ಶೋಷಿತ ಮಕ್ಕಳಿಗೆ ಅಕ್ಷರ ನೀಡಿದ ಶಿಕ್ಷಕಿ

ಹುಣಸೂರು ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಜಗದೀಶ್ ಮಾತನಾಡಿದರು. ಪ್ರಾಂಶುಪಾಲ ಎ.ರಾಮೇಗೌಡ, ಸಿ.ದೇವರಾಜು, ಡಿ.ಎಸ್.ಸ್ವಾಮಿ, ಧರ್ಮೇಶ್ ಇತರರಿದ್ದಾರೆ.
ಹುಣಸೂರು ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಜಗದೀಶ್ ಮಾತನಾಡಿದರು. ಪ್ರಾಂಶುಪಾಲ ಎ.ರಾಮೇಗೌಡ, ಸಿ.ದೇವರಾಜು, ಡಿ.ಎಸ್.ಸ್ವಾಮಿ, ಧರ್ಮೇಶ್ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸಾವಿತ್ರಿ ಬಾಯಿ ಫುಲೆ ಜಯಂತಿ ಸಮಾರಂಭ
  • ರಾಜ್ಯ ಶಾಸ್ತ್ರ ಉಪನ್ಯಾಸಕ ಜಗದೀಶ್ ಹೇಳಿಕೆ
ಹುಣಸೂರು: ಜಾತೀಯತೆಯ ಪೆಡಂಭೂತ ಕಾಡುತ್ತಿದ್ದ 18ನೇ ಶತಮಾನದಲ್ಲಿ ಶೋಷಿತ ಸಮುದಾಯದ ಮಕ್ಕಳ ನಾಲಗೆಯ ಮೇಲೆ ಮೊಟ್ಟಮೊದಲ ಬಾರಿಗೆ ಅಕ್ಷರ ಬರೆದ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಮಹಾನ್ ಸಮಾಜ ಸುಧಾರಕಿ ಎಂದು ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕ ಜಗದೀಶ್ ಅಭಿಪ್ರಾಯಪಟ್ಟರು.
ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಸೋಮವಾರ ಆಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆರವರ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
18ನೇ ಶತಮಾನದ ಪೂರ್ವದಲ್ಲಿ ಮಹಿಳೆಯರನ್ನು ಜಾತಿ, ಧರ್ಮದ ಹೆಸರಿನಲ್ಲಿ ಪಶುಪ್ರಾಣಿಗಳಿಗಿಂತಲೂ ಹೀನಾಯವಾಗಿ ಕಾಣಲಾಗುತ್ತಿತ್ತು. ಅಸ್ಪೃಶ್ಯತೆ ಆಚರಣೆ, ಸತಿ ಸಹಗಮನ ಪದ್ಧತಿ, ವಿಧವೆಯರ ಶೋಷಣೆ, ಅತ್ಯಾಚಾರ, ಬಾಲ್ಯವಿವಾಹ ಪದ್ಧತಿ ಮುಂತಾದ ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿ ಹಲವು ಅವಕಾಶಗಳಿಂದ ಸ್ತ್ರೀಯನ್ನು ವಂಚಿತಳನ್ನಾಗಿಸಿತ್ತು. ಇವೆಲ್ಲವನ್ನೂ ಹಿಮ್ಮೆಟ್ಟಿಸಿದ ಸಾವಿತ್ರಿ ಬಾಯಿ ಫುಲೆ ಸಮಾಜದ ಗೊಡ್ಡು ಸಂಪ್ರದಾಯ, ಕಟ್ಟುಪಾಡುಗಳೊಂದಿಗೆ ಹೋರಾಡಿ ಮಹಿಳೆಯರಿಗಾಗಿ ಮೊಟ್ಟಮೊದಲ ಶಾಲೆಗಳನ್ನು ಸ್ಥಾಪಿಸಿದರು. ಸ್ವತಃ ತಮ್ಮ ಮನೆಯ ಬಾವಿಗಳಿಂದ ದಲಿತರಿಗೆ ಕುಡಿಯುವ ನೀರು ಕೊಡುವುದರ ಮೂಲಕ ಮಾನವೀಯತೆ ಮೆರೆದರು ಎಂದರು.
ವಿಧವೆಯರ ಕೇಶಮಂಡನೆ ವ್ಯವಸ್ಥೆ ವಿರುದ್ಧ ಹೋರಾಡಿ, ಕ್ಷೌರಿಕರ ಸಭೆಗಳನ್ನು ನಡೆಸುವ ಮೂಲಕ ವಿಧವೆಯರ ಕೇಶಮಂಡನೆಗೆ ಕ್ಷೌರಿಕರು ಒಪ್ಪದಂತೆ ಅವರ ಮನಃಪರಿವರ್ತನೆ ಮಾಡಿದರು. ವಿಧವಾ ಪುನರ್ವಿವಾಹಕ್ಕೆ ಮಾನ್ಯತೆ, ಮಹಿಳಾ ಸೇವಾ ಮಂಡಳ ಎಂಬ ಸಂಘಟನೆ ಮುಖಾಂತರ ಸಮಾಜದಲ್ಲಿ ಪ್ರಗತಿಪರ ಚಿಂತನೆಗಳನ್ನು ಬೆಳೆಸಿದರು. ಗುಪ್ತ ಪ್ರಸೂತಿ ಗೃಹಗಳನ್ನು ಸ್ಥಾಪಿಸುವುದರ ಮೂಲಕ ಎಷ್ಟೋ ಹೆಣ್ಣು ಮಕ್ಕಳ ಹಾಗೂ ಶಿಶುಗಳ ರಕ್ಷಣೆ ಮಾಡಿದರು. ವಿಧವೆಯರ ಮಕ್ಕಳಿಗಾಗಿ, ವಿವಾಹ ಬಾಹಿರ ಸಂಬಂಧದಿಂದ ಜನಿಸಿದ ಮಕ್ಕಳಿಗಾಗಿ ಶಿಶು ಕೇಂದ್ರಗಳನ್ನು ಸ್ಥಾಪಿಸಿದರು. ಸತ್ಯಶೋಧಕ ಸಮಾಜದ ಅಧ್ಯಕ್ಷರಾಗಿ ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಪುರೋಹಿತರಿಲ್ಲದೆ ವಿವಾಹಗಳನ್ನು ಏರ್ಪಡಿಸಿದರು. ಸರಳ ವಿವಾಹ, ಕಾನೂನುಬದ್ಧ ವಿವಾಹಗಳನ್ನು ಏರ್ಪಡಿಸುವುದರ ಮೂಲಕ ವಿವಾಹದ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿ, ಬಡವರಿಗೆ ವಿವಾಹದಿಂದ ಆಗುವ ಹೊರೆ ಕಡಿಮೆ ಮಾಡಿ ಸಮಾಜಕ್ಕೆ ಮಾದರಿಯಾದರು. ಸಾವಿತ್ರಿಬಾಯಿ ಫುಲೆ ಅವರ ಸಾಧನೆಗಳನ್ನು ಗುರುತಿಸಿ ಅಂದಿನ ಬ್ರಿಟಿಷ್ ಸರ್ಕಾರ ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಎಂಬ ಬಿರುದನ್ನು ನೀಡಿತು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎ. ರಾಮೇಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಸಿ.ದೇವರಾಜು, ಉಪನ್ಯಾಸಕರಾದ ಡಿ.ಎಸ್.ಸ್ವಾಮಿ, ನಟರಾಜು. ಕೆ.ಎಸ್. ಚಿದಂಬರಮೂರ್ತಿ, ಚಂದ್ರಕಾಂತ್, ಸರ್ವೋತ್ತಮ, ಚಂದ್ರಶೇಖರ್, ಧರ್ಮೇಶ್, ಸವಿತಾ, ಶಾಂತಕುಮಾರಿ, ತೇಜಸ್ವಿನಿ, ಅನಿ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net