ಒಕ್ಕಲೆಬ್ಬಿಸಲು ಹುನ್ನಾರ ನಡೆಸಿದರೆ ದೂರು ದಾಖಲಿಸಿ

ರಾಣಿ ಗೇಟ್ ಬಳಿ ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿಗೆ ಸಚಿವ ಕೆ.ವೆಂಕಟೇಶ್ ಭೂಮಿಪೂಜೆ ನೆರವೇರಿಸಿದರು. ಡಿ.ಟಿ. ಸ್ವಾಮಿ, ರೆಹಮಜಾನ್ ಬಾಬು, ಧನರಾಜ್, ಶೇಕ್ ಅಸ್ಲಾಂ ಇತರರು ಇದ್ದರು.
ರಾಣಿ ಗೇಟ್ ಬಳಿ ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿಗೆ ಸಚಿವ ಕೆ.ವೆಂಕಟೇಶ್ ಭೂಮಿಪೂಜೆ ನೆರವೇರಿಸಿದರು. ಡಿ.ಟಿ. ಸ್ವಾಮಿ, ರೆಹಮಜಾನ್ ಬಾಬು, ಧನರಾಜ್, ಶೇಕ್ ಅಸ್ಲಾಂ ಇತರರು ಇದ್ದರು.
Published on
ಬೈಲುಕುಪ್ಪೆ: ನೂರಾರು ವರ್ಷಗಳಿಂದ ಕಾಡಿನೊಳಗೆ ವಾಸವಾಗಿರುವ ಆದಿವಾಸಿ ಬುಡಕಟ್ಟು ಜನರನ್ನು ಇಲ್ಲಸಲ್ಲದ ಸಬೂಬು ಹೇಳಿ ಒಕ್ಕಲೆಬ್ಬಿಸಲು ಹುನ್ನಾರ ನಡೆಸಿದರೆ ಅಂತಹ ಅಧಿಕಾರಿಗಳ ವಿರುದ್ಧ ದೂರು ದಾಖಲಿಸುವಂತೆ ಪಶುಸಂಗೋಪನಾ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಎಚ್ಚರಿಕೆ ನೀಡಿದರು.
ತಾಲೂಕಿನ ಗಾಂಧಿನಗರದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ, ತಿರುಮಲಾಪುರದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ, 304 ಲಕ್ಷ ರೂ. ವೆಚ್ಚದಲ್ಲಿ ರಾಣಿ ಗೇಟ್ ಹಾಡಿ, ಗೌಡನ ಕಟ್ಟೆ, ದೊಡ್ಡ ಹೊಸೂರು, ರಾಣಿ ಗೇಟ್ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಕಾಡಿನಲ್ಲಿ ವಾಸಿಸುವ ಆದಿವಾಸಿ ಬುಡಕಟ್ಟು ಸಮುದಾಯದವರಿಗೆ ಅರಣ್ಯ ಹಕ್ಕು ಕಾಯ್ದೆ ಅಡಿ ವಾಸಿಸಲು ಸರ್ಕಾರ ಅವಕಾಶ ನೀಡಿದೆ. ಹೀಗಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಇವರನ್ನು ಒಕ್ಕಲೆಬ್ಬಿಸುವ ಸಲುವಾಗಿ ಇಲ್ಲಸಲ್ಲದ ದಾಖಲೆಗಳನ್ನು ಕೇಳಿ ಇವರನ್ನು ಅರಣ್ಯದೊಳಗಿಂದ ಆಚೆ ಹಾಕಲು ಹುನ್ನಾರ ಮಾಡುತ್ತಿದ್ದಾರೆ ಎಂದು ದೂರುಗಳು ಕೇಳಿ ಬರುತ್ತಿವೆ. ಅರಣ್ಯದೊಳಗೆ ವಾಸಿಸುವ ಜನರಿಗಾಗಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಅರಣ್ಯದೊಳಗೆ ವಾಸಿಸುತ್ತಿರುವ ಜನರಿಗೆ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಹಾಗೂ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಅರಣ್ಯಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುವ ನೆಪದಲ್ಲಿ ಇಲ್ಲಸಲ್ಲದ ಕಾನೂನು ಹೇಳಿ ಮುಗ್ಧ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಅರಣ್ಯವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹಾಗಾಗಿ ಅರಣ್ಯಾಧಿಕಾರಿಗಳು ಸರ್ಕಾರ ತಮಗೆ ನೀಡಿರುವ ಸೂಚನೆಗನುಗುಣವಾಗಿ ಮಾತ್ರ ಕೆಲಸ ಮಾಡಬೇಕು. ಅದು ಬಿಟ್ಟು ವಿನಾಃ ಕಾರಣ ಅವರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದರೆ ಅಂತವರ ವಿರುದ್ಧ ದೂರು ದಾಖಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಮ್ಮ ಸರ್ಕಾರ ಬಂದ ನಂತರ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಿಡುವಳಿ ಭೂಮಿ ಸೇರಿದಂತೆ ರೈತರ ಭೂಮಿಯನ್ನು ಸರ್ವೇ ಮಾಡುವಂತೆ ಸೂಚನೆ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆದರೆ ಸರ್ವೇಗೆ ಬರುವ ಅಧಿಕಾರಿಗಳು ಜಮೀನಿನ ಸರ್ವೇ ಹಾಗೂ ಪೋಡು ಮಾಡಲು ಲಂಚಕ್ಕೆ ಹೆಚ್ಚಿನ ಬೇಡಿಕೆ ಹಿಡುವ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಎಡಿಎಲ್‌ಆರ್ ಮುನಿಯಪ್ಪ ಅವರಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು, ರಸ್ತೆ, ಚರಂಡಿ, ಬಸ್ ತಂಗುದಾಣ, ವಿದ್ಯುತ್ ಕಂಬಗಳ ಅಳವಡಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಸಲ್ಲಿಸಿದರು. ತಹಸೀಲ್ದಾರ್ ನಿಸರ್ಗ ಪ್ರಿಯಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಸೋಮಯ್ಯ, ವಲಯ ಅರಣ್ಯಾಧಿಕಾರಿ ಪದ್ಮಶ್ರೀ, ಸುಬ್ರಹ್ಮಣ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ರಹಮತ್‌ಜಾನ್ ಬಾಬು, ಮುಖಂಡರಾದ ಕರೀಗೌಡ, ಜವರೇಗೌಡ, ಚಂದ್ರಹಾಸ್ ನಾಯ್ಕ, ಕೊಪ್ಪ ಗ್ರಾಮ ಪಂಚಾಯಿತಿ ಗೀತಾ, ಉಪಾಧ್ಯಕ್ಷೆ ಅಕ್ಕಯಮ್ಮ, ಪಿಡಿಒ ಮಂಜುನಾಥ್, ಧನರಾಜ್, ಸೇಕ್ ಅಸ್ಲಾಂ, ಸಾವಿತ್ರಿ, ರಾಮಸ್ವಾಮಿ, ಚೆನ್ನಯ್ಯ, ಶೇಖರ್, ಮುಕ್ಬುಲ್, ರಿಯಾಜ್, ಸಲೀಂ, ಚರಪುರ ಶ್ರೀನಿವಾಸ್, ವೆಂಕಟೇಶ್ ನಾಯ್ಕ, ಆದಿವಾಸಿ ಬುಡಕಟ್ಟು ಸಮುದಾಯದ ಅಧ್ಯಕ್ಷ ಜಯಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net