ಕಲ್ಪವೃಕ್ಷಗಳನ್ನು ಕಾಡುತ್ತಿದೆ ಕೀಟಬಾಧೆ

ಹುಣಸೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಕೀಟಬಾಧೆಗೊಳಗಾಗಿ ಒಣಗುತ್ತಿರುವ ತೆಂಗಿನ ತೋಟ.
ಹುಣಸೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಕೀಟಬಾಧೆಗೊಳಗಾಗಿ ಒಣಗುತ್ತಿರುವ ತೆಂಗಿನ ತೋಟ.
Published on
ಹುಣಸೂರು : ತಾಲೂಕಿನಾದ್ಯಂತ ಕಪ್ಪುತಲೆ ಕಂಬಳಿ ಹುಳು ಹಾಗೂ ಬಿಳಿನೊಣ(ರುಗೋಸ್‌ವೈಟ್), ಕೆಂಪುಮೂತಿ ಹುಳು ಕಾಟದಿಂದಾಗಿ ತೆಂಗಿನ ಮರಗಳು ಸೊರಗುತ್ತಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಹೀಗಿದ್ದರೂ ತೆಂಗಿನ ರೋಗಬಾಧೆ ಪರಿಹಾರಕ್ಕೆ ಸರ್ಕಾರದಿಂದ ಯಾವುದೇ ಆರ್ಥಿಕ ನೆರವಿನ ಯೋಜನೆಯೇ ಇಲ್ಲ.
ತಾಲೂಕಿನಲ್ಲಿ ನಾಲ್ಕು ಸಾವಿರ ಹೆಕ್ಟೇರ್(10 ಸಾವಿರ ಎಕರೆ)ಪ್ರದೇಶದಲ್ಲಿ ತೆಂಗುಬೆಳೆ ಬೇಸಾಯ ಮಾಡಲಾಗಿದೆ. ಸದ್ಯ ತೆಂಗಿಗೆ ಉತ್ತಮ ಬೆಲೆ ಸಿಗುತ್ತಿರುವ ಕಾರಣ ಬೆಳೆಗಾರರು ಖುಷ್ ಆಗಿದ್ದಾರೆ. ಈ ನಡುವೆ ಕೀಟಬಾಧೆ ರೈತರನ್ನು ಕಾಡುತ್ತಿದ್ದರೂ ತೋಟಗಾರಿಕೆ ಇಲಾಖೆಯಲ್ಲಿ ಯಾವುದೇ ಕೀಟನಾಶಕ ಔಷಧ ಇಲ್ಲದಿರುವುದು ದುರ್ದೈವ. ಹೋಗಲಿ ಆರ್ಥಿಕ ಬೆಂಬಲವಾದರೂ ಇದ್ದರೆ ರೈತ ಸಾಲಸೋಲ ಮಾಡಿಯಾದರೂ ಮರ ಉಳಿಸಿಕೊಳ್ಳಬಹುದಿತ್ತು. ಅದೂ ಇಲ್ಲದಿರುವುದು ತೆಂಗು ಬೆಳೆಗಾರರಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಮಡುಗಟ್ಟುವಂತೆ ಮಾಡಿದೆ. ತಾಲೂಕಿನಾದ್ಯಂತ ಬಿಳಿನೊಣ(ರುಗಾಸ್ ವೈಟ್), ಕಪ್ಪು ತಲೆ ಹುಳು ಕಾಟದಿಂದ ಹೆಚ್ಚು ಹಾನಿಯಾಗಿದ್ದರೆ, ಅಲ್ಲಲ್ಲಿ ಕೆಂಪುಮೂತಿ ಹುಳು ಬಾಧೆಯಿಂದ ಶೇ.25-30ರಷ್ಟು ತೆಂಗಿನ ಫಸಲಿಗೆ ಹಾನಿಯಾಗಿದೆ.
ಬಿಳಿ ನೊಣ ಕೀಟಬಾಧೆ: ರುಗೋಸ್ ಸುರುಳಿಯಾಕಾರದ ಬಿಳಿ ನೊಣವಾಗಿದ್ದು, ಇದು ರಸ ಹೀರುವ ಕೀಟ. ಮೈತುಂಬಾ ಬಿಳಿಬಣ್ಣದ ಮೇಣದಂತ ಹುಡಿ ಇರುತ್ತದೆ. ರೆಕ್ಕೆಗಳನ್ನು ಹೊಂದಿದೆ. ಎಲೆಗಳ ಕೆಳಭಾಗದಲ್ಲಿ ವೃತ್ತಾಕಾರದಲ್ಲೊ ಮೊಟ್ಟೆ ಇಡುತ್ತದೆ. ಮರಿ ಹಾಗೂ ಪ್ರೌಢಕೀಟಗಳು ಎಲೆಯ ಕೆಳಭಾಗದಲ್ಲಿ ರಸ ಹೀರುತ್ತದೆ. ಕ್ರಮೇಣ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗಲಿದೆ.
ಕಪ್ಪುತಲೆ ಕಂಬಳಿಹುಳು:
ಎಲೆಯ ಕೆಳಭಾಗದ ಹಸಿರು ಪದಾರ್ಥವನ್ನು ಕೆರೆದು ತಿನ್ನುವ ಕಪ್ಪುತಲೆ ಕಂಬಳಿಹುಳುಗಳು ನೂಲಿನಿಂದ ಗೂಡನ್ನು ನಿರ್ಮಿಸಿ ವಾಸುತ್ತವೆ. ಹಾನಿಯ ತೀವ್ರತೆ ಹೆಚ್ಚಾದಾಗ ಎಲೆಗಳು ಸಂಪೂರ್ಣವಾಗಿ ಒಣಗುತ್ತವೆ. ಇದರ ಹಾವಳಿ ಎಲ್ಲ ವಯಸ್ಸಿನ ಮರಗಳು, ಬೇಸಿಗೆಯಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.
ಕೆಂಪುಮೂತಿ ಹುಳು: ತೆಂಗಿನ ಮರಗಳ ಸುಳಿ ಹಾಗೂ ಕಾಂಡವನ್ನು ಕೊರೆದು ಒಳಸೇರಿ ತಿಂದು ಬದುಕುವ ಇವು ರಂಧ್ರ ಮಾಡಿದ ಅಗದಲ್ಲಿ ಕೆಂಪು ಮಿಶ್ರಿತ ಕಂದು ಬಣ್ಣದ ನಾರಿನಂತ ಅಂಟು ಹೊರಬರಲಿದೆ. ಮರಿಹುಳುಗಳು ಸುಳಿಯ ಕಾಂಡವನ್ನು ಕೊರೆದು ತಿನ್ನುವುದರಿಂದ ಮರಗಳು ಪ್ರಮೇಣ ಸಾಯುತ್ತವೆ.
ರೋಗತಡೆ ಹೇಗೆ? : ಬಿಳಿನೊಣ ಕೀಟಬಾಧೆಗೀಡಾದ ಗಿಡಗಳ ಎಲೆಗಳನ್ನು ಕಿತ್ತು ಸುಡಬೇಕು. ಹಳದಿ ಬಣ್ಣದ ಎಲೆಗಳು ಅಥವಾ ಡ್ರಾಯಿಂಗ್ ಪೇಪರ್‌ಗೆ ಹರಳೆಣ್ಣೆ ಹಚ್ಚಿ ಅಲ್ಲಲ್ಲಿ ನೇತು ಹಾಕುವುದರಿಂದ ಕೀಟಗಳು ಬಲೆಗೆ ಅಂಟಿಕೊಳ್ಳುತ್ತವೆ. ಬಿಳಿನೊಣಗಳನ್ನು ಸೆಳೆಯಲು ಹಳದಿ ಜಿಗುಟಾದ ಆಕರ್ಷಕ ಬಲೆ ಅಳವಡಿಸಬೇಕು. ಎನ್ಕಾರ್ಸಿಯಾ ಗ್ವಾಡಿಯಾಲೊಪೆ ಹಾಗೂ ಎನ್ಕಾರ್ಸಿಯಾ ಡಿಸ್ಪರ್ಸಾ ಎಂಬ ಎರಡು ಪರಾವಲಂಬಿ ಕೀಟಗಳು ಬಿಳಿ ನೊಣದ ಮೊಟ್ಟೆಗಳನ್ನು ತಿನ್ನುವುದರಿಂದ ನಿಯಂತ್ರಿಸಬಹುದು. ಎಲೆಗಳ ಕೆಳಭಾಗದ ಕೀಟಗಳಿಗೆ ನೀರು ಬಿಡಬೇಕು. ಬೇವಿನಎಣ್ಣೆ ಸಿಂಪಡಿಸಬೇಕು.
ಕಪ್ಪುತಲೆ ಕಂಬಳಿಹುಳು ಕೀಟಬಾಧೆ ಕಾಣಿಸಿಕೊಂಡಾಗ ಗರಿಗಳನ್ನು ಕತ್ತರಿಸಿ ಸುಡಬೇಕು. ಹುಳುಗಳು ಮರಿಯ ಹಂತದಲ್ಲಿದ್ದಾಗ ಪ್ರತಿ ಮರಕ್ಕೆ 10-20 ಗೋನಿಯೋಜಸ್ ನೆಫಾಂಟಿಡಸ್ ಪರತಂತ್ರಜೀವಿಗಳನ್ನು 15 ದಿನಗಳಿಗೊಮ್ಮೆ ನಾಲ್ಕು ಬಾರಿ ಬಿಡಬೇಕು. ಬೇವಿನಎಣ್ಣೆಯನ್ನು ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ವರ್ಷಕ್ಕೆ ಮೂರು ಬಾರಿ ಬೇರಿನ ಮುಖಾಂತರ ಶೇ.5ರ ಅಝಾಡಿರೆಕ್ಟಿನ್ 7.5.ಮಿಲಿ ಅಥವಾ ಮಾನೋಫೋಟೋಪಾಸ್ 36.ಎಸ್.ಸಿ.ಯನ್ನು 10 ಲೀ. ನೀರಿನೊಂದಿಗೆ 10 ಮಿಲಿ ಬೆರೆಸಿ ಪ್ರತಿಮರಕ್ಕೂ ಉಪಚರಿಸಬೇಕು.
ಕೆಂಪುಮೂತಿ ಹುಳು ಬಾಧೆಗೊಳಗಾಗಿ ನಾಶವಾಗಿರುವ ತೆಂಗಿನಮರದೊಳಗಿನ ಹುಳುಗಳನ್ನು ನಾಶಪಡಿಸಬೇಕು. ಮರಕ್ಕೆ ಗಾಯವಾಗಿದ್ದಲ್ಲಿ ಮಣ್ಣಿನ ದ್ರಾವಣವನ್ನು ಹಾಕಿ ಮುಚ್ಚಬೇಕು. ಮೋಹಕಬಲೆಯನ್ನು ಪ್ರತಿ ಹೆಕ್ಟರ್‌ಗೊಂದರಂತೆ ಅಳವಡಿಸಬೇಕು. ಪ್ರತಿ ಲೀ. ನೀರಿಗೆ 10 ಮಿಲಿ ಡೈಕ್ಲೋರ್‌ವಾಸ್ ದ್ರಾವಣ ಬೆರೆಸಿ ಸಿಂಪಡಿಸಬೇಕು. ರಂಧ್ರಗಳಿಗೆ ಸುರಿಯಬೇಕು. ಅಲ್ಯುಮಿನಿಯಂಫಾಸ್ಪೈಡ್ ಮಾತ್ರೆ ಹಾಕಿ ರಂದ್ರವನ್ನು ಸಗಣಿಯಿಂದ ಮುಚ್ಚಬೇಕು. ವರ್ಷಕ್ಕೆ ಮೂರು ಬಾರಿ ಬೇರಿನ ಮುಖಾಂತರ ಮಾನೋಫೋಟೋಫಾಸ್ ಅನ್ನು 10 ಮಿ.ಲೀ. ನೀರಿಗೆ ಬೆರೆಸಿ ಪ್ರತಿ ಮರವನ್ನು ಉಪಚರಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net