ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಬದಲು ಸರ್ಕಾರಿ ಶಾಲೆ ಸೇರಿಸಿ

  ಮೈಸೂರು ತಾಲೂಕಿನ ರಟ್ನಹಳ್ಳಿ ಗ್ರಾಮದಲ್ಲಿ  ಶಾಲಾ ಪ್ರಾರಂಭೋತ್ಸವ, ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮವನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು. ಡಿ.ಉದಯ್ ಕುಮಾರ್,  ಚಿಕ್ಕಣ್ಣ,  ಪ್ರಕಾಶ್, ಶಿವಣ್ಣ, ಯದುವರ ಇನ್ನಿತರರಿದ್ದರು
ಮೈಸೂರು ತಾಲೂಕಿನ ರಟ್ನಹಳ್ಳಿ ಗ್ರಾಮದಲ್ಲಿ ಶಾಲಾ ಪ್ರಾರಂಭೋತ್ಸವ, ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮವನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು. ಡಿ.ಉದಯ್ ಕುಮಾರ್, ಚಿಕ್ಕಣ್ಣ, ಪ್ರಕಾಶ್, ಶಿವಣ್ಣ, ಯದುವರ ಇನ್ನಿತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯ
  • ಸರ್ಕಾರಿ ಶಾಲೆಗಳಲ್ಲಿ ಓದಿದವರಿಂದಲೂ ಸಾಧನೆ
  • ರಟ್ನಹಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ
ಮೈಸೂರು: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರೇ ದೊಡ್ಡ ಮಟ್ಟದ ನಾಯಕರಾಗಿ, ಗಣ್ಯ ವ್ಯಕ್ತಿಗಳಾಗಿದ್ದಾರೆ. ಪಾಲಕರು ಲಕ್ಷಾಂತರ ರೂ. ಶುಲ್ಕ ಕೊಟ್ಟು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಬದಲಿಗೆ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು. 
ಮೈಸೂರು ತಾಲೂಕಿನ ರಟ್ನಹಳ್ಳಿ ಗ್ರಾಮದಲ್ಲಿ ತಾಲೂಕುಮಟ್ಟದ ಶಾಲಾ ಪ್ರಾರಂಭೋತ್ಸವ, ಶಾಲಾ ದಾಖಲಾತಿ ಆಂದೋಲನ,ನೂತನ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುತ್ತಿದ್ದರು. ಈಗ ಕಾಲ ಬದಲಾಗಿದೆ. ಈ ಶಾಲೆಗಳಿಗೆ ಸೌಕರ್ಯ ಒದಗಿಸಿ ಅಭಿವೃದ್ಧಿಗೆ ಆದ್ಯತೆ ನೀಡಿರುವುದರಿಂದ ಹೆಚ್ಚಿನ ಮಕ್ಕಳನ್ನು ಸೇರಿಸಲಾಗುತ್ತಿದೆ ಎಂದರು. 
ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ನರೇಂದ್ರ ಮೋದಿ, ಸಿದ್ದರಾಮಯ್ಯ ಸೇರಿದಂತೆ ಅನೇಕರು ಸರ್ಕಾರಿ ಶಾಲೆಯಲ್ಲೇ ಓದಿದವರು. ಸಾಲ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಬದಲಿಗೆ ಸರ್ಕಾರಿ ಶಾಲೆಗೆ ಸೇರಿಸಲು ಪಾಲಕರು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲಾ-ಕಾಲೇಜುಗಳ ಜಾಗ ಒತ್ತುವರಿಯಾಗದಂತೆ ರಕ್ಷಣೆ ಮಾಡಲಾಗುತ್ತಿದೆ. ಒತ್ತುವರಿ ತೆರವುಗೊಳಿಸಿ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡುವ ಜತೆಗೆ ಹಕ್ಕುಪತ್ರ ಕೊಡಿಸುವ ಕೆಲಸ ನಡೆಸಲಾಗುತ್ತಿದೆ ಎಂದರು.
ಶಾಲೆಗಳಲ್ಲಿ ಕಾಂಪೌಂಡ್ ಹಾಕಿಸಿ ಬಾಲಕರು, ಬಾಲಕಿಯರು, ಅಂಗವಿಕಲರಿಗೆ ಪ್ರತ್ಯೇಕ ಶೌಚಗೃಹ ನಿರ್ಮಾಣ ಮಾಡಿಸಲಾಗಿದೆ. ಮಕ್ಕಳ ವಿದ್ಯಾಭ್ಯಾಸ, ಅಭಿವೃದ್ಧಿಗೆ ಪೂರಕವಾಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪೀಠೋಪಕರಣ, ಕೊಠಡಿಗಳು, ಶುದ್ಧ ಕುಡಿಯುವ ನೀರು ಒದಗಿಸಬೇಕು. ಪ್ರತಿಷ್ಠಿತ ಕಂಪನಿಗಳು, ಕಾರ್ಖಾನೆಗಳ ಮುಖ್ಯಸ್ಥರೊಂದಿಗೆ ಸಮಾಲೋಚಿಸಿ ಸಿಎಸ್‌ಆರ್ ಅನುದಾನದಿಂದ ಮೂಲ ಸೌಕರ್ಯ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಸಾಯಿ ಗಾಮೆರ್ಂಟ್ಸ್‌ನ ದೇವರಾಜ ಅರಸ್ ಅವರು ರಟ್ನಹಳ್ಳಿ ಶಾಲೆಗೆ 50 ಲಕ್ಷ ರೂ. ವೆಚ್ಚದಲ್ಲಿ ನೂತನ ಕೊಠಡಿಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿಸಿಕೊಟ್ಟಿದ್ದಾರೆ ಎಂದರು.
ಡಿಡಿಪಿಐ ಡಿ.ಉದಯ್ ಕುಮಾರ್, ಗುಂಗ್ರಾಲ್ ಛತ್ರ ಗ್ರಾಪಂ ಆಡಳಿತಾಧಿಕಾರಿ ಚಿಕ್ಕಣ್ಣ, ಬಿಇಒ ಪ್ರಕಾಶ್, ಪಿಡಿಒ ಶಿವಣ್ಣ, ಮುಖಂಡರಾದ ಯದುವರ, ಅರುಣ್‌ಕುಮಾರ್, ಗ್ರಾಪಂ ಮಾಜಿ ಸದಸ್ಯರಾದ ರೇವಣ್ಣ, ಮಾದೇವಿ, ರೂಪಾ, ಮಂಜು, ಜಿಲ್ಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಡಿ. ಮಾಲೇಗೌಡ, ಉಪಾಧ್ಯಕ್ಷ ರಘು ಮತ್ತಿತರರು ಇದ್ದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net