ಮಹನೀಯರನ್ನು ಅರಿಯದ ಕಾರಣ ಜಾತೀಯತೆ ಜೀವಂತ

ಎಚ್.ಡಿ.ಕೋಟೆ ತಾಲೂಕಿನ ಜಕ್ಕಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ  ಕಾರ್ಯಕ್ರಮದಲ್ಲಿ ಗಣ್ಯರು ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡಿದರು.
ಎಚ್.ಡಿ.ಕೋಟೆ ತಾಲೂಕಿನ ಜಕ್ಕಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡಿದರು.
Published on
ಎಚ್.ಡಿ.ಕೋಟೆ: ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರನ್ನು ನಾವು ಅರ್ಥ ಮಾಡಿಕೊಳ್ಳದೆ ಇರುವುದರಿಂದ ಸಮಾಜದಲ್ಲಿ ಇಂದಿಗೂ ಜಾತೀಯತೆ ಜೀವಂತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಜಕ್ಕಹಳ್ಳಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ದೇಶದ ಮಹಿಳೆಯರು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ಸ್ವಾತಂತ್ರೃ ಪೂರ್ವದಲ್ಲಿ ಮಹಿಳೆಯರನ್ನು ನಡೆಸಿಕೊಂಡ ರೀತಿ ಮತ್ತು ಸ್ವಾತಂತ್ರೃ ಬಂದ ನಂತರ ಮಹಿಳೆಯರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಅಂಬೇಡ್ಕರ್ ಕಾರಣ ಎಂದರು.
ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಲು ಮಂತ್ರಿ ಮಂಡಲದಲ್ಲಿ ಅವಕಾಶ ನೀಡದೆ ಇದ್ದಾಗ ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ ಮೊದಲ ಭಾರತೀಯ ಅಂಬೇಡ್ಕರ್. ಸಾಂವಿಧಾನಿಕ ಹಕ್ಕು, ಆಸ್ತಿಯ ಹಕ್ಕು, ವೋಟಿನ ಹಕ್ಕು ನೀಡಿದವರು ಬಾಬ ಸಾಹೇಬ ಅಂಬೇಡ್ಕರ್ ಎಂದು ತಿಳಿಸಿದರು.
ಜಗತ್ತಿನ 150ಕ್ಕಿಂತ ಹೆಚ್ಚು ದೇಶಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡುತ್ತಾರೆ. ಜಗತ್ತಿನಲ್ಲಿ ಅತೀ ಹೆಚ್ಚು ಪುತ್ಥಳಿಗಳು ಇರುವುದು ಅಂಬೇಡ್ಕರ್ ಅವರದ್ದು ಎಂದರು.
ಯಾರಿಂದಲೂ ನಿರೀಕ್ಷೆ ಇಲ್ಲದೆ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಲಿಂಗಾಯತ ಎರಡು ಸಮುದಾಯದ ಜನರು ಸೇರಿ ಒಂದು ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮಾಡಿ ನಿಜವಾದ ಬಸವಣ್ಣನವರ ಅನುಯಾಯಿಗಳಾಗಿ ಬೇರೆಯವರಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
2026ಕ್ಕೆ ಪೂರ್ಣ ಪ್ರಮಾಣದ ಜನಗಣತಿ ಕಾರ್ಯ ನಡೆಯುತ್ತಿದ್ದು, ಎಲ್ಲ ಜನಾಂಗದವರು ತಮ್ಮ ಕುಟುಂಬದ ಸಂಪೂರ್ಣ ಮಾಹಿತಿ ನೀಡಬೇಕು. 1931ರ ನಂತರ ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದ ಜನಗಣತಿ ಮಾಡಲು ಮುಂದಾಗಿದೆ. ಈ ಗಣತಿ ಕಾರ್ಯ 2027ಕ್ಕೆ ಮುಗಿಯಲಿದ್ದು, ಎಲ್ಲರೂ ಸಂಪೂರ್ಣ ಮಾಹಿತಿ ನೀಡಬೇಕು ಎಂದರು.
ಸದ್ಯ ದೇಶದಲ್ಲಿ ಎಸ್‌ಸಿ ಎಸ್‌ಟಿ ಸಮುದಾಯ ಶೇ.30ರಷ್ಟು ಇದೆ ಎನ್ನಲಾಗಿದ್ದು, ಜನಗಣತಿ ಬಳಿಕ ಶೇ.40-45ರಷ್ಟು ಆಗಲಿದೆ. ಇಷ್ಟು ದೊಡ್ಡ ಸಮುದಾಯಕ್ಕೆ ಕೇವಲ ಶೇ.15ರಷ್ಟು ಮೀಸಲಾತಿ ನೀಡಲಾಗಿದ್ದು, ಕೇಂದ್ರ ಸರ್ಕಾರ ಶೇ.21ಕ್ಕೆ ಏರಿಕೆ ಮಾಡುತ್ತೇವೆ ಎನ್ನುತ್ತಿದೆ. ಆದರೆ ಈ ಪ್ರಮಾಣ ಶೇ.31 ಆಗಬೇಕು. ಇದಕ್ಕಾಗಿ ನಾವು ಹೋರಾಟ ಮಾಡಬೇಕು. ಈ ಹೋರಾಟ ಜಕ್ಕಹಳ್ಳಿ ಗ್ರಾಮದಿಂದಲೇ ಆರಂಭವಾಗಲಿ ಎಂದು ಕರೆ ನೀಡಿದರು.
ಇನ್ನು ಗ್ರಾಮಸ್ಥರು ಗ್ರಂಥಾಲಯ ನಿರ್ಮಾಣಕ್ಕೆ ಪ್ರಸ್ತಾವನೆ ನೀಡಿದ್ದು, ನನ್ನ ಅನುದಾನದಿಂದ 10 ಲಕ್ಷ ರೂ. ನೀಡುತ್ತೇನೆ ಎಂದು ಘೋಷಣೆ ಮಾಡಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಉರಿಲಿಂಗಿಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಅಂಬೇಡ್ಕರ್ ಅವರು, ವಿಜೃಂಭಿಸುವ, ಆರಾಧಿಸುವ, ಆಚರಿಸುವ ವಸ್ತುವಲ್ಲ. ಅಂಬೇಡ್ಕರ್ ಎಂದರೆ ಅನುಸರಣೆ. ಅವರನ್ನು ನಾವು ಅನುಸರಿಸಬೇಕು ಎಂದರು.
ಅಂಬೇಡ್ಕರ್ ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಇಂದು ದೇಶದ ಪ್ರತಿಯೊಬ್ಬ ಪ್ರಜೆಯೂ ಅನುಭವಿಸುತ್ತರುವ ಸವಲತ್ತುಗಳು ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಕೊಡುಗೆ ಎಂದರು.
ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಜಕ್ಕಹಳ್ಳಿ ಗ್ರಾಮದವರೆಲ್ಲ ಒಟ್ಟಾಗಿ ಸೇರಿ ಹಣ ಹಾಕಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಿರುವುದು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯಾಗಿದೆ. ಇದು ಸ್ವಾವಲಂಬನೆಯ ಪ್ರತೀಕವಾಗಿದೆ. ಹಾಗಾಗಿ ಈ ಗ್ರಾಮದಲ್ಲಿ ನೈಜ ಅಂಬೇಡ್ಕರ್ ಅನುಯಾಯಿಗಳು ಇದ್ದಾರೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಪತ್ನಿ ಸೌಮ್ಯಾ ಅನಿಲ್, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಮಾಜಿ ಮೇಯರ್ ಪುರುಷೋತ್ತಮ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಮಂಜುನಾಥ್, ವೆಂಕಟಸ್ವಾಮಿ, ಪುರಸಭಾ ಮಾಜಿ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಎಸ್.ವಿ ವೆಂಕಟೇಶ್, ಡಾ.ಶಿವಕುಮಾರ್, ಜಯಪ್ರಕಾಶ್ ಚಿಕ್ಕಣ್ಣ, ಪರಮೇಶ್, ಎನ್.ಸೋಮಯ್ಯ, ಮಲ್ಲೇಶ್, ರವೀಂದ್ರ, ಪುಟ್ಟರಾಜು, ಲಿಂಗಯ್ಯ, ಯೋಗೇಶ್, ಜೆ.ಪಿ. ನಾಗರಾಜು, ಕೆಂಡಗಣ್ಣಸ್ವಾಮಿ, ಯೂಸುಫ್, ಸುರೇಶ್, ಜವರಯ್ಯ, ಮಾಧರಾಜು, ಇಟ್ನ ರಾಜಣ್ಣ, ರಾಜು, ಜಯಲಕ್ಷ್ಮೀ, ಆನಂದ್, ನಾಗರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net