ದೇವರಾಜ ಮಾರುಕಟ್ಟೆ ಕಟ್ಟಡಕ್ಕೆ ಪುನರುಜ್ಜೀವನ ಸ್ಪರ್ಶ ನೀಡಿ: ಸಂಸದ ಯದುವೀರ್

 ದೇವರಾಜ ಮಾರುಕಟ್ಟೆ ವ್ಯಾಪಾರಸ್ಥರೊಂದಿಗೆ ಸಮಾಲೋಚನೆ ನಡೆಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ದೇವರಾಜ ಮಾರುಕಟ್ಟೆ ವ್ಯಾಪಾರಸ್ಥರೊಂದಿಗೆ ಸಮಾಲೋಚನೆ ನಡೆಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
Published on
 ಮೈಸೂರು: ನಗರದ ಪಾರಂಪರಿಕತೆಯ ಸಂಕೇತವಾಗಿರುವ ದೇವರಾಜ ಮಾರುಕಟ್ಟೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವುದನ್ನು ಕೈಬಿಟ್ಟು, ಈಗಿರುವ ಕಟ್ಟಡವನ್ನು ಪುನರುಜ್ಜೀವನಗೊಳಿಸಬೇಕು ಎಂದು  ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯಿಸಿದರು.
ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡಗಳ ಸಂರಕ್ಷಣೆಗೆ ಸುಪ್ರೀಂಕೋರ್ಟ್ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಸ್ಥಳೀಯ ವ್ಯಾಪಾರಿಗಳ ಆಹ್ವಾನದ ಮೇರೆಗೆ ಸೋಮವಾರ ಸಂಜೆ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ವ್ಯಾಪಾರಸ್ಥರೊಂದಿಗೆ ಮಾತುಕತೆ ನಡೆಸಿ ಅಹವಾಲು ಆಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ದೇವರಾಜ ಮಾರುಕಟ್ಟೆಯ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಈ ಮಾರುಕಟ್ಟೆಯ ವ್ಯಾಪಾರಸ್ಥರು ಆಕ್ಷೇಪಿಸಿದ್ದರು. 
ಹಳೆಯ ಕಟ್ಟಡವನ್ನೇ ನವೀಕರಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಮೇ 4ರಂದು ಈ ಉಭಯ ಕಟ್ಟಡ ಕೆಡವಿ ಪುನರ್ ನಿರ್ಮಾಣದ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಈ ಆದೇಶ ಸ್ವಾಗತಾರ್ಹ. ಕೋರ್ಟ್ ಆದೇಶ ಗೌರವಿಸಿ, ವ್ಯಾಪಾರಿಗಳ ನಿರೀಕ್ಷೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು. 
ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ ಪೂರಕವಾಗುವಂತೆ ಕ್ರಮ ವಹಿಸಬೇಕಿದೆ. ನವೀಕರಣದ ಸಂದರ್ಭದಲ್ಲಿ ಆಧುನಿಕ ಸೌಲಭ್ಯ ಒದಗಿಸುವುದಕ್ಕೂ ಆದ್ಯತೆ ನೀಡಬಹುದಾಗಿದೆ. ಆದ್ದರಿಂದ ಸರ್ಕಾರ ಈಗಾಗಲೇ ಹೊಸ ಕಟ್ಟಡ ನಿರ್ಮಾಣಕ್ಕೆ ಮೀಸಲಿಟ್ಟಿರುವ ಅನುದಾನವನ್ನು ನವೀಕರಣ ಕಾರ್ಯಗಳಿಗೆ ವಿನಿಯೋಗಿಸಬೇಕು. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಸ್ಥಳೀಯ ವ್ಯಾಪಾರಸ್ಥರು ಕೂಡ ಕಟ್ಟಡದ ನವೀಕರಣ ಕಾರ್ಯಗಳಿಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧರಿದ್ದಾರೆ. ಕೆಲವು ಭಾಗಗಳನ್ನು ತಾತ್ಕಾಲಿಕವಾಗಿ ಬಿಟ್ಟುಕೊಡಲು ಸಮ್ಮತಿಸಿದ್ದಾರೆ ಎಂದು ಹೇಳಿದರು
ನಗರದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗಾಗಿ ತಾವು ಮೊದಲಿನಿಂದಲೂ ಹೋರಾಟ ನಡೆಸುತ್ತಿದ್ದು, ಈ ವಿಷಯದಲ್ಲಿ 2005ರಿಂದ ಹೋರಾಟ ನಡೆಯುತ್ತಿದ್ದು, ಆಗಲೇ ಕ್ರಮ ಕೈಗೊಂಡಿದ್ದರೆ ಇದೀಗೀ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಹೇಳಿದರು.
ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕೇವಲ ಕಟ್ಟಡಗಳಲ್ಲ, ಇವು ಮೈಸೂರಿನ ಜೀವಂತ ಸಾಂಸ್ಕೃತಿಕ ಮತ್ತು ವಾಣಿಜ್ಯ ಪರಂಪರೆಯನ್ನು ಪ್ರತಿನಿಧಿಸುತ್ತವೆ. ಮೈಸೂರಿನವರೇ ಆದ ಸಿಎಂ ಸಿದ್ದರಾಮಯ್ಯ ಅವರು ಇವುಗಳ ಸಂರಕ್ಷಣೆ ಮತ್ತು ನವೀಕರಣಕ್ಕೆ ಆದ್ಯತೆ ನೀಡಿ, ಅನುದಾನ ಬಿಡುಗಡೆ ಮಾಡಬೇಕು ಎಂದೂ ಆಗ್ರಹಿಸಿದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net