಟರಿ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ರೋಟರಿ ಭವನದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡತನ ಎನ್ನುವುದು ಕನ್ನಡ ನಾಡಿನ ಸಂಸ್ಕೃತಿಯ ಪ್ರತೀಕ. ಈ ಹಿಂದೆ ಸಾವಯವ ಕೃಷಿ ಮಾಡುತ್ತಿದ್ದ ನಾವು ರಾಸಾಯನಿಕ ಕೃಷಿಗೆ ಬದಲಾದೆವು. ಇದೀಗ ಮತ್ತೆ ಸಾವಯವ ಕೃಷಿ ಮಂತ್ರ ಜಪಿಸುತ್ತಿದ್ದೇವೆ. ಪಂಚೆ ಶಲ್ಯ ನಮ್ಮ ಸಂಸ್ಕೃತಿಯಾಗಿತ್ತು. ಪ್ಯಾಂಟಿಗೆ ಮರುಳಾಗಿ ಇದೀಗ ಮತ್ತೆ ಪಂಚೆ ಶಲ್ಯದ ಕನಸು ಕಾಣುತ್ತಿದ್ದೇವೆ. ಶಾಲೆಯ ಸಂಸ್ಕೃತಿಯನ್ನು ಅಳಿಸಿ ಕಾನ್ವೆಂಟ್ ಸ್ಥಾಪಿಸಿಕೊಂಡು ಅವ್ಯವಸ್ಥೆ ಪಡುತ್ತಿದ್ದೇವೆ. ಕನ್ನಡ ಎನ್ನುವುದು ಕೇವಲ ಭೂಮಿ, ಭಾಷೆ ಮಾತ್ರವಲ್ಲ. ಅದೊಂದು ಸಂಸ್ಕೃತಿ, ಪರಂಪರೆಯಾಗಿದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.
ಒಡೆದುಹೋದ ಮನಸುಗಳನ್ನು ಒಂದುಗೂಡಿಸುವುದೇ ಮಾತೃಭಾಷೆ. ಮಾತ್ರಭಾಷೆ ಕಲಿಯದವನು ಮನುಷ್ಯತ್ವ ಕಳೆದುಕೊಳ್ಳುತ್ತಾನೆ. ನಮಗೆ ಜಗತ್ತಿನ ಜ್ಞಾನ ಬೇಕು. ಆ ಜ್ಞಾನ ಕನ್ನಡ ಭಾಷೆಯ ಮೂಲಕ ಬರಲಿ. ಮೆಡಿಕಲ್ ಮುಂತಾದ ವೃತ್ತಿಪರ ಕೋರ್ಸ್ ಕನ್ನಡ ಭಾಷೆಯೊಂದಿಗೆ ಬೆಸೆಯಲಿ. ನ್ಯಾಯಾಧೀಶರು ಕನ್ನಡದಲ್ಲಿ ತೀರ್ಪುನೀಡಲು ಆರಂಭಿಸಿದ್ದಾರೆ. ಹಾಗಾಗಿ ಜ್ಞಾನ ನಮ್ಮನ್ನು ಸೇರಲು ಕನ್ನಡ ಭಾಷೆ ಬಳಕೆಯಾಗಲಿ. ಆಗ ಕನ್ನಡವೂ ಕನ್ನಡಿಗರೂ ಮತ್ತು ಕರ್ನಾಟಕವೂ ಅಭಿವೃದ್ಧಿ ಹೊಂದಲು ಸಾಧ್ಯ. ನಾಡು, ನುಡಿ, ಭಾಷೆ, ಇತಿಹಾಸ ಮತ್ತು ಸಂಸ್ಕೃತಿ ಉಳಿಸುವ ಕಾರ್ಯ ಕಸಾಪದಿಂದ ಆಗುತ್ತಿದೆ. ಭಾಷೆಯ ಬೆಳವಣಿಗೆಗೆ ರಾಜಕಾರಣ ಬೆಸೆಯಬಾರದು. ಹಾಗಾದಲ್ಲಿ ದುರಂತಕ್ಕೆ ಕಾರಣವಾದೀತು. ಪ್ರತಿಯೊಬ್ಬ ಕನ್ನಡಿಗನೂ ಈ ಕುರಿತು ಗಂಭೀರ ಚಿಂತನೆ ನಡಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಕಸಾಪ ಅಧ್ಯಕ್ಷ ಎಚ್.ಕೆ.ಮಹದೇವ್ ಪ್ರಾಸ್ತಾವಿಕ ನುಡಿಗಳನ್ನಾಡಿ, 4 ವರ್ಷಗಳಲ್ಲಿ ತಾಲೂಕಿನಲ್ಲಿ ಕನ್ನಡ ಕಟ್ಟುವ ಕಾರ್ಯದಲ್ಲಿ ಕಸಾಪ ಯಶಸ್ವಿಯಾಗಿದೆ. 650ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 150ಕ್ಕೂ ಹೆಚ್ಚು ಜನರಿಗೆ ಗೌರವ ಸಮರ್ಪಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಕನ್ನಡ ಭಾಷೆ ಅಭಿವೃದ್ಧಿಗಾಗಿ ಕನ್ನಡ ಸಂಘಗಳನ್ನು ತೆರೆದು ಯುವ ವಿದ್ಯಾರ್ಥಿಗಳನ್ನು ಒಳಗೊಳ್ಳುವಂತೆ ಮಾಡಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಳನಾಯಕ ಮಾತನಾಡಿ, ಕನ್ನಡ ಶಾಲೆಗಳನ್ನು ಉಳಿಸುವತ್ತ ನಾವೆಲ್ಲರೂ ಶ್ರಮವಹಿಸಬೇಕಿದೆ ಎಂದರು. ಎಸಿಡಿಪಿಒ ಸೋಮಣ್ಣ ಮಾತನಾಡಿ, ಕನ್ನಡ ಭಾಷೆ ಬಳಕೆಯ ಕುರಿತು ಮುತುವರ್ಜಿ ಮತ್ತು ತಪ್ಪುಬಳಕೆಯನ್ನು ನಿಯಂತ್ರಿಸುವ ಕಾರ್ಯ ಆಗಬೇಕಿದೆ ಎಂದರು.
ಪೌರಾಯುಕ್ತೆ ಎಂ.ಮಾನಸಾ, ಎಲ್‌ಐಸಿ ನಿವೃತ್ತ ಅಭಿವೃದ್ಧಿ ಅಧಿಕಾರಿ ಕೆ.ಎಚ್.ವೀರಭದ್ರಪ್ಪ, ರೋಟರಿ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್, ತಾಲೂಕು ಪಂಚಾಯಿತಿ ಇಒ ಕೆ.ಹೊಂಗಯ್ಯ, ಕಸಾಪ ಜಿಲ್ಲಾ ಉಪಾಧ್ಯಕ್ಷ ಎಸ್.ಜಯರಾಂ, ಕಸಾಪ ಕಾರ್ಯದರ್ಶಿ ಟಿ.ಲೋಕೇಶ್, ಉಪಾಧ್ಯಕ್ಷ ಸಿ.ಎಸ್.ಮಹೇಶ್, ಕೆ.ನಂಜುಂಡಸ್ವಾಮಿ ಇತರರು ಇದ್ದರು.
ಸನ್ಮಾನಿತರು
ದಲಿತ ಮುಖಂಡ ಹರಿಹರ ಅನಂದಸ್ವಾಮಿ, ಪತ್ರಕರ್ತರಾದ ಶಿವಕುಮಾರ್.ವಿ.ರಾವ್, ಧರ್ಮಾಪುರ ನಾರಾಯಣ್, ದಾ.ರಾ.ಮಹೇಶ್, ಶಂಕರ್, ಕರವೇ ಜಿಲ್ಲಾಧ್ಯಕ್ಷ ಪುರುಷೋತ್ತಮ್, ನ್ಯಾಯಾಧೀಶ ಕೆ.ಸಿ.ಸುಹಾಸ್, ಕೆ.ನಂಜುಂಡಸ್ವಾಮಿ, ಮಹದೇವಮ್ಮ, ವಿದ್ಯಾರ್ಥಿಗಳಾದ ಕ್ಷಣ, ಹರ್ಮೈನ್, ಪವನ್ ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net