

ನಂಜನಗೂಡು:
ಮೈಸೂರು ಜಿಲ್ಲೆಯಲ್ಲಿರುವ ಎಲ್ಲ ಕೆರೆ-ಕಟ್ಟೆಗಳಿಗೆ ತಕ್ಷಣವೇ ನೀರು ಬಿಡಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಅದೇಶ ನೀಡಿದರು.
ತಾಲೂಕಿನಲ್ಲಿರುವ ಓವರ್ ಹೇಡ್ ಪರಿಸ್ಥಿತಿ ಬಹಳ ಗಂಭೀರವಾಗಿದ್ದು, ಅಧಿಕಾರಿಗಳು ಕೂಡಲೇ ದುಸ್ಥಿತಿಯಲ್ಲಿರುವ ಟ್ಯಾಂಕ್‌ಗಳನ್ನು ತೆರವುಗೊಳಿಸಿ. ಕೆಲವು ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿವೆ. ಅವುಗಳನ್ನು ಸ್ವಚ್ಛಗೊಳಿಸಿ ಅವಶ್ಯಕತೆಗೆ ಬಳಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ನಂಜನಗೂಡು ಮೈಸೂರು ಮುಖ್ಯ ರಸ್ತೆ ಕಬಿನಿಗೆ ಅಡ್ಡಲಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನಗಳ ನಿರಂತರ ಓಡಾಟದಿಂದ ಅಧಿಕ ಒತ್ತಡ ಬೀಳುತ್ತಿದೆ. ನಿಷೇಧಿತ ಮೇಲ್ಸೇತುವೆ ಮೇಲೆ ಕನಿಷ್ಠ ದ್ವಿಚಕ್ರ ವಾಹನಗಳನ್ನು ಓಡಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅನುಮತಿ ನೀಡಿದರೆ ಉಪಯೋಗವಾಗುತ್ತದೆ. ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ನೂತನ ಮೇಲ್ಸೇತುವೆ ಭಾರ ತಾಳಲಾರದೆ ಬಿರುಕು ಬಿಡುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸ್ತುತ ಕಬಿನಿ ಜಲಾಶಯದಲ್ಲಿ 18.06 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ ಬೆಳೆ ಬೆಳೆಯಲು ನೀರು ಬಿಟ್ಟಿಲ್ಲ. ಹುಲ್ಲಹಳ್ಳಿ, ರಾಂಪುರ ಭಾಗದ ರೈತರಿಗೆ ಭತ್ತ ಬೆಳೆಯಲು ನೀರು ಹರಿಸಿದರೆ ಅನುಕೂಲವಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿಯ ಕೆಲಸಗಳನ್ನು ದೂರು ನೀಡಿದ ನಂತರ ಎರಡು ದಿನದ ಒಳಗಾಗಿ ಸಮಸ್ಯೆ ಬಗೆಹರಿಯದೆ ಇದ್ದರೆ ಪಿಡಿಒ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ನಿರ್ದಾಕ್ಷ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಬರದ ಸಮಯದಲ್ಲಿ ಸಾರ್ವಜನಿಕರನ್ನು ಪಂಚಾಯಿತಿಗೆ ಅಲೆಸುವುದು ಒಳ್ಳೆಯದಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಗುಡುಗಿದರು.