ಜೆಡಿಎಸ್'ನೊಂದಿಗೆ ಮುನಿಸಿಕೊಂಡಿರುವ ಜಿ.ಟಿ.ದೇವೇಗೌಡರನ್ನು ಭೇಟಿ ಮಾಡಿದ ಎಚ್.ಡಿ.ರೇವಣ್ಣ

ಶಾಸಕ ಜಿ.ಟಿ.ದೇವೇಗೌಡ
ಶಾಸಕ ಜಿ.ಟಿ.ದೇವೇಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್ ಬಿಟ್ಟು ಜಿಟಿಡಿ ಎಲ್ಲೂ ಹೋಗಲ್ಲ: ಶಾಸಕ ಎಚ್.ಡಿ.ರೇವಣ್ಣ ಪುನರುಚ್ಚಾರ
  • ಅಭಿನಂದನಾ ಕಾರ್ಯಕ್ರಮದಲ್ಲಿ ಆತ್ಮೀಯ ಚರ್ಚೆ
  • ಏನ್ರೀ ಗೌಡ್ರೇ ಸಮಾಚಾರ?
ಮೈಸೂರು: ಜೆಡಿಎಸ್ ನಾಯಕರೊಂದಿಗೆ ಮುನಿಸಿಕೊಂಡಿರುವ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಶುಕ್ರವಾರ ಶಾಸಕ ಎಚ್.ಡಿ.ರೇವಣ್ಣ ಭೇಟಿ ಮಾಡಿದ್ದು ಅಲ್ಲದೇ, ಜಿಡಿಟಿ ಅವರು ಜೆಡಿಎಸ್ ಪಕ್ಷದಲ್ಲೇ ಉಳಿಯುತ್ತಾರೆ ಎಂದು ಪುನರುಚ್ಚರಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲಲಿತಾ ಜಿ.ಟಿ.ದೇವೇಗೌಡ ಅವರಿಗೆ ಅಭಿನಂದನಾ ಕಾರ್ಯಕ್ರಮ ಈ ಘಟನೆಗೆ ಸಾಕ್ಷಿಯಾಯಿತು.
ಮಾನಸ ಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಲಲಿತಾಭಿನಂದನ ಕಾರ್ಯಕ್ರಮದಲ್ಲಿ ಜಿ.ಟಿ.ದೇವೇಗೌಡರ ಪತ್ನಿ ಲಲಿತಾ ಅವರನ್ನು ವಿವಿಧ ಮಠಾಧೀಶರ ಸಮ್ಮುಖದಲ್ಲಿ ಅಭಿನಂದಿಸಲಾಯಿತು. ಬೆಳಗ್ಗೆ ಶುರುವಾದ ಕಾರ್ಯಕ್ರಮ ಸಂಜೆವರೆಗೂ ನಡೆಯಿತು. ಕೊನೆ ಕ್ಷಣದಲ್ಲಿ ಸ್ಥಳಕ್ಕೆ ಬಂದ ಎಚ್.ಡಿ.ರೇವಣ್ಣ ಅವರು ಜಿಟಿಡಿಯ ಹೆಗಲ ಮೇಲೆ ಕೈ ಹಾಕಿ ಮಾತನಾಡಿದರು. 
 ನಾನು ಲಲಿತಕ್ಕ ಮಾಡಿದ್ದ ಅನ್ನ ಉಂಡಿರುವೆ. ಅದಕ್ಕೆ ಅಭಿನಂದಿಸಲು ಬಂದಿದ್ದೇನೆ ಎಂದ ರೇವಣ್ಣ ಅವರು, ಲಲಿತಾ ಜಿಡಿಟಿ ಅವನ್ನು ಸನ್ಮಾನಿಸಿದರು. ತಮ್ಮ ಶೈಲಿಯಲ್ಲಿ ಹಾಸ್ಯದ ಚಟಾಕಿ ಹಾರಿಸುತ್ತಿದ್ದ ರೇವಣ್ಣ, ಏನ್ರೀ ಗೌಡ್ರೇ ಸಮಾಚಾರ? ಎಂದು ಪ್ರಶ್ನಿಸಿದರು. 
ಇದಕ್ಕೆ ಏನು ಇಲ್ಲ ಎಂದ ಜಿಡಿಟಿ ಅವರು, ಇದು ನಾನು ಮಾಡಿದ ಕಾರ್ಯಕ್ರಮವಲ್ಲ. ಇವರೆಲ್ಲ ಸೇರಿ ಮಾಡಿರುವುದು’ ಎಂದು ಆಯೋಜಕರನ್ನು ತೋರಿಸಿದರು. ಈ ಮಧ್ಯೆ, ಎಚ್.ಡಿ.ರೇವಣ್ಣ ಅವರು ಜಿ.ಟಿ.ದೇವೇಗೌಡರು ಎಲ್ಲಿ ಹೋಗಲ್ಲ. ಜೆಡಿಎಸ್ ಪಕ್ಷದಲ್ಲೇ ಉಳಿಯುತ್ತಾರೆ’ ಎಂದು ಹೇಳಿದರು. 
ಜಿಟಿಡಿ ಸೇರಿದಂತೆ ಅಕ್ಕಪಕ್ಕದಲ್ಲಿದ್ದವರೆಲ್ಲ ನಕ್ಕು ಬೆಂಬಲ ಸೂಚಿಸಿದರು. ಬಳಿಕ ಜಿಟಿಡಿ ಅವರು, ರೇವಣ್ಣ ಅವರೊಂದಿಗೆ ನಾಲ್ಕು ಹೆಜ್ಜೆ ಹಾಕಿ ಕಾರ್ ಹತ್ತಿಸಿ ಕಳುಹಿಸಿಕೊಟ್ಟರು.
ಎರಡು ದಿನಗಳ ಹಿಂದೆ ಮೈಸೂರಿನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ಎಚ್.ಡಿ.ರೇವಣ್ಣ ಅವರು, ಜಿ.ಟಿ ದೇವೇಗೌಡರು ಜೆಡಿಎಸ್ ಬಿಡಲ್ಲ. ಜೆಡಿಎಸ್‌ನಿಂದಲೇ ಸ್ಪರ್ಧಿಸುತ್ತಾರೆ ಎಂದಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net