ಅರಣ್ಯ ಇಲಾಖೆಗೆ ಕಗ್ಗಂಟಾದ ಗಜಪಡೆ ಆಯ್ಕೆ

 ಭೀಮ
ಭೀಮ
Published on

ಪ್ರಮುಖ ಮುಖ್ಯಾಂಶಗಳು

  • ಭೀಮ, ಹರ್ಷ, ಶ್ರೀಕಂಠನಿಗೆ ಮದ
  • ದಸರಾ ಸಮೀಪಿಸುತ್ತಿರುವುದು ತಲೆನೋವು
ಅವಿನಾಶ್ ಜೈನಹಳ್ಳಿ ಮೈಸೂರು
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೀಯ ಕೇಂದ್ರ ಬಿಂದು ಗಜಪಡೆಯ ಆಯ್ಕೆ ಪ್ರಕ್ರಿಯೆ ಅರಣ್ಯ ಇಲಾಖೆಗೆ ತಲೆನೋವು ತಂದಿಟ್ಟಿದ್ದು, ಪ್ರಮುಖ ಗಂಡಾನೆಗಳಿಗೆ ‘ಮದ ಏರಿದ್ದು’, ಇದೀಗ ಹೊಸ ಆನೆಗಳ ಹುಡುಕಾಟದಲ್ಲಿ ಅರಣ್ಯ ಇಲಾಖೆ ಮುಂದಾಗಿದೆ.
ಪ್ರಸಕ್ತ ಸಾಲಿನ ದಸರಾ ಮಹೋತ್ಸವ (ನವರಾತ್ರಿ) ಅ.11ರಂದು ಆರಂಭವಾಗಿ ಅ.21ರಂದು ಜಂಬೂ ಸವಾರಿ ನೆರವೇರಲಿದೆ. ಜಂಬೂ ಸವಾರಿಗೂ 55ರಿಂದ 60 ದಿನ ಮುನ್ನವೇ ದಸರಾ ಗಜಪಡೆಯನ್ನು ಮೈಸೂರಿಗೆ ಕರೆತರುವ ಸಂಪ್ರದಾಯವಿದ್ದು, ಈ ಹಿನ್ನೆಲೆಯಲ್ಲಿ ಈ ಸಾಲಿನ ದಸರಾ ಗಜಪಡೆಯ ಮೊದಲ ತಂಡವನ್ನು ಆ.26ರಂದು ಕರೆತರಲು ಮುಹೂರ್ತ ನಿಗದಿ ಮಾಡಲಾಗಿದೆ.
ಇದಕ್ಕಾಗಿ ಗಜಪಡೆ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿರುವ ಅರಣ್ಯ ಇಲಾಖೆ ಈಗಾಗಲೇ ಮತ್ತಿಗೋಡು, ದೊಡ್ಡ ಹರವೆ, ಭೀಮನಕಟ್ಟೆ, ದುಬಾರೆ ಕ್ಯಾಂಪಿಗೆ ತೆರಳಿ ಆನೆಗಳ ಇಸಿಜಿ ತಪಾಸಣೆ ನಡೆಸಿದೆ. ಹೆಣ್ಣಾನೆಗಳಿಗೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಲಾಗಿದ್ದು, ಇನ್ನೂ ಪರೀಕ್ಷಾ ವರದಿ ಅರಣ್ಯ ಇಲಾಖೆ ಕೈಸೇರಿಲ್ಲ. ಇದರ ನಡುವೆ ಆನೆಗಳ ಆರೋಗ್ಯ ತಪಾಸಣೆ ಮಾಡಿ, ಆರೋಗ್ಯವಂತ ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಲು ಉದ್ದೇಶಿಸಿದ್ದ ಅರಣ್ಯ ಇಲಾಖೆಗೆ ಇದೀಗ ಗಂಡಾನೆಗಳಲ್ಲಿ ಮದ ಕಾಣಿಸಿಕೊಂಡಿರುವುದು ಹೊಸ ಸವಾಲೊಂದನ್ನು ಸೃಷ್ಟಿಸಿದೆ.
ಕಳೆದ ಎರಡು-ಮೂರು ವರ್ಷದಿಂದ ದಸರಾ ಗಜಪಡೆಯಲ್ಲಿ ಹಿರಿಯ ಸದಸ್ಯನಾಗಿ ಪಾಲ್ಗೊಂಡು ಲಕ್ಷಾಂತರ ಅಭಿಮಾನಿ ಪಡೆಯನ್ನು ಸೃಷ್ಟಿಸಿದ್ದ ಭೀಮಾ ಆನೆ, ಕಳೆದ ಬಾರಿಯಷ್ಟೇ ಮೊದಲ ಬಾರಿ ದಸರಾ ಗಜಪಡೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡು ಪಟ್ಟದ ಆನೆಯಾಗಿ ಕರ್ತವ್ಯ ನಿಭಾಯಿಸಿದ್ದ ಶ್ರೀಕಂಠ ಹಾಗೂ ಗಜಪಡೆಯ ಹಿರಿಯ ಆನೆಗಳಲ್ಲಿ ಒಂದಾಗಿರುವ ಹರ್ಷ ಆನೆಗೂ ಮದ ಬಂದಿದೆ. ಇದರಿಂದ ಈ ಮೂರೂ ಆನೆಗಳ ಆಯ್ಕೆ ಪ್ರಕ್ರಿಯೆ ಅರಣ್ಯ ಇಲಾಖೆಗೆ ಕಗ್ಗಂಟಾಗಿದೆ.

ಭೀಮನಿಗೆ ಎರಡನೇ ಬಾರಿ ಮದ:

ಗಜಪಡೆಯ ಸ್ಟಾರ್ ಆನೆ ಭೀಮನಿಗೆ ಎರಡನೇ ಬಾರಿ ಮದ ಕಾಣಿಸಿಕೊಂಡಿದೆ. ಇದರಿಂದ ಭೀಮನಿಗೆ ಕೋಪ ಹೆಚ್ಚಾಗಿದೆ. ಮೇಲ್ನೋಟಕ್ಕೆ ಮದ ಕ್ಷೀಣಿಸುತ್ತಿರುವುದಾಗಿ ಕಂಡು ಬರುತ್ತಿದ್ದರೂ, ಅದರ ವರ್ತನೆ ಅರಣ್ಯ ಅಧಿಕಾರಿಗಳಿಗೆ ಚಿಂತೆಗೀಡು ಮಾಡಿದೆ. ಸೌಮ್ಯ ಸ್ವಭಾವಿಯೂ ಆಗಿದ್ದ ಭೀಮಾ, ಮದದ ಕಾರಣದಿಂದ ಸಹಜವಾಗಿ ಅದರ ವರ್ತನೆಯಲ್ಲಿ ಬದಲಾವಣೆ ಆಗಿದೆ. ಅ ಕಾರಣದಿಂದ ಅದಕ್ಕೆ ಇಸಿಜಿ ಪರೀಕ್ಷೆ ಮಾಡುವುದಕ್ಕೂ ಅಧಿಕಾರಿಗಳು ಮುಂದಾಗಿಲ್ಲ. ದಸರಾ ಮಹೋತ್ಸವ ಆರಂಭಕ್ಕೆ ಇನ್ನೂ ಎರಡೂವರೆ ತಿಂಗಳು ಇದ್ದರೂ ಮದದ ಪ್ರಮಾಣ ಯಾವಾಗ ಕಡಿಮೆಯಾಗುತ್ತದೆ ಎಂದು ನಿಖರವಾಗಿ ಅಂದಾಜಿಸಲು ಸಾಧ್ಯವಾಗಿಲ್ಲ. ಮದ ಕಡಿಮೆಯಾದ ನಂತರ ಗಜಪಡೆಯಲ್ಲಿ ಕರೆತಂದರೂ, ಜನ ಅದರಿಂದ ದೂರ ಇರಬೇಕಾಗುತ್ತದೆ. ಈಗಾಗಲೇ ಭೀಮಾ ಆನೆ ಹೆಚ್ಚು ಪ್ರಖ್ಯಾತಿಯಾಗಿದ್ದು, ವರ್ಷದಿಂದ ವರ್ಷಕ್ಕೆ ಜನಾಕರ್ಷಣೀಯ ಕೇಂದ್ರ ಬಿಂದುವಾಗುತ್ತಿದೆ. ಈ ಕಾರಣದಿಂದ ಅರಣ್ಯ ಇಲಾಖೆ ಸೂಕ್ಷ್ಮ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.

ದಶಕದ ನಂತರ ಶ್ರೀಕಂಠನಿಗೆ ಮದ:

ದಸರಾ ಗಜಪಡೆಯಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದಿದ್ದಲ್ಲದೆ, ಪಟ್ಟದ ಆನೆಯಾಗಿ ಅರಮನೆಯಲ್ಲಿ ರಾಜವಂಶಸ್ಥರು ನಡೆಸಿದ ಧಾರ್ಮಿಕ ಕೈಂಕರ್ಯಗಳಲ್ಲಿ ತೊಡಗಿದ್ದ ಶ್ರೀಕಂಠ ಆನೆಗೆ 10 ವರ್ಷದ ನಂತರ ಮದ ಬಂದಿದೆ. ಮತ್ತಿಗೋಡು ಕ್ಯಾಂಪ್‌ನಲ್ಲಿರುವ ಶ್ರೀಕಂಠನಿಗೆ ಮದದ ಅಂಶ ಕಡಿಮೆ ಮಾಡಲು ನೈಸರ್ಗಿಕ ಆಹಾರವನ್ನೇ ನೀಡಲಾಗುತ್ತಿದೆ.

ಹರ್ಷನಿಗೆ ಮದ:

ದುಬಾರೆ ಕ್ಯಾಂಪ್‌ನಲ್ಲಿರುವ ದಸರಾ ಗಜಪಡೆಯ ಹಿರಿಯ ಆನೆ ಹರ್ಷ ಆನೆಗೂ ಮದ ಕಾಣಿಸಿಕೊಂಡಿದೆ. ಆದರೆ ಅದರ ವರ್ತನೆಯಲ್ಲಿ ಮೇಲ್ನೋಟಕ್ಕೆ ಯಾವುದೇ ಗಂಭೀರವಾದ ಬದಲಾವಣೆ ಕಂಡು ಬಂದಿಲ್ಲವಾದರೂ, ಅದರ ಮೇಲೆ ನಿಗಾ ಇಡಲಾಗಿದೆ. ಹರ್ಷನಿಗೂ ಮದದ ನಿಯಂತ್ರಣಕ್ಕೆ ಬಾಳೆದಿಂಡು ಸೇರಿದಂತೆ ದೇಹವನ್ನು ತಂಪಾಗಿಸುವ ಆಹಾರ ನೀಡಲಾಗುತ್ತಿದೆ.
ಸಾಮಾನ್ಯವಾಗಿ ಆನೆಗಳಿಗೆ ಮದ ಬಂದರೆ 3 ತಿಂಗಳು ಇರುತ್ತದೆ. ಮದ ಇಳಿಕೆಯಾದರೂ ಅದರ ವರ್ತನೆ ಸೂಕ್ಷ್ಮವಾಗಿರುತ್ತದೆ. ಮದ ಇಳಿದ ಒಂದು ತಿಂಗಳ ನಂತರವೂ ಮದದ ಪರಿಣಾಮ ಆನೆಗಳ ಮೇಲೆ ಉಂಟಾಗಿರುತ್ತದೆ. ಗಜ ಪಯಣಕ್ಕೆ ಇನ್ನು ಒಂದು ತಿಂಗಳು ಅವಧಿ ಇದೆ. ಜಂಬೂ ಸವಾರಿಗೆ ಇನ್ನೂ 3 ತಿಂಗಳು ಸಮಯವಿದೆ. ಈ ಅವಧಿಯೊಳಗೆ ಮದವೇರಿದ ಆನೆಗಳ ಆರೋಗ್ಯ ಉತ್ತಮವಾಗಿ ಮಾರ್ಪಾಡಾಗಿ ಅವುಗಳು ಶಾಂತ ಸ್ವಭಾವಕ್ಕೆ ಮರಳಿದರೆ ಹಾಗೂ ಮದ ಇಳಿದರೆ ಅವುಗಳನ್ನು ಕರೆತರಲೂಬಹುದು. ಆದರೆ ಆ ಆನೆಗಳ ಬಳಿ ಮಾವುತ, ಕಾವಾಡಿ ಹಾಗೂ ಸಂಬಂಧಪಟ್ಟವರು ಹೊರತುಪಡಿಸಿ ಬೇರೆ ಯಾರೂ ಹೋಗದಂತೆ ಕಟ್ಟೆಚ್ಚರ ವಹಿಸಬೇಕಾಗಿದೆ. ಅಲ್ಲದೆ ಅರಣ್ಯ ಪ್ರದೇಶದ ಸಹಜ ವಾತಾವರಣದೊಂದಿಗೆ ಕ್ಯಾಂಪ್‌ನಲ್ಲಿ ವಾಸಿಸುತ್ತಿರುವ ಆನೆಗಳು ನಗರ ಪ್ರದೇಶಕ್ಕೆ ಬಂದು ಮದದ ನಡುವೆಯೂ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲಿದೆಯೇ ಎಂದು ಪರಿಶೀಲಿಸಬೇಕಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net