ಗುಡುಗಿನ ಅಬ್ಬರದೊಂದಿಗೆ ಮೈಸೂರಿನಲ್ಲಿ ಧಾರಾಕಾರ ಮಳೆ

ಮೈಸೂರು ನಗರದ ಜೆಎಲ್‌ಬಿ ರಸ್ತೆಯಿಂದ ನಂಜುಮಳಿಗೆ ಕಡೆಗೆ ತೆರಳು ರಸ್ತೆ ಧಾರಾಕಾರ ಮಳೆಯಿಂದ ಜಲಾವೃತ್ತಗೊಂಡಿತು.
ಮೈಸೂರು ನಗರದ ಜೆಎಲ್‌ಬಿ ರಸ್ತೆಯಿಂದ ನಂಜುಮಳಿಗೆ ಕಡೆಗೆ ತೆರಳು ರಸ್ತೆ ಧಾರಾಕಾರ ಮಳೆಯಿಂದ ಜಲಾವೃತ್ತಗೊಂಡಿತು.
Published on
ಮೈಸೂರು: ಬಹಳ ದಿನಗಳ ಬಳಿಕ ನಗರದಲ್ಲಿ ಗುರುವಾರ ಸಂಜೆ ಗುಡುಗಿನ ಅಬ್ಬರದೊಂದಿಗೆ ಧಾರಾಕಾರ ಮಳೆ ಸುರಿಯಿತು. ದಿನವಿಡೀ ಏರಿಕೆ ಯಾಗಿದ್ದ ತಾಪಮಾನದಿಂದ ಕಾದಿದ್ದ ನಗರಕ್ಕೆ ಸಂಜೆ ಸುರಿದ ಮಳೆ ತಂಪಿನ ಸಿಂಚನ ನೀಡಿತು. ಕೆಲವೇ ಕ್ಷಣಗಳಲ್ಲಿ ಆಕಾಶ ಕಪ್ಪು ಮೋಡಗಳಿಂದ ಆವರಿಸಿಕೊಂಡು, ಗುಡುಗಿನ ಸದ್ದಿನೊಂದಿಗೆ ಮಳೆ ಸುರಿಯಿತು.
ಭಾರತೀಯ ಹವಾಮಾನ ಇಲಾಖೆ ಸೆ.13ರವರೆಗೆ ಜಿಲ್ಲೆಯಲ್ಲಿ ಹಗುರವಾದ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿತ್ತು. ಆದರೆ, ಗುರುವಾರ ಸಂಜೆ ಏಕಾಏಕಿ ಹವಾಮಾನದಲ್ಲಿ ಬದಲಾವಣೆ ಕಂಡುಬಂದು, ಮೋಡ ಕವಿದ ವಾತಾವರಣದ ನಡುವೆ ಮಳೆ ಆರ್ಭಟಿಸಿತು. ಸಂಜೆ 5.15ರ ಸುಮಾರಿಗೆ ಆರಂಭವಾದ ಮಳೆ 6 ಗಂಟೆಯವರೆಗೂ ಧಾರಾಕಾರವಾಗಿ ಸುರಿಯಿತು.
ಮಳೆ ಆರಂಭವಾಗುತ್ತಿದ್ದಂತೆ ರಸ್ತೆಯಲ್ಲಿದ್ದ ವಾಹನ ಸವಾರರು ಹಾಗೂ ಪಾದಚಾರಿಗಳು ಸುರಕ್ಷಿತ ಸ್ಥಳಗಳತ್ತ ಧಾವಿಸಿದರು. ಒಂದೆಡೆ ಯಿಂದ ಮತ್ತೊಂದೆಡೆ ತೆರಳುತ್ತಿದ್ದ ಜನರು ಅಂಗಡಿ ಮುಂಗಟ್ಟುಗಳು, ಕಟ್ಟಡಗಳ ಮುಂಭಾಗ ನಿಂತು ಮಳೆ ಕಡಿಮೆಯಾಗುವುದನ್ನೇ ಕಾಯುವಂತಾಯಿತು. ಕೆಲವರು ಮಳೆಯಲ್ಲಿ ನೆನೆಯುತ್ತಲೇ ಸಾಗಿದರೆ, ಇನ್ನೂ ಕೆಲವರು ಮಳೆ ನಿಂತ ಬಳಿಕವೇ ತಮ್ಮ ಪ್ರಯಾಣ ಮುಂದುವರಿಸಿದರು.
ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳ ರಸ್ತೆಗಳು ನೀರಿನಿಂದ ತುಂಬಿಕೊಂಡು ಕೆಲಕಾಲ ನದಿಯಂತೆ ಗೋಚರಿಸಿದವು. ರಸ್ತೆ ಬದಿಗಳಿಂದ ನೀರು ರಭಸವಾಗಿ ಹರಿದುಹೋಗುತ್ತಿದ್ದ ದೃಶ್ಯ ಕಂಡುಬಂತು. ಮಳೆ ನಿಂತು ಸುಮಾರು 15 ನಿಮಿಷ ಕಳೆದರೂ ಹಲವು ರಸ್ತೆಗಳ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಲೇ ಇತ್ತು. ಮಳೆಯ ಅಬ್ಬರಕ್ಕೆ ಇದು ಸಾಕ್ಷಿಯಾಯಿತು.
ತಾಪಮಾನಕ್ಕೆ ತಂಪಿನ ಸ್ಪರ್ಶ: ಕಳೆದ ಹತ್ತು ದಿನಗಳಲ್ಲಿ ಜಿಲ್ಲೆಯಲ್ಲಿ ತಾಪಮಾನವೂ ಏರಿಕೆಯಾಗಿತ್ತು. ಸೆ.1ರಂದು ಕನಿಷ್ಠ 21 ಹಾಗೂ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಗುರುವಾರ ಕನಿಷ್ಠ ತಾಪಮಾನ 22 ಹಾಗೂ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿತ್ತು. ಹೀಗೆ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದ ಸಂದರ್ಭದಲ್ಲೇ ಸಂಜೆ ಸುರಿದ ಧಾರಾಕಾರ ಮಳೆ ವಾತಾವರಣವನ್ನು ತಂಪಾಗಿಸಿತು. ತಾಪಮಾನ ಏರಿಕೆಯ ನಡುವೆ ಏಕಾಏಕಿ ಸುರಿದ ಮಳೆಯಿಂದ ಕೆಲವೇ ಹೊತ್ತಿನಲ್ಲಿ ನಗರದ ವಾತಾವರಣವೇ ಬದಲಾಯಿತು. ಬಿಸಿಲಿನಿಂದ ಬಳಲಿದ್ದ ಜನರಿಗೆ ಮಳೆಯ ತಂಪು ಹಿತ ನೀಡಿತು.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಮಳೆಯ ಕೊರತೆ ತೀವ್ರವಾಗಿದ್ದು, ಪಿರಿಯಾಪಟ್ಟಣ ಹೊರತುಪಡಿಸಿ ಉಳಿದ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇಂತಹ ಸಂದರ್ಭದಲ್ಲಿ ಗುರುವಾರ ಸಂಜೆ ಸುರಿದ ಮಳೆ ಜಿಲ್ಲೆಯ ಜನರಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ.
ಕೇರಳಂ ರಾಜ್ಯದ ವಯನಾಡು ಜಿಲ್ಲೆಯಲ್ಲೂ ಮಳೆ ಕ್ಷೀಣಿಸಿರುವ ಪರಿಣಾಮ ಕಬಿನಿ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಮತ್ತೊಂದೆಡೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ನೀರಿನ ಸಂಗ್ರಹದಲ್ಲೂ ಇಳಿಕೆಯಾಗುತ್ತಿದ್ದು, ಜಲಾಶಯ ಬರಿದಾಗುವ ಆತಂಕ ಎದುರಾಗಿದೆ. ಹೀಗಾಗಿ ಜಿಲ್ಲೆಯ ವಿವಿಧೆಡೆ ಸುರಿದ ಮಳೆ ಜನರು ಹಾಗೂ ರೈತಾಪಿ ವರ್ಗದಲ್ಲಿ ಆಶಾಭಾವನೆ ಮೂಡಿಸಿದೆ.
ಕಬಿನಿ ಜಲಾಶಯದ ಸ್ಥಿತಿಗತಿ: ಗರಿಷ್ಠ 2284 ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಕಬಿನಿ ಜಲಾಶಯದಲ್ಲಿ ಪ್ರಸ್ತುತ 2268.62 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2283.50 ಅಡಿ ನೀರು ಇತ್ತು. ಜಲಾಶಯದ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ ಇದ್ದು, ಪ್ರಸ್ತುತ 11.01 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 19.19 ಟಿಎಂಸಿ ನೀರು ಇತ್ತು. ಜಲಾಶಯಕ್ಕೆ ಒಳಹರಿವು ಕ್ಷೀಣಗೊಂಡಿದ್ದು, ಪ್ರಸ್ತುತ 1400 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಜಲಾಶಯದಿಂದ ನದಿಗೆ 1200 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net