ಮಠಗಳಿಂದ ಹಿಂದೂ ಧರ್ಮ ಬಲಿಷ್ಠ

ಶಾಸಕ ಟಿ.ಎಸ್.ಶ್ರೀವತ್ಸ ಹೇಳಿಕೆ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಅವರ 35ನೇ ಚಾತುರ್ಮಾಸ್ಯ ವ್ರತ ಸಮಾರೋಪ
Hinduism is stronger than monasteries
ಶ್ರೀಕೃಷ್ಣಧಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಟಿ.ಎಸ್.ಶ್ರೀವತ್ಸ, ವಿದ್ವಾನ್ ರಂಗನಾಥಾಚಾರ್ಯ ಕಟ್ಟಿ, ಎಂ.ಕೃಷ್ಣದಾಸ ಪುರಾಣಿಕ್, ಆರ್. ವಾಸುದೇವ ಭಟ್, ಪಿ.ಜಯರಾಮ್ ಭಟ್, ರವಿಶಾಸ್ತ್ರಿ, ಪಿ.ಎಸ್.ಶೇಖರ್ ಇದ್ದರು.
Published on: 

ಮೈಸೂರು: ನಮ್ಮ ಮಠ-ಮಾನ್ಯಗಳಿಂದ ಹಿಂದೂ ಧರ್ಮ ನಿಜಕ್ಕೂ ದಿನೇ ದಿನೆ ಗಟ್ಟಿಯಾಗುತ್ತಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.

ನಗರದ ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಶುಕ್ರವಾರ ಸಂಜೆ ಶ್ರೀಕೃಷ್ಣ ಟ್ರಸ್ಟ್, ಶ್ರೀಕೃಷ್ಣ ಮಿತ್ರಮಂಡಳಿ ಹಾಗೂ ಚಾತುರ್ಮಾಸ್ಯ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಅವರ 35ನೇ ಚಾತುರ್ಮಾಸ್ಯ ವ್ರತ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮೈಸೂರಿನ ಸುತ್ತೂರು ಶ್ರೀ ಮಠ, ಗಣಪತಿ ಸಚ್ಚಿದಾನಂದ ಆಶ್ರಮ ಸೇರಿದಂತೆ ವಿವಿಧ ಧಾರ್ಮಿಕ ಸಂಸ್ಥೆಗಳಲ್ಲಿ ದೂರದ ಊರುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಸಂಸ್ಕೃತ ಹಾಗೂ ವೇದಾಧ್ಯಯನ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಇಂತಹ ಧಾರ್ಮಿಕ ಚಟುವಟಿಕೆಗಳಿಂದ ಹಿಂದೂ ಧರ್ಮ ಹಾಗೂ ಸನಾತನ ಧರ್ಮ ನಿಜಕ್ಕೂ ಇನ್ನಷ್ಟು ಗಟ್ಟಿಯಾಗುತ್ತದೆ ಎಂದರು.

ನಮ್ಮ ಧರ್ಮವನ್ನು ಅಲ್ಲಲ್ಲಿ ಹೀಗಳೆಯುವ ಹಾಗೂ ಅವಮಾನಿಸುವ ಘಟನೆಗಳು ಈಗಲೂ ನಡೆಯುತ್ತಿವೆ. ಕಳೆದ ವಾರ ತಿ.ನರಸೀಪುರದ ಗಣಪತಿ ವಿಸರ್ಜನ ಮೆರವಣಿಗೆ ವಿಚಾರದಲ್ಲೂ ಇಂತಹ ಪರಿಸ್ಥಿತಿ ಕಂಡುಬಂದಿತ್ತು. ಗಣಪತಿ ಮೆರವಣಿಗೆ ಎಲ್ಲಿಗೆ ಹೋಗಬೇಕು, ಎಲ್ಲಿಗೆ ಹೋಗಬಾರದು ಎಂದು ಧಮ್ಕಿ ಹಾಕಲಾಗಿತ್ತು. ಆದರೆ, ಹಿಂದೂ ಸಮಾಜ ಅದನ್ನು ಎದುರಿಸಿ, ಯಾವ ಜಾಗಕ್ಕೆ ಹೋಗಬಾರದು ಎಂದು ಹೇಳಲಾಗಿತ್ತೋ ಅದೇ ಜಾಗದಲ್ಲಿ ಗಣಪತಿ ಮೆರವಣಿಗೆಯನ್ನು ಯಶಸ್ವಿಯಾಗಿ ನಡೆಸಿ ಹಿಂದಿರುಗಿರುವುದು ಹೆಮ್ಮೆಯ ಸಂಗತಿ ಎಂದರು.

ಇಂತಹ ಧಾರ್ಮಿಕ ಆಚರಣೆಗಳು ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಧಾರ್ಮಿಕ ಜಾಗೃತಿ ಕಾರ್ಯಗಳಿಂದ ಹಿಂದೂ ಧರ್ಮ ಮತ್ತು ಸನಾತನ ಧರ್ಮ ಮತ್ತಷ್ಟು ಗಟ್ಟಿಯಾಗಲಿದೆ. ಈ ನಿಟ್ಟಿನಲ್ಲಿ ಮಠಾಧೀಶರು ಹಾಗೂ ಧಾರ್ಮಿಕ ಸಂಸ್ಥೆಗಳ ಕೊಡುಗೆ ಅತ್ಯಂತ ಅಮೂಲ್ಯವಾದದ್ದು ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಾಧ್ವ ಪರಂಪರೆಯ ಅಷ್ಟಮಠಗಳಲ್ಲಿ ಕಾಣಿಯೂರು ಮಠಕ್ಕೆ ವಿಶೇಷ ಸ್ಥಾನವಿದೆ. ಶ್ರೀ ಮಧ್ವಾಚಾರ್ಯರು ಜನಿಸಿದ ಪವಿತ್ರ ಪಾಜಕ ಕ್ಷೇತ್ರದ ಪೂಜಾ ಆಡಳಿತ ಹಾಗೂ ನಿರ್ವಹಣೆಯ ಜವಾಬ್ದಾರಿ ಕಾಣಿಯೂರು ಮಠಕ್ಕೆ ಲಭಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ಧಾರ್ಮಿಕ ಸೇವೆಯನ್ನು ಸ್ಮರಿಸಿದ ಅವರು, ಉಡುಪಿ ಶ್ರೀಕೃಷ್ಣ ಮಠದ ಪರಂಪರೆಯ ವಿಶೇಷತೆ ವಿವರಿಸಿದರು. ಕಾಣಿಯೂರು ಮಠದ ಹಿರಿಯ ಶ್ರೀಗಳು ಶ್ರೀಕೃಷ್ಣ ಮಠದ ಪ್ರಾಂಗಣದಲ್ಲಿ ಎರಡು ಅಂತಸ್ತಿನ ವಿಶಿಷ್ಟ ಗೋಶಾಲೆ ನಿರ್ಮಿಸಿ ಗೋಸಂರಕ್ಷಣೆಗೆ ಅನುಕೂಲ ಕಲ್ಪಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಚಾತುರ್ಮಾಸದ ಅವಧಿಯು ಯತಿಗಳಿಗೆ ಏಕಾಂತ ಅನುಷ್ಠಾನ ಕೈಗೊಳ್ಳುವ ಜತೆಗೆ ನಾಡಿನಾದ್ಯಂತ ಧಾರ್ಮಿಕ ಜಾಗೃತಿ ಮೂಡಿಸಲು ದೊರೆಯುವ ಪವಿತ್ರ ಅವಕಾಶವಾಗಿದೆ. ಇಂತಹ ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಆಧ್ಯಾತ್ಮಿಕ ಚಿಂತನೆ ಹಾಗೂ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಪೂರ್ಣಪ್ರಜ್ಞ ಸಂಶೋಧನ ಮಂದಿರದ ಉಪ ನಿರ್ದೇಶಕ ವಿದ್ವಾನ್ ರಂಗನಾಥಾಚಾರ್ಯ ಕಟ್ಟಿ ಅಭಿನಂದನಾ ಭಾಷಣ ಮಾಡಿದರು. ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಶ್ರೀ ಚಾತುರ್ಮಾಸ್ಯ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಎಂ.ಕೃಷ್ಣದಾಸ ಪುರಾಣಿಕ್, ಆರ್. ವಾಸುದೇವ ಭಟ್, ಪಿ.ಜಯರಾಮ್ ಭಟ್, ಅಧ್ಯಕ್ಷ ರವಿಶಾಸ್ತ್ರಿ, ಕಾರ್ಯಾಧ್ಯಕ್ಷ ಪಿ.ಎಸ್.ಶೇಖರ್ ಇತರರಿದ್ದರು. ಸಮಾರಂಭದ ಬಳಿಕ ‘ಭಕ್ತಿ ವೈಭವ’ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. ಪ್ರಖ್ಯಾತ ಗಾಯಕ ವಿದ್ವಾನ್ ರಾಹುಲ್ ವೆಲ್ಲಾಲ್ ಅವರು ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net